ಲಂಚ ಕೊಡಬೇಕೆಂದು ತೆಗೆದುಕೊಂಡು ಹೋಗ್ತಿದ್ದ ಹಣ ಅಲ್ಲ: PWD ಎಇ ಜಗದೀಶ್ ಪರ ವಕೀಲ ಹೇಳಿಕೆ
ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ಅಡಿಯಲ್ಲಿ ಕೇಸ್ ದಾಖಲಿಸಬೇಕು ಅಂದರೆ ಕೋರ್ಟ್ ಅನುಮತಿಬೇಕು. ಅದೆಲ್ಲಬಿಟ್ಟು ಏಕಾಏಕಿ ಜಗದೀಶ್ರನ್ನು ಬಂಧನ ಮಾಡಿದ್ದಾರೆ ಎಂದು ಜಗದೀಶ್ ಪರ ವಕೀಲ ರಾಜು ಆರೋಪಿಸಿದ್ದಾರೆ.
ಬೆಂಗಳೂರು: ವಿಧಾನಸೌಧ (Vidhana Soudha)ದಲ್ಲಿ 10 ಲಕ್ಷ ಹಣ ಜಪ್ತಿ ಮಾಡಿದ ಪ್ರಕರಣ ಸಂಬಂಧ ಆರೋಪಿ ಪಿಡಬ್ಲ್ಯೂಡಿ ಎಇ ಜಗದೀಶ್ (Assistant Engineer of Public Works Department) ಪರ ವೀಕಲ ಸ್ಪಷ್ಟನೆ ನೀಡಿದ್ದು, ಜಗದೀಶ್ ಲಂಚ ಕೊಡಬೇಕೆಂದು ತೆಗೆದುಕೊಂಡು ಹೋಗುತ್ತಿದ್ದ ಹಣ ಅಲ್ಲ, ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು, ಪ್ರಕರಣದ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಹಣ ತಂದಿದ್ದರು. ಈ ವೇಳೆ ಅರ್ಜೆಂಟ್ ಆಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ವಿಧಾನಸೌಧಕ್ಕೆ ತೆರಳಿದ್ದರು. ಅಷ್ಟೇ ಹೊರತು ಯಾರಿಗೋ ಹಣ ನೀಡಬೇಕೆಂದು ಹೋಗಿಲ್ಲ ಎಂದರು. ಹಣದ ಬಗ್ಗೆ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ. ಆದರೂ ಯಾಕೆ ಜಗದೀಶ್ರನ್ನು ಬಂಧಿಸಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಡಿಸಿಪಿ ವಿಚಾರಣೆ ವೇಳೆಯೂ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ಅಡಿಯಲ್ಲಿ ಕೇಸ್ ದಾಖಲಿಸಬೇಕು ಅಂದರೆ ಕೋರ್ಟ್ ಅನುಮತಿಬೇಕು. ಅದೆಲ್ಲಬಿಟ್ಟು ಏಕಾಏಕಿ ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ ಎಂದು ಜಗದೀಶ್ ಪರ ವಕೀಲ ರಾಜು ಆರೋಪಿಸಿದ್ದಾರೆ.
ಇದನ್ನೂ ಓದಿ: ಇಂಜಿನಿಯರ್ 10.5 ಲಕ್ಷ ರೂ. ವಿಧಾನಸೌಧಕ್ಕೆ ತಂದಿದ್ದೇಕೆ? ಲಂಚ ಪಡೆದ ಹಣವೋ, ಮಂತ್ರಿಗೆ ಕೊಡಲು ತಂದ ಹಣವೋ? ಕೈ ಪ್ರಶ್ನೆ
ಜಗದೀಶ್ರನ್ನು ಕೂಡಿಹಾಕಿದ್ದಾಗಿ ಟ್ವೀಟ್ ಮಾಡಿದ ವಕೀಲ
ವಿಧಾನಸೌಧದ ಬಳಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆ ಪ್ರಕರಣ ಸಂಬಂಧ ಬಂಧಿತ PWD ಇಂಜಿನಿಯರ್ ಜಗದೀಶ್ ಪರ ವಕೀಲ ರಾಜು ಟ್ವೀಟ್ ಮಾಡಿ ಜಗದೀಶ್ರನ್ನ ಕೂಡಿಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ವಕೀಲರ ಮನವಿ ಸ್ವೀಕರಿಸದೆ ಡಿಸಿಪಿಯ ಅಣತಿಯಂತೆ ಜಗದೀಶ್ರನ್ನ ಅಕ್ರಮವಾಗಿ ಕೂಡಿಹಾಕಿದ ಆರೋಪ ಮಾಡಿದ್ದಾರೆ. ನಿನ್ನೆ ಬಂಧನಕ್ಕೂ ಮುನ್ನ ಜಗದೀಶ್ ಜೊತೆಗೆ ವಕೀಲರೂ ಆಗಮಿಸಿದ್ದರು. ಆದರೆ ವಿಚಾರಣೆಗೆ ಸ್ಪಂದಿಸದ ಹಿನ್ನಲೆ ಜಗದೀಶ್ ಅವರನ್ನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದರು.
ವಕೀಲರ ಮನವಿಯನ್ನು ಸ್ವೀಕರಿಸಲು ಒಪ್ಪದೆ ಡಿ.ಸಿ.ಪಿ ಅವರ ಅಣತಿಯಂತೆ ಪ್ರಕರಣದ ವಿಚಾರಣೆಗೆ ವಕೀಲರ ಮುಖಾಂತರ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಆಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ವಿಧಾನ ಸೌದ ಪೋಲಿಸ್ ಠಾಣೆಯ ಸಿಬ್ಬಂದಿಗಳು. pic.twitter.com/xiDPkZ1oIG
— Raju Gadekar (@RajuGadekar13) January 5, 2023
ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಜಗದೀಶ್ ವಿಚಾರಣೆ
ಹಣ ಪತ್ತೆ ಪ್ರಕರಣ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಜಗದೀಶ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ವಿಚಾರಣೆ ನಡೆಯುತ್ತಿದ್ದು, ನಿನ್ನೆ ತಡರಾತ್ರಿವರೆಗೆ ವಿಚಾರಣೆ ನಡೆಸಲಾಗಿದೆ. ಆದರೂ ಹಣದ ಮೂಲದ ಬಗ್ಗೆ ಜಗದೀಶ್ ಇನ್ನೂ ಬಾಯಿಬಿಟ್ಟಿಲ್ಲ. ಹೀಗಾಗಿ ಲಂಚದ ರೂಪದಲ್ಲಿ ಹಣ ಕೊಡಲು ತಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಜಗದೀಶ್ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಯಾರಿಗೆಲ್ಲ ದೂರವಾಣಿ ಕರೆ ಮಾಡಿದ್ದಾರೆ, ಯಾರಿಗೆಲ್ಲ ಮೆಸೆಜ್ ಮಾಡಿದ್ದಾರೆ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇಂದು ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ