ಉಡುಪಿ: ಮಕ್ಕಳಿಗೂ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ಅಂತಿಮ ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯದ 2ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅದಮಾರು ಗ್ರಾಮದಲ್ಲಿ ಹೇಳಿಕೆ ನೀಡಿದ ಬೊಮ್ಮಾಯಿ, ರಾಜ್ಯದಲ್ಲಿ ಶೇ 82ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶೇ 90ರಷ್ಟು ಜನರಿಗೆ ಮೊದಲ ಡೋಸ್ ಕೊಡುತ್ತೇವೆ. ಈ ಹೊತ್ತಿಗೆ ಶೇ 70ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗುವುದು. 2ರಿಂದ 18 ವರ್ಷದೊಳಗಿನ ಮಕ್ಕಳ ರಕ್ಷಣೆಯ ಬಗ್ಗೆಯೂ ನಾವು ಗಮನ ಹರಿಸಬೇಕಿದೆ. ಈ ಬಗ್ಗೆ ಅಂತಿಮ ನಿರ್ಧಾರ ಆದ ತಕ್ಷಣ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಕೊಡುತ್ತೇವೆ ಎಂದು ವಿವರಿಸಿದರು.
ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಕಾಪು ಪಟ್ಟಣದ ಮಾರಿ ಗುಡಿಗೆ ಭೇಟಿ ನೀಡಿ, ನವರಾತ್ರಿ ಸಂದರ್ಭದ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು. ರಾಜ್ಯದ ಸಮೃದ್ಧಿ ಮತ್ತು ಕೊರೊನಾ ನಿವಾರಣೆಗೆ ಮುಖ್ಯಮಂತ್ರಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದಲ್ಲಿ ಈಗಾಗಲೇ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಸರ್ಕಾರದ ಚಿಂತನೆ ನಡೆಸಿದೆ. ಇತರ ರಾಜ್ಯಗಳಲ್ಲಿ ಜಾರಿ ಮಾಡಿರುವ ಕಾನೂನುಗಳ ಅಧ್ಯಯನ ಮಾಡುತ್ತಿದ್ದೇವೆ. ಆದಷ್ಟು ಬೇಗ ಮತಾಂತರ ನಿಷೇಧಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದು ನುಡಿದರು. ಕಾಂಗ್ರೆಸ್ ನಾಯಕರ ರಹಸ್ಯ ಮಾತುಕತೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.
ಕೊರೊನಾ ನಿಯಂತ್ರಣದಲ್ಲಿ ರಾಜ್ಯದಿಂದ ಮತ್ತೊಂದು ಮೈಲಿಗಲ್ಲು
ರಾಜ್ಯದಲ್ಲಿ ಇಂದಿಗೆ 6 ಕೋಟಿ ಡೋಸ್ ಲಸಿಕೆ ನೀಡಿದಂತೆ ಆಗುತ್ತದೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಕಡಿಮೆಯಾಗಿದೆ. ಶೇ 40ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ. ಶೇ 83ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಂತಹಂತವಾಗಿ ಮಕ್ಕಳಿಗೆ ಕೊರೊನಾ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಪವರ್ ಕಟ್ ಇಲ್ಲ; ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡುತ್ತೇವೆ: ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ನಾಲ್ಕು ಕಾಲೇಜುಗಳಿಗೆ ಅನುಮತಿ: ಬಸವರಾಜ ಬೊಮ್ಮಾಯಿ