ಉಡುಪಿ, ಮೇ.23: ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಸೂರ್ಯನ ಬಿಸಿ ತಾಪಕೆ ಸಣ್ಣ ಹಿಡಿಯು ಕೂಡ ದೊಡ್ಡ ಕೆನ್ನಾಲಿಗೆಯಾಗಿ ಸುತ್ತಮುತ್ತಲಿನ ಪ್ರದೇಶವನ್ನು ದಹಿಸಲು ಅನುಕೂಲವಾಗುವಂತ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಇತ್ತೀಚಿಗೆ ಉಡುಪಿ(Udupi) ನಗರದಿಂದ ಸ್ವಲ್ಪ ದೂರದಲ್ಲಿರುವ ಮಲ್ಪೆ ಬಳಿ ಅಗ್ನಿ ಆಕಸ್ಮಿಕವನ್ನು ನಡೆದಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು(Fire fighters) ಬಂದು ಗಮನಿಸಿದ್ದಾರೆ. ಆದರೆ, ಬೆಂಕಿ ನಂದಿಸಲು ಸೂಕ್ತ ವಾಹನದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಜೊತೆ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸಬೇಕಾದ ಪ್ರಮೇಯ ಎದುರಾಯಿತು.
ಹಾಗಂತ ಮಲ್ಪೆಯಲ್ಲಿ ಅಗ್ನಿಶಾಮಕ ದಳದ ಘಟಕ ಇಲ್ಲ ಅಂತೇನಿಲ್ಲ. ಮಲ್ಪೆ ಬಂದರಿನ ಒಳಗಡೆ ಸರ್ವ ಸುಸಜ್ಜಿತವಾದ ಅಗ್ನಿಶಾಮಕ ದಳದ ಕಚೇರಿ ಇದೆ. ವರ್ಷದ 365 ದಿನವೂ, ದಿನದ 24 ಗಂಟೆಯೂ ಕೂಡ ಕರ್ತವ್ಯ ನಿರ್ವಹಿಸಲು ಶಕ್ತರಾಗಿರುವ ಸಿಬ್ಬಂದಿಗಳು ಕೂಡ ಇಲ್ಲಿದ್ದಾರೆ. ಆದರೆ, ಈ ಅಗ್ನಿಶಾಮಕ ಘಟಕದಲ್ಲಿರುವ ಎರಡು ವಾಹನಗಳು ಕೂಡ ನಿಷ್ಪ್ರಯೋಜಕವಾಗಿದ್ದು, ಎಲ್ಲಿಯಾದರೂ ಅಗ್ನಿ ಆಕಸ್ಮಿಕ ಸಂಭವಿಸಿದ ಕರೆ ಬಂದರೆ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳು ಕೂಡ ಮೇಲೆ ಕೆಳಗೆ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಇದನ್ನೂ ಓದಿ:ಅಗ್ನಿಶಾಮಕ ದಳದ ಮಹಾ ಎಡವಟ್ಟು! ಬೆಂಕಿ ನಂದಿಸಲು ಆಗಮಿಸಿದ್ದ ವಾಹನದಲ್ಲಿಯೇ ನೀರಿಲ್ಲ
ಸುಮಾರು 2500 ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ನೆಲೆ ಕಾಣುವ ಮಲ್ಪೆ ಬಂದರಿನ ಒಳಗಡೆ ಈ ಘಟಕವಿದ್ದು, ಸದ್ಯ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಘಟಕ ಪ್ರಾರಂಭವಾದಾಗ ಬಳಸುತ್ತಿದ್ದ ಅಗ್ನಿಶಾಮಕ ವಾಹನ ಸದ್ಯ ಗುಜರಿ ಹಂತ ತಲುಪಿದ್ದು, ಬಾಗಿಲು ಕೂಡ ತೆಗೆಯಲಾರದ ಪರಿಸ್ಥಿತಿಯಲ್ಲಿದೆ. ಇನ್ನು ಇನ್ನೊಂದು ವಾಹನ 15 ವರ್ಷಗಳ ಕಾಲ ಸೇವೆ ಗೆ ಸಿಕ್ಕಿದ್ದು, ಸದ್ಯ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸರಕಾರ ಸೇವೆಯಿಂದ ಹಿಂದೆ ಪಡೆದಿದೆ. ಏಷ್ಯಾದ ಅತಿ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳಿವೆ. ಯಾವಾಗಲೂ ಸಣ್ಣ ಪುಟ್ಟ ಅಗ್ನಿ ಆಕಸ್ಮಿಕಗಳು ಸಂಭವಿಸುತ್ತಲೇ ಇರುವ ಈ ಬಂದರಿನಲ್ಲಿ, ಅಗ್ನಿಶಾಮಕ ದಳದ ಘಟಕ ಅತಿ ಅಗತ್ಯ. ಆದರೆ, ಈಗ ಅಗ್ನಿಶಾಮಕ ದಳದ ಘಟಕ ಇದ್ದರೂ ಕೂಡ ತುರ್ತು ಸಂದರ್ಭದಲ್ಲಿ ಬಳಸಲಾಗದ ಸ್ಥಿತಿಯಲ್ಲಿದೆ.
ಎಲ್ಲಿಯಾದರೂ ಬಂದರಿನಲ್ಲಿ ನಿಲ್ಲಿಸಲಾಗಿರುವ ಬೋಟಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ ಬೆಂಕಿ ಆವರಿಸಿ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಂಭವವಿದೆ. ಹೀಗಾಗಿ ತಕ್ಷಣಕ್ಕೆ ಒಂದು ಅಗ್ನಿಶಾಮಕ ವಾಹನವನ್ನು ಇಲ್ಲಿಗೆ ಬರುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳಿಗೆ ನೀಡುವ ವ್ಯವಸ್ಥೆಗಳಂತೆ ಅಗ್ನಿಶಾಮಕ ದಳಕ್ಕೂ ಕೂಡ ಕಾರ್ಯಕರ್ತ ಕಲ್ಪಿಸಿದರೆ ಮಾತ್ರ ತುರ್ತು ಸಂದರ್ಭದಲ್ಲಿ ನೆರವಿಗೆ ಬರುವಂತಾಗುತ್ತದೆ. ಇಲ್ಲವಾದರೆ ಮಲ್ಪೆಯ ಅಗ್ನಿಶಾಮಕ ದಳದ ಘಟಕದಂತೆ ಸಿಬ್ಬಂದಿಗಳು ಇದ್ದರೂ ಕೂಡ ಕೆಲಸಕ್ಕೆ ಅಗತ್ಯವಾದ ವಾಹನವಿಲ್ಲದೆ ಪರದಾಡುವಂಥಾಗುತ್ತದೆ, ಹೀಗಾಗಿ ಅತಿ ಶೀಘ್ರದಲ್ಲಿ ಇಲ್ಲ ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವುದು ನಮ್ಮ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ