
ಉಡುಪಿ, ಜನವರಿ 05: ಭಾರಿ ವಿವಾದಕ್ಕೆ ಕಾರಣವಾಗಿ ಪಾಳುಬಿದ್ದಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿನ ಪರಶುರಾಮ ಥೀಂ ಪಾರ್ಕ್ನನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಟ್ಟಡದ ಬಾಗಿಲನ್ನು ಮುರಿದು ಒಳ ನುಗ್ಗಿರುವ ಚಾಲಾಕಿಗಳು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿತ್ತು. ಪರಶುರಾಮ ಪ್ರತಿಮೆ ವಿಚಾರವಾಗಿ ಅವ್ಯವಹಾರ ಆರೋಪ ಕೇಳಿಬಂದಿದ್ದ ಹಿನ್ನೆಲೆ ತನಿಖೆಯೂ ನಡೆದಿತ್ತು. ಅನುದಾನವಿಲ್ಲದೆ ಸದ್ಯ ಥೀಂಪಾರ್ಕ್ ಪಾಳು ಬಿದ್ದಿದ್ದು, ಇಲ್ಲಿನ ವಸ್ತುಗಳು ಕಳ್ಳಕಾಕರ ಪಾಲಾಗತೊಡಗಿವೆ.
ಘಟನೆ ಬೆನ್ನಲ್ಲೇ ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಥೀಂ ಪಾರ್ಕ್ಗೆ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿದ್ದಾರೆ. ಈ ಸ್ಥಳಕ್ಕೆ ಎರಡೂವರೆ ವರ್ಷಗಳ ಬಳಿಕ ಶಾಸಕರು ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿ ನೋಡಿ ಬೇಸರ ಹೊರಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಕಾರ್ಕಳದ ಇತಿಹಾಸಕ್ಕೆ ಇದು ದುರ್ದೈವ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ. ಪರಶುರಾಮ ಥೀಂ ಪಾರ್ಕ್ ಈಗ ಅನೈತಿಕ ಚಟುವಟಿಕೆಯ ತಾಣವಾಗುತ್ತಿದ್ದು, ಬಿಜೆಪಿ ಸರಕಾರ ಮಂಜೂರು ಮಾಡಿದ ನಾಲ್ಕೂವರೆ ಕೋಟಿ ಹಣ ಇನ್ನೂ ಬರಬೇಕಿದೆ. ತಕ್ಷಣ ಈ ಹಣ ಬಿಡುಗಡೆ ಮಾಡಿ, ಥೀಂ ಪಾರ್ಕ್ಗೆ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣ; ಶಿಲ್ಪಿ ಬಂಧನ
ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್ ರೀತಿ ಇಲ್ಲೊಂದು ಫೈಬರ್ ಗ್ಯಾಂಗ್ ಇದೆ. ಎಲ್ಲ ಕಾಮಗಾರಿಗಳು ದಾಖಲೆ ಪ್ರಕಾರವೇ ನಡೆದಿದೆ. ಇದು ಫೈಬರ್ ಪ್ರತಿಮೆ ಅಲ್ಲ ಅನ್ನೋದು ಚಾರ್ಜ್ಶೀಟ್ನಲ್ಲಿ ಸ್ಪಷ್ಟವಾಗಿದ್ದು, ವಿವಾದಗಳು ಅಲ್ಲಿಗೆ ಮುಗಿದಿವೆ. ಹೀಗಾಗಿ ಇನ್ನೂ ರಾಜಕೀಯ ಮಾಡುವುದು ಬೇಡ. ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡೋಣ. ರಾಜಕೀಯ ಕಾರಣಕ್ಕೆ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವ ಮುಂಚೆ ಎಚ್ಚೆತ್ತುಕೊಳ್ಳಿ . ಜೊತೆಗೆ ಮುಂದಿನ ಮಸ್ತಕಾಭಿಷೇಕದ ವೇಳೆ ಪ್ರವಾಸಿಗರು ಇಲ್ಲಿಗೆ ಬರುವಂತಾಗಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.