ವಿದ್ಯಾರ್ಥಿಗಳೇ ಇಲ್ಲದೆ ಭಣಗುಡುತ್ತಿದ್ದ ಸರ್ಕಾರಿ ಶಾಲೆ, ಈಗ ಅಕ್ಷರಶಃ ರೈಲ್ವೆ ನಿಲ್ದಾಣದಂತೆ ಗಿಜಿಗುಡುತ್ತಿದೆ! ಕಾರಣವೇನು?

| Updated By: ಸಾಧು ಶ್ರೀನಾಥ್​

Updated on: Jan 02, 2023 | 2:24 PM

ಮರಳಿ ಪ್ರಚಾರಕ್ಕೆ ಬಂದ ಶಾಲೆ ಸೆಲ್ಫಿ ಸ್ಪಾಟ್ ಆಗಿ ಪರಿವರ್ತನೆಯಾಗಿದ್ದಲ್ಲದೇ ಪೋಷಕರನ್ನು ತನ್ನತ್ತ ಸೆಳೆಯಿತು. ಸದ್ಯ ವರ್ಷದಿಂದ ವರ್ಷಕ್ಕೆ ಶಾಲೆ ಸ್ವಲ್ಪವೇ ಅಭಿವೃದ್ಧಿಯಾಗುವ ಜೊತೆಗೆ ಮಕ್ಕಳ ಸಂಖ್ಯೆಯಲ್ಲೂ ಏರಿಕೆಯಾಗಿ ಈ ವರ್ಷ ಸುಮಾರು 250 ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ವಿದ್ಯಾರ್ಥಿಗಳೇ ಇಲ್ಲದೆ ಭಣಗುಡುತ್ತಿದ್ದ ಸರ್ಕಾರಿ ಶಾಲೆ, ಈಗ ಅಕ್ಷರಶಃ ರೈಲ್ವೆ ನಿಲ್ದಾಣದಂತೆ ಗಿಜಿಗುಡುತ್ತಿದೆ! ಕಾರಣವೇನು?
8 ಮಕ್ಕಳಿಗೆ ಬಂದು ನಿಂತಿದ್ದ ಶಾಲೆಯಲ್ಲಿಂದು 250 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ!
Follow us on

ಕಳೆದ ಐದಾರು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಇದ್ದಿದ್ದು ಕೇವಲ 8 ಮಂದಿ ವಿದ್ಯಾರ್ಥಿಗಳು (students) ಮಾತ್ರ. ಒಂದರಿಂದ ಏಳರ ವರೆಗೆ ತರಗತಿಗಳಿರುವ ಶಾಲೆಯಲ್ಲಿ ತರಗತಿಗೊಂದರಂತೆ ವಿದ್ಯಾರ್ಥಿಗಳಿದ್ದಿದ್ದನ್ನು ನೋಡಿ ಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ಆದರೆ ಸ್ಥಳೀಯರ ಹೋರಾಟ ಶಾಲಾಭಿವೃದ್ಧಿ ಸಮಿತಿಯ ಸಂಘಟನೆ, ಶಿಕ್ಷಕರ ಶ್ರಮದ ಫಲ ಸ್ವರೂಪ ಇಂದು ಶಾಲೆಯಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ. ಹೌದು ಇದು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿರುವ ನಾಗೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ತಾನಿ ಶಾಲೆ (Nagur Government Primary Hindustani School). 1973ರಲ್ಲಿ ಪ್ರಾರಂಭವಾದ ಈ ಶಾಲೆಗೆ ಸುತ್ತಮುತ್ತ ಮಕ್ಕಳು ವಿದ್ಯಾರ್ಜನೆಗೆ ಬರುತ್ತಿದ್ದು, 2014-15 ರ ಸುಮಾರಿಗೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿತ್ತು. ಇದೇ ಪರಿಸರದಲ್ಲಿ ದೊಡ್ಡ ಇಂಗ್ಲೀಷ್ ಮೀಡಿಯಾ ಶಾಲೆ ತಲೆ ಎತ್ತಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೀಷ್ ಮೀಡಿಯಂ ವ್ಯಾಮೋಹಕ್ಕೆ ಒಳಗಾದ ಕೆಲವು ಪೋಷಕರು ಕನ್ನಡ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡಿಸಿ ಹೊಸ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ ದಾಖಲು ಮಾಡಿದ್ದರು.

ಇದರಿಂದಾಗಿ ಹಿಂದೂಸ್ಥಾನಿ ಶಾಲೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ದಾಖಲಾತಿ ಆಗುತ್ತಾ ಕೊನೆಯಲ್ಲಿ 8 ಮಕ್ಕಳಿಗೆ ಬಂದು ನಿಂತು ಶಾಲೆಯೇ ಮುಚ್ಚುವ ಸ್ಥಿತಿಗೆ ತಲುಪಿತ್ತು. ಈ ಸಂದರ್ಭ ಶಾಲೆಗೆ ಬಂದ ಪ್ರಭಾರ ಹೊಸ ಶಿಕ್ಷಕರು ಮತ್ತು ಸ್ಥಳೀಯರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ರಚಿಸಿ ಹೋರಾಟ ಪ್ರಾರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ ಎನ್ನುತ್ತಾರೆ ಮೊಹಮ್ಮದ್ ರಫೀಕ್, ಅಧ್ಯಕ್ಷರು, ಸ್ಕೂಲ್ ಡೆವಲಪ್ಮೆಂಟ್ ಕಮಿಟಿ.

ಹಿರಿಯ ಶಿಕ್ಷಕ ವಿಶ್ವನಾಥ ಪೂಜಾರಿ ಅವರ ಮುಂದಾಳತ್ವದಲ್ಲಿ ಸ್ಥಳೀಯರ, ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿಯವರ ಶಾಲೆ ಉಳಿಸುವ ಕುರಿತು ಚಿಂತನೆ ನಡೆಸಲಾಯಿತು. ಕೇರಳದ ಶಾಲೆಯೊಂದಕ್ಕೆ ರೈಲಿನ‌ ಮಾದರಿಯಲ್ಲಿ ಬಣ್ಣ ಬಳಿದ ಸುದ್ದಿಯನ್ನು ಮುಖ್ಯ ಶಿಕ್ಷಕರು ಮಾಧ್ಯಮದಲ್ಲಿ ನೋಡಿದ್ದರು. ಅದನ್ನು ಶಾಲೆಗೆ ಅಳವಡಿಸಿದ ಪರಿಣಾಮ ಶಾಲೆ ಆಕರ್ಷಣೆಯ ಕೇಂದ್ರವಾಗಿ ಪರಿವರ್ತನೆಯಾಯಿತು.

ಹೀಗೆ ಪ್ರಚಾರಕ್ಕೆ ಬಂದ ಶಾಲೆ ಸೆಲ್ಫಿ ಸ್ಪಾಟ್ ಆಗಿ ಪರಿವರ್ತನೆಯಾಗಿದ್ದಲ್ಲದೇ ಪೋಷಕರನ್ನು ತನ್ನತ್ತ ಸೆಳೆಯಿತು. ಸದ್ಯ ವರ್ಷದಿಂದ ವರ್ಷಕ್ಕೆ ಶಾಲೆ ಸ್ವಲ್ಪವೇ ಅಭಿವೃದ್ಧಿಯಾಗುವ ಜೊತೆಗೆ ಮಕ್ಕಳ ಸಂಖ್ಯೆಯಲ್ಲೂ ಏರಿಕೆಯಾಗಿ ಈ ವರ್ಷ ಸುಮಾರು 250 ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳಿಗೆ ದಾನಿಗಳ ನೆರವಿನಿಂದ, ಸರಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ಒದಗಿಸಿರುವ ಶಾಲೆಯ ತಂಡ, ಇಂಗ್ಲೀಷ್ ಮಾಧ್ಯಮ ಶಾಲೆಯ ಸೌಲಭ್ಯಗಳನ್ನು ಕನ್ನಡ ಶಾಲೆಯಲ್ಲಿ ನೀಡುತ್ತಿದೆ. ಸದ್ಯ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಾದ ಪರಿಣಾಮ ಮೂರು ಹೊಸ ಕೊಠಡಿಗಳು ಅಗತ್ಯವಿದ್ದು, ಮಕ್ಕಳು ಶೆಡ್ ನಲ್ಲಿ ಪಾಠ ಕೇಳುತ್ತಿದ್ದರು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ ಎನ್ನುತ್ತಾರೆ ವಿಶ್ವನಾಥ್ ಪೂಜಾರಿ, ಮುಖ್ಯ ಶಿಕ್ಷಕರು.

ಒಟ್ಟಾರೆಯಾಗಿ ಮನಸ್ಸಿದ್ದರೆ ಮಾರ್ಗ ಎನ್ನುವುದು ಸುಳ್ಳಲ್ಲ. ಸಂಪೂರ್ಣ ಮುಚ್ಚಿಯೇ ಹೋಗುತ್ತಿದ್ದ ಶಾಲೆಗೆ ಹೊಸ ರೂಪ ನೀಡುವ ಮೂಲಕ ಮಕ್ಕಳ ಜೊತೆ ಪೋಷಕರನ್ನು ಸೆಳೆಯುವ ಕಾರ್ಯವನ್ನು ಈ ಹಿಂದೂಸ್ಥಾನಿ ಶಾಲೆ ಮಾಡಿದೆ. ಈ ಪ್ರಯತ್ನದಿಂದಾಗಿ ಮುಚ್ಚಿ ಹೋಗುತ್ತಿದ್ದ ಮತ್ತೊಂದು ಶಾಲೆಗೆ ಮರುಜೀವ ಬಂದಿದೆ. ಇದು ಉಳಿದ ಶಾಲೆಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.

ವರದಿ: ದಿನೇಶ್ ಯಲ್ಲಾಪುರ್, ಟಿವಿ 9, ಉಡುಪಿ