ಅ.15ಕ್ಕೆ ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ, ದ್ರಾವಿಡ ದೊರೆ ಮಹಿಷ ಬಗ್ಗೆ ಜಾಗೃತಿ ಕಾರ್ಯಕ್ರಮ

|

Updated on: Oct 05, 2023 | 11:51 AM

ಈ ಹಿಂದೆ ಮೈಸೂರಿನಲ್ಲಿ ಆಚರಿಸಲಾಗುತ್ತಿದ್ದ ಮಹಿಷ ದಸರಾವನ್ನು ಅಕ್ಟೋಬರ್ 15 ರಂದು ನವರಾತ್ರಿ ಆರಂಭವಾದಾಗ ಉಡುಪಿಯಲ್ಲಿ ಆಚರಿಸಲು ಅಂಬೇಡ್ಕರ್ ಯುವ ಸೇನೆ ಮುಂದಾಗಿದೆ. ದ್ರಾವಿಡ ದೊರೆ ಮಹಿಷಾಸುರನ ಬಗ್ಗೆ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಮಹಿಷಾ ದಸರಾ ಮತ್ತು ಮೂಲ ನಿವಾಸಿಗಳ ಸಾಂಸತಿಕ ಹಬ್ಬ ಆಚರಿಸುವುದಾಗಿ ಅಂಬೇಡ್ಕರ್ ಯುವ ಸೇನೆ ತಿಳಿಸಿದೆ.

ಅ.15ಕ್ಕೆ ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ, ದ್ರಾವಿಡ ದೊರೆ ಮಹಿಷ ಬಗ್ಗೆ ಜಾಗೃತಿ ಕಾರ್ಯಕ್ರಮ
ಮಹಿಷಾ
Follow us on

ಉಡುಪಿ, ಅ.05: ಮೈಸೂರು ದಸರಾ (Mysuru Dasara) ಸಂಭ್ರಮ ಕಣ್ತುಂಬಿಕೊಳ್ಳಲು ಇಡೀ ರಾಜ್ಯ ಕಾತುರದಿಂದ ಎದುರು ನೋಡುತ್ತಿದೆ. ಇದರ ನಡುವೆ ಮಹಿಷ ದಸರಾ (Mahisha Dasara) ವಿರುದ್ಧ ಮೈಸೂರು ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದು ಮಹಿಷ ದಸರಾ ಅಸಹ್ಯ, ಅಬದ್ಧ ಹಾಗೂ ಅನೈತಿಕ ಇದನ್ನು ನಾವು ತಡೆದೇ ತಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಮತ್ತೊಂದೆಡೆ ಅ.15ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾವನ್ನು ಆಚರಿಸಲು ಮುಂದಾಗಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಮೈಸೂರಿನಲ್ಲಿ ಆಚರಿಸಲಾಗುತ್ತಿದ್ದ ಮಹಿಷ ದಸರಾವನ್ನು ಅಕ್ಟೋಬರ್ 15 ರಂದು ನವರಾತ್ರಿ ಆರಂಭವಾದಾಗ ಉಡುಪಿಯಲ್ಲಿ ಆಚರಿಸಲು ಅಂಬೇಡ್ಕರ್ ಯುವ ಸೇನೆ ಮುಂದಾಗಿದೆ. ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದ್ರಾವಿಡ ದೊರೆ ಮಹಿಷಾಸುರನ ಬಗ್ಗೆ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಮಹಿಷಾ ದಸರಾ ಮತ್ತು ಮೂಲ ನಿವಾಸಿಗಳ ಸಾಂಸತಿಕ ಹಬ್ಬ ಆಚರಿಸುವುದಾಗಿ ಮಾಹಿತಿ ನೀಡಿದರು.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ ವಿವಾದ: ಅ. 13ರಂದು ಚಾಮುಂಡಿ ಬೆಟ್ಟ ಚಲೋಗೆ ಪ್ರತಾಪ್ ಸಿಂಹ ಕರೆ

ಅ.15ರಂದು ಬೆಳಗ್ಗೆ 10.30ಕ್ಕೆ ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ವಿವಿಧ ವಾಹನ ಜಾಥಾದೊಂದಿಗೆ ಮಹಿಷ ಟ್ಯಾಬ್ಲೋ ಮೆರವಣಿಗೆ ಹೊರಟು ಜೋಡು ಮಾರ್ಗವಾಗಿ ಬನ್ನಂಜೆ ಮೂಲಕ ಕರಾವಳಿ ಬೈಪಾಸ್​ನಿಂದ ಆದಿ ಉಡುಪಿ ಜಿಲ್ಲಾ ಅಂಬೇಡ್ಕರ್​ ಭವನ ತಲುಪಲಿದೆ. ಕಲಬುರಗಿಯ ಸಂಶೋಧನಾ ಬರಹಗಾರ ಡಾ. ವಿಠಲ ವಗ್ಗನ್​ ಮಹಿಷಾಸುರ ಯಾರು ಎಂಬ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಚಿಂತಕ ನಾರಾಯಣ ಮಾಣೂರು ಭಾಗವಹಿಸಲಿದ್ದಾರೆ ಎಂದು ಹರೀಶ್ ತಿಳಿಸಿದರು.

ಇನ್ನು ಕೆಲ ಮೇಲ್ವರ್ಗದವರು ಮಹಿಷನನ್ನು ರಾಕ್ಷಸ ಎಂದು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಆದರೆ ಮಹಿಷ ಒಬ್ಬ ಐತಿಹಾಸಿಕ ಚಕ್ರವರ್ತಿಯಾಗಿದ್ದನು. ಆದ್ದರಿಂದ ಮಹಿಷ ದಸರಾವು ಸ್ಥಳೀಯ ಜನರ ಸಾಂಸ್ಕೃತಿಕ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಹಿಷ ಸಾಮ್ರಾಜ್ಯದ ಆಡಳಿತಗಾರನ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶ ನಮ್ಮದು. ಮಹಿಷಾಸುರ ಪರಂಪರೆಯನ್ನು ಸಾಕಾರಗೊಳಿಸಲು ಹಾಗೂ ವೈದಿಕ ಸಂಸ್ಕೃತಿಗೆ ಪರ್ಯಾಯ ಸಂಸ್ಕೃತಿಯನ್ನು ರೂಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹರೀಶ್ ತಿಳಿಸಿದರು.

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:41 am, Thu, 5 October 23