ಕುಂದಾಪುರ: ಲಂಚ ಪ್ರಕರಣದಲ್ಲಿ ಕೋಟಾ ಮಾಜಿ ಎಸ್​​​ಐ ಅಮಾನತು

| Updated By: Ganapathi Sharma

Updated on: Dec 11, 2023 | 10:47 AM

ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ನೀಡಲು ಕೋಟ ಠಾಣೆಯ ಅಂದಿನ ಠಾಣಾಧಿಕಾರಿ ಶಂಭುಲಿಂಗಯ್ಯ ಲಂಚ ಪಡೆದಿದ್ದರು. ಶಂಭುಲಿಂಗಯ್ಯ ಅವರು ಲಂಚದ ಮೊತ್ತವನ್ನು ತಮ್ಮ ಹತ್ತಿರದ ಸಂಬಂಧಿಯೊಬ್ಬರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.

ಕುಂದಾಪುರ: ಲಂಚ ಪ್ರಕರಣದಲ್ಲಿ ಕೋಟಾ ಮಾಜಿ ಎಸ್​​​ಐ ಅಮಾನತು
ಸಾಂದರ್ಭಿಕ ಚಿತ್ರ
Follow us on

ಕುಂದಾಪುರ, ಡಿಸೆಂಬರ್ 11: ಲಂಚ ಪ್ರಕರಣಕ್ಕೆ (Bribery Case) ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯ (Kota Police Station) ಮಾಜಿ ಎಸ್‌ಐ, ಪ್ರಸ್ತುತ ಕಾರ್ಕಳದಲ್ಲಿ ಒಒಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಭುಲಿಂಗಯ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

ಕಾಲೇಜೊಂದರ ಆಡಳಿತ ಸಮಿತಿಯೊಳಗಿನ ಕೆಲ ವೈಷಮ್ಯಕ್ಕೆ ಸಂಬಂಧಿಸಿದಂತೆ ಶಂಬುಲಿಂಗಯ್ಯ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್ ಮಾಡುವ ಮೂಲಕ ಸಾಮಾಜಿಕ ಕಾರ್ಯಕರ್ತರೊಬ್ಬರು ಮೂಲಕ ಆರೋಪಿಸಿದ್ದರು.

ಮಧು ಭಾಸ್ಕರ್ ಮತ್ತು ಮಹಿಮಾ ಮಧು ಭಾಸ್ಕರ್ ಅವರು ಅಚ್ಲಾಡಿಯಲ್ಲಿ ನಡೆಸುತ್ತಿರುವ ಖಾಸಗಿ ಕಾಲೇಜಿನ ಆಡಳಿತ ಸಮಿತಿಯ ನಡುವಿನ ಸಮಸ್ಯೆಗೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರು ದಾಖಲಿಸಿದ್ದರು. ಮಧು ಭಾಸ್ಕರ್ ವಿರುದ್ಧ ದೂರು ದಾಖಲಿಸಲು ಹಾಗೂ ಮಹಿಮಾ ಮಧು ಭಾಸ್ಕರ್ ನೀಡಿದ ದೂರಿಗೆ ಬಿ ರಿಪೋರ್ಟ್ ನೀಡಲು ಕೋಟ ಠಾಣೆಯ ಅಂದಿನ ಠಾಣಾಧಿಕಾರಿ ಶಂಭುಲಿಂಗಯ್ಯ ಲಂಚ ಪಡೆದಿದ್ದರು. ಶಂಭುಲಿಂಗಯ್ಯ ಅವರು ಲಂಚದ ಮೊತ್ತವನ್ನು ತಮ್ಮ ಹತ್ತಿರದ ಸಂಬಂಧಿಯೊಬ್ಬರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.

ಇದನ್ನೂ ಓದಿ: ಉಡುಪಿ ನೇಜಾರಿನಲ್ಲಿ ನಾಲ್ವರ ಅಮಾನುಷ ಹತ್ಯೆ ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆ: ಗ್ರಾಮಸ್ಥರ ಆಕ್ರೋಶ

ಠಾಣಾಧಿಕಾರಿ ಶಂಭುಲಿಂಗಯ್ಯ ಅವರನ್ನು ಅಮಾನತು ಮಾಡುವಂತೆ ಮಾನವ ಹಕ್ಕುಗಳ ಆಯೋಗದ ರಾಜ್ಯ ಮುಖ್ಯಸ್ಥ ದಿನೇಶ್ ಗಾಣಿಗ ಅವರು ವಿಡಿಯೋ ಮೂಲಕ ಎಸ್‌ಪಿಗೆ ಮನವಿ ಮಾಡಿದ್ದು, ಆರೋಪದ ಬಗ್ಗೆ ದಾಖಲೆ ಸಲ್ಲಿಸಬಹುದು ಎಂದು ಭರವಸೆ ನೀಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.

ಈ ಹಿಂದೆ ಶಂಭುಲಿಂಗಯ್ಯ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ವರ್ಗಾವಣೆ ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Mon, 11 December 23