
ಉಡುಪಿ, ಜನವರಿ 11: ಕಾರ್ಕಳದ ಉಮಿಕಲ್ ಬೆಟ್ಟದ ಮೇಲಿರುವ ಪರಶುರಾಮ ಥೀಮ್ ಪಾರ್ಕ್ (parashurama theme park) ತಾಮ್ರ ಹೊದಿಕೆ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ (arrest). ಮಂಗಳೂರು ಮೂಲದ ಆರಿಫ್(37) ಮತ್ತು ಅಬ್ದುಲ್ ಹಮೀದ್(32) ಬಂಧಿತರು. ಬಂಧಿತರಿಂದ 45 ಸಾವಿರ ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, ಎರಡು ಸೀಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋ, ಬೈಕ್ ವಶಕ್ಕೆ ಪಡೆಯಲಾಗಿದ್ದು, ಇತರೆ ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಮುಂದುವರಿದಿದೆ.
ಪ್ರತಿಮೆಯ ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಯೋಜನಾ ಸ್ಥಳವನ್ನು ಮುಚ್ಚಲಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ದುಷ್ಕರ್ಮಿಗಳು, ಪರಶುರಾಮ ಸನ್ನಿಧಾನದ ಮೇಲ್ಚಾವಣಿಯಿಂದ ತಾಮ್ರದ ತಗಡುಗಳನ್ನು ಎಗರಿಸಿದ್ದರು. ಜನವರಿ 3ರಂದು ಘಟನೆ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 3 ತಂಡ ರಚಿಸಿ ತನಿಖೆ ನಡೆಸಿದ್ದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿ ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್ ನ ಬ್ರದರ್ಸ್..!
ಥೀಂಪಾರ್ಕ್ ಪಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್.
ಕಳೆದ ವಾರ ಥೀಂ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ. 1/4— Sunil Kumar Karkala (@karkalasunil) January 11, 2026
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಪರಶುರಾಮ ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್ನ ಬ್ರದರ್ಸ್..! ಥೀಂಪಾರ್ಕ್ ಪಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್. ಕಳೆದ ವಾರ ಥೀಂ ಪಾರ್ಕ್ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.
‘ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ, ಮೊಘಲರು ಒಡೆದರೆ ಥೀಂ ಪಾರ್ಕ್ನ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು. ಕಾರ್ಕಳ ಕಾಂಗ್ರೆಸ್ ಮಖಂಡರು ಈಗ ಏನೆನ್ನುತ್ತಾರೆ? ಪರಶುರಾಮ ಸೃಷ್ಟಿ ಎಂದು ಹೆಸರಾದ ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತುಗಳು ಇರಬಾರದು ಎಂದು ಥೀಂ ಪಾರ್ಕ್ ಕಾಮಗಾರಿಯನ್ನು ನೀವು ಅರ್ಧಕ್ಕೆ ನಿಲ್ಲಿಸಿದ್ದಿರಿ’ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Udupi: ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್ನ ತಾಮ್ರದ ತಗಡಿಗೆ ಕನ್ನ
‘ಹಿಂದು ಭಾವನೆಗಳಿಗೆ ಘಾಸಿ ಮಾಡಿರುವ ಜತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ ನಿಮ್ಮ ತಪ್ಪು ಮುಂದಿನ ಚುನಾವಣೆಯವರೆಗಲ್ಲ, ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅಧಃಪತನದ ಕ್ಷಣಗಣನೆ ಪ್ರಾರಂಭ’ ಎಂದು ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.