ಬೆಂಗಳೂರು/ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ (Santosh Patil Suicide Case) ಸಂಬಂಧಿಸಿದಂತೆ ನ್ಯಾಯಾಲಯಕ್ಕೆ (Court) ಸಾಕ್ಷ್ಯಗಳು ಸಲ್ಲಿಕೆಯಾಗಿವೆ. ಉಡುಪಿ ಪೊಲೀಸರು ಇಂದು ಜನಪ್ರತಿನಿಧಿಗಳ ಕೋರ್ಟ್, ಸಂತೋಷ್ ಪಾಟೀಲ್ ಅವರ ಎರಡೂ ಮೊಬೈಲ್ ಡಿಟೇಲ್ಸ್, FSL ವರದಿ ಸೇರಿದಂತೆ ಇತರೆ ಸಾಕ್ಷ್ಯಗಳನ್ನು ಸಲ್ಲಿಸಿದರು. ತನಿಖೆ ವೇಳೆ ಪೊಲೀಸರು ಮಾಡಿದ್ದ ವಿಡಿಯೋ ನೀಡಲು ಕೋರ್ಟ್ ಸೂಚಿಸಿತ್ತು. ಅದರಂತೆ ಉಡುಪಿ ಪೊಲೀಸ್ರು(Udupi Police) ಇಂದು (ಜನವರಿ 31) ಸಾಕ್ಷ್ಯ ಸಲ್ಲಿಕೆ ಮಾಡಿದರು. ಇದರಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ(KS Eshwarappa) ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಯಾಗಿದ್ದರು. ಆದ್ರೆ, ಉಡುಪಿ ಟೌನ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಿರಿಪೋರ್ಟ್ನ್ನು ವಕೀಲ ಪ್ರಶಾಂತ್ ಪಾಟೀಲ್ ಎನ್ನುವರು ಪ್ರಶ್ನಿಸಿ ಜನಪ್ರತಿನಿಧಗಳ ನ್ಯಾಯಲಯಕ್ಕೆ ಸರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್, ಪ್ರಶಾಂತ್ ಪಾಟೀಲ್ ಅರ್ಜಿ ಆಧರಿಸಿ ಪ್ರಕರಣದ ಸಾಕ್ಷ್ಯಗಳನ್ನ ನೀಡುವಂತೆ ಉಡುಪಿ ಪೊಲೀಸರಿಗೆ ಸೂಚನೆ ನೀಡಿತ್ತು. ಇದೀಗ ಪೊಲೀಸರು ಸಾಕ್ಷ್ಯಗಳನ್ನ ಕೋರ್ಟ್ಗೆ ಒದಗಿಸಿದ್ದು, ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳನ್ನ ಪರಿಶೀಲಿಸಲು ನ್ಯಾಯಾಲಯ ಪ್ರಶಾಂತ್ ಪಾಟೀಲ್ ವಕೀಲರಿಗೆ ಅವಕಾಶ ನೀಡಿದೆ. ಅಲ್ಲದೇ ಮನವಿ ಮಾಡಿದ್ದ ಎಲ್ಲಾ ಸಾಕ್ಷ್ಯಗಳನ್ನು ನೀಡಲಾಗಿದೆಯಾ ಎಂದು ಖಾತರಿಗೆ ಸೂಚನೆ ನೀಡಿ, ಪ್ರಕರಣ ವಿಚಾರಣೆ ಫೆಬ್ರವರಿ 8ಕ್ಕೆ ಮುಂದೂಡಿದೆ.
ಕೆಲವು ಸಾಕ್ಷ್ಯಗಳ ಮರೆಮಾಚಿ ಬಿ.ರಿಪೋರ್ಟ್ ಹಾಕಿದ್ದಾರೆಂಬ ಆರೋಪ ಮಾಡಲಾಗಿದ್ದು, ಪೋಲಿಸರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ನೆರವಾಗುವಂತೆ ಸಾಕ್ಷ್ಯ ಕೈಬಿಟ್ಟಿದ್ದಲ್ಲಿ ತನಿಖಾಧಿಕಾರಿಗೂ ಸಂಕಷ್ಟ ಸಾದ್ಯತೆ ಇದೆ.
ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದ ಬೆಳಗಾವಿ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ (36) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿದ್ದ ಉಡುಪಿ ಪೊಲೀಸರು, ಕೊಲೆ ಅಥವಾ ಆತ್ಮಹತ್ಯೆ ಪ್ರಚೋದನೆಗೆ ಯಾವುದೇ ಪೂರಕ ದಾಖಲೆಗಳಿಲ್ಲ ಎಂದು ಬೆಂಗಳೂರಿನ ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ (42 ನೇ ಎಸಿಎಂಎಂ) ಅಂತಿಮ ವರದಿ ಸಲ್ಲಿಸಿದ್ದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್‌ನಲ್ಲಿ 2022, ಏಪ್ರಿಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಆತ್ಮೀಯರಿಗೆ, ಮಾಧ್ಯಮ ಸ್ನೇಹಿತರಿಗೆ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಗಂಭೀರವಾಗಿ ಆರೋಪಿಸಿ ಸಂದೇಶ ಕಳುಹಿಸಿದ್ದರು. ಬಳಿಕ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಲ್ಲದೇ ಈಶ್ವರಪ್ಪನವರ ಮಂತ್ರಿಗಿರಿಯನ್ನೇ ಕಿತ್ತುಕೊಂಡಿತ್ತು.