ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರಿಗೆ ಕೋರ್ಟ್ ಸೂಚನೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರಿಗೆ ಸೂಚನೆ ನೀಡಿದೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರಿಗೆ ಕೋರ್ಟ್ ಸೂಚನೆ
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
Edited By:

Updated on: Jan 06, 2023 | 10:46 AM

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ (Santhosh Pateel Suicide Case) ಸಂಬಂಧ ಪೊಲೀಸರು ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಎಲ್ಲಾ ಸಾಕ್ಷ್ಯಗಳ ಹಾಜರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ಖುದ್ದು ತನಿಖಾಧಿಕಾರಿಯೇ ಸಾಕ್ಷ್ಯ ಹಾಜರುಪಡಿಸುವಂತೆ ಸೂಚನೆ ನೀಡಿದೆ. ಸಂತೋಷ್ ಪಾಟೀಲ್ 2 ಮೊಬೈಲ್​​ಗಳ ಡಾಟಾದ ಸಂಪೂರ್ಣ ಮಾಹಿತಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (FSL)​ದಿಂದ ಬಂದ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನ ನೀಡುವಂತೆ ಆದೇಶಿಸಿದೆ.

ಸಂತೋಷ್ ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ನೀಡಬೇಕು, ಮಾತ್ರವಲ್ಲದೆ ಪೊಲೀಸರು ಮಾಡಿದ ವಿಡಿಯೋವನ್ನು ಜನವರಿ 31ರಂದು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರಾಗಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಸಂತೋಷ್ ಪಾಟೀಲ್ ಸಹೋದರ, ಅಸಲಿ ಸಾಕ್ಷ್ಯಗಳನ್ನ ಮರೆಮಾಚಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: ಇಂಜಿನಿಯರ್ 10.5 ಲಕ್ಷ ರೂ. ವಿಧಾನಸೌಧಕ್ಕೆ ತಂದಿದ್ದೇಕೆ? ಲಂಚ ಪಡೆದ ಹಣವೋ, ಮಂತ್ರಿಗೆ ಕೊಡಲು ತಂದ ಹಣವೋ? ಕೈ ಪ್ರಶ್ನೆ

ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನ ಕೋರ್ಟ್‌ಗೆ ಹಾಜರುಪಡಿಸಿಲ್ಲ. ಹೀಗಾಗಿ ಪೊಲೀಸರ ಬಳಿ ಇರುವ ಸಾಕ್ಷಿ ಹಾಜರುಪಡಿಸಿದರೆ ಅಸಲಿಯತ್ತು ಬಯಲಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಕೋರ್ಟ್ ಮುಂದೆ ಸಾಕ್ಷಿ ಹಾಜರಿಗೆ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಮನವಿ ಮಾಡಿದ್ದರು. ಪ್ರಶಾಂತ್ ಪಾಟೀಲ್ ಪರವಾಗಿ ವಕೀಲ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದ್ದಾರೆ.
ಎಫ್​ಎಸ್​ಎಲ್​ನಿಂದ 70,000 ಡಾಟಾ ನೀಡಿದ್ದಾರೆ. ಆದರೆ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ. ಕೇವಲ 55,000 ಡಾಟಾ ಬಂದಿದೆ ಎಂದು ಬಿ ರಿಪೋರ್ಟ್​​ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಎಫ್ಎಸ್ಎಲ್​​ನಿಂದ ಹಾರ್ಡ್ ಡಿಸ್ಕ್ ಹಾಜರಿಗೆ ಕೋರ್ಟ್ ಸೂಚನೆ ನೀಡಿದೆ.

ಸಂತೋಷ ಪಾಟೀಲ್ ವಾಟ್ಸ್​​ಆ್ಯಪ್ ಚಾಟ್​ನಲ್ಲಿ ಏನಿದೆ?

ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ‌ ಸಂತೋಷ ಪಾಟೀಲ್, ಯಾರಿಗೆಲ್ಲಾ ಕಮಿಷನ್‌ ಕೊಟ್ಟಿದ್ದರು ಎಂಬುದು ಸಂತೋಷ ವಾಟ್ಸ್​​ಆ್ಯಪ್‌ ಚಾಟ್​​ ಮೂಲಕ ಬಹಿರಂಗವಾಗಿದೆ. ಕಾಮಗಾರಿ ಕೆಲಸ ಮಾಡಿಸಿದ್ದ ಗ್ರಾಮ ಪಂಚಾಯತಿ ಚೇರ್ಮನ್ ನಾಗೇಶ್ ಮನೋಲ್ಕರ್ ಜೊತೆ ಮಾಡಿದ ವಾಟ್ಸ್​​ಆ್ಯಪ್ ಚಾಟ್ ಇದಾಗಿದ್ದು, ಪೊಲೀಸರು ಕೋರ್ಟ್​​​ಗೆ ಕೊಟ್ಟ ಬಿ ರಿಪೋರ್ಟ್​​ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಜತೆಗಿನ ಚಾಟ್ ಉಲ್ಲೇಖ ಮಾಡಲಾಗಿದೆ. ಈಶ್ವರಪ್ಪ ಪಿಎಗೂ 25 ಸಾವಿರ ಕೊಟ್ಟಿರುವುದಾಗಿ ಚಾಟ್ ಮಾಡಲಾಗಿದ್ದು, ಬಿಲ್‌ ಕಮಿಷನ್‌ ಅಂತ 4 ಲಕ್ಷ 15 ಸಾವಿರ ಕೊಟ್ಟಿರುವುದಾಗಿ ಮೆಸೆಜ್ ಮಾಡಲಾಗಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಹಣ ಪತ್ತೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ- ಸಿದ್ದರಾಮಯ್ಯ ವಾಗ್ದಾಳಿ

ಈಶ್ವರಪ್ಪ ಪಿಎಗೆ ಬಸವರಾಜ್​​ಗೆ ಕೊಡಲಾಗಿತ್ತಾ ಲಂಚದ ಹಣ?

ಲಂಚ ನೀಡಿರುವ ಬಗ್ಗೆ ಸಂತೋಷ ಪಾಟೀಲ್‌ ಜೊತೆ ಈಶ್ವರಪ್ಪ ಭೇಟಿ ಮಾಡಿದ್ದ ಮಹಾಂತೇಶ ಶಾಸ್ತ್ರೀ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಸಂತೋಷ್ ಪಾಟೀಲ್‌ ಕೆಲಸ ಮಾಡಿಕೊಡಲು ಈಶ್ವರಪ್ಪ ಪಿಎಗೆ ಕವರ್ ಕೊಡಲಾಗಿತ್ತು ಎಂದು ಉಡುಪಿ ಪೊಲೀಸರ ಮುಂದೆಯೇ ಮಹಾಂತೇಶ ಶಾಸ್ತ್ರೀ ಹೇಳಿಕೆ ನೀಡಿದ್ದಾರೆ. ಮಹಾಂತೇಶ ಶಾಸ್ತ್ರೀ ನೀಡಿದ ಹೇಳಿಕೆ ಪ್ರತಿ ಟಿವಿ9ಗೆ ಲಭ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:46 am, Fri, 6 January 23