ಉಡುಪಿ: ಅಂತಿಂಥಾ ಅಪಘಾತ ಅಲ್ಲ.. ಸ್ವತಃ ಯಮನೇ ಬಂದು ಬರಸಿಡಿಲಿನಂತೆ ಬಸ್ಗೆ ಅಪ್ಪಳಿಸಿದಂತಿತ್ತು. ಇಡೀ ಬಸ್ ಅನ್ನೇ ಹೊಸಕಿ ಹಾಕಿದಂತಿತ್ತು. ಆ ಭೀಕರ ಹೊಡೆತಕ್ಕೆ ಒಳಗಿದ್ದವರಿಗೆ ದಿಕ್ಕೇ ತಿಳಿದಿಲ್ಲ. ವಿಧಿಯಾಟದ ಮುಂದೆ ಸೋತು ಕೆಲವರು ಘೋರವಾಗಿ ಪ್ರಾಣ ಬಿಟ್ರೆ, ಇನ್ ಕೆಲವರು ಗಾಯಗಳಿಂದ ನರಳಾಡ್ತಿದ್ರು. ಸಹಾಯಕ್ಕಾಗಿ ಅಂಗಲಾಚುತ್ತಿದ್ರು, ರಸ್ತೆಯಲ್ಲಿ ಕುಳಿತು ಗೋಗರೆಯುತ್ತಿದ್ರು.
ನಿಜ.. ಇದೊಂದು ಭೀಕರ ದುರಂತ. ಈ ದೃಶ್ಯಗಳನ್ನು ನೋಡ್ತಿದ್ರೆನೇ ಎಲ್ಲರ ಮನಸು ಕಲಕುತ್ತೆ. ಹೃದಯ ಭಾರವಾಗುತ್ತೆ. ಕಣ್ಣೀರು ತುಂಬಿ ಬರುತ್ತೆ. ಆ ಪರಿ ಘೋರಾತಿಘೋರವಾಗಿ ಜನ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ರು. ಯಾರೂ ಊಹಿಸದ ರೀತಿಯಲ್ಲಿ ಉಸಿರು ಚೆಲ್ಲಿ ಮಲಗಿದ್ರು.
ಪ್ರವಾಸಕ್ಕೆ ಹೊರಟಿದ್ದಾಗಲೇ ನಡೀತು ದುರಂತ..!
ನಿನ್ನೆ ಸಂಜೆ 5.30ರ ಸಮಯ. ಉಡುಪಿ ಜಿಲ್ಲೆಯ ಕುದುರೆಮುಖದ ಸುಂದರ ಪರ್ವತಶ್ರೇಣಿಯ ನಡುವಿನ ಹೆದ್ದಾರಿಯಲ್ಲಿ 35ಜನ್ರನ್ನು ಹೊತ್ತು ಖಾಸಗಿ ಬಸ್ ಬರುತ್ತಿತ್ತು. ಒಳಗಿದ್ದ ಯುವಕ-ಯುವತಿಯರು ಖುಷಿಯಲ್ಲಿದ್ರು. ಮೋಜು-ಮಸ್ತಿ ಮಾಡಿಕೊಂಡು, ಅಂತಾಕ್ಷರಿ ಹಾಡ್ಕೊಂಡು ಎಂಜಾಯ್ ಮಾಡ್ತಿದ್ರು.
ಒಂದೇ ಕಂಪನಿಯ 9 ಉದ್ಯೋಗಿಗಳು ದಾರುಣ ಅಂತ್ಯ:
ಆದ್ರೆ, ಈ ಖುಷಿ ಹೆಚ್ಚು ಹೊತ್ತು ಉಳಿಯಲೇ ಇಲ್ಲ. ಗಾಟಿಯಿಂದಿಳಿದು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಅಷ್ಟೇ.. ರಸ್ತೆಯ ಎಡಗಡೆ ಇದ್ದ ತಡೆಗೋಡೆಗೆ ಗುದ್ದಿದೆ. ಸ್ವಲ್ಪ ದೂರ ಬಂಡೆಯಿಂದ ಬಂಡೆಗೆ ಉಜ್ಜಿಕೊಂಡೇ ಹೋಗಿದೆ. ಇದ್ರ ಪರಿಣಾಮ ಬಸ್ನಲ್ಲಿದ್ದ ಒಂದೇ ಕಂಪನಿಯ 9 ಮಂದಿ ಉದ್ಯೋಗಿಗಳು ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.
ಮೈಸೂರಿಂದ ಪ್ರಯಾಣ.. ಉಡುಪಿಯಲ್ಲಿ ಮರಣ..!
ಫೆಬ್ರವರಿ 14ರಂದು ಮೈಸೂರಿನಿಂದ 35 ಜನ ಪ್ರವಾಸಕ್ಕೆ ತೆರಳಿದ್ರು. ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರೂ ಟ್ರಿಪ್ಗೆ ಹೋಗಿದ್ರು. ಶೃಂಗೇರಿ, ಹೊರನಾಡು ಕಳಸ ಸುತ್ತಾಡಿದ್ದಾರೆ.
ಅಲ್ಲಿಂದ ಉಡುಪಿ ಜಿಲ್ಲೆಯ ಮಲ್ಪೆ ಬೀಚ್ಗೆ ಹೊರಟಿದ್ರು. ಆದ್ರೆ ಮಾರ್ಗಮಧ್ಯೆ ವಿಧಿ ಅಟ್ಟಹಾಸ ಮೆರೆದಿದೆ. ಮೃತರನ್ನು ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ರಾಧಾ ರವಿ, ಯೋಗೇಂದ್ರ, ಪ್ರೀತಂಗೌಡ, ಬಸವರಾಜು, ಅನುಜ್ಞಾ, ಪಿ.ರಂಜಿತಾ, ಶಾರೋಲ್, ಚಾಲಕ ಮಾರುತಿ ಅಂತಾ ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರೋ 25ಜನರಿಗೆ ಕಾರ್ಕಳದ ಸಿಟಿ ಆಸ್ಪತ್ರೆ, ಕಾರ್ಕಳ ಸರ್ಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಪೊಲೀಸರ ತಂಡ ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದೆ. ಈ ಅಪಘಾತಕ್ಕೆ ಕಿರಿದಾದ ರಸ್ತೆಯೇ ಕಾರಣ ಅಂತಾ ಹೇಳಲಾಗ್ತಿದೆ. ಸದ್ಯ ಅಪಘಾತ ಸ್ಥಳದಲ್ಲಿ ಇದ್ದ ಬಸ್ನ್ನು ತೆರವುಗೊಳಿಸಲಾಗಿದೆ. ಅದೇನೆ ಇರಲಿ, ಪ್ರವಾಸಕ್ಕೆ ಹೋದ 9 ಮಂದಿ ಸಾವಿನ ಮನೆ ಸೇರಿದ್ದು ನಿಜಕ್ಕೂ ಘೋರ.
Published On - 2:45 pm, Sun, 16 February 20