ಸಿದ್ದರಾಮಯ್ಯಗೆ ಹಣ ಕೊಡಲು ತಂದಿರಬಹುದೆಂದು ನಾನು ಹೇಳಬಹುದಲ್ವಾ? ಸಿದ್ದುಗೆ ಸಿ.ಸಿ.ಪಾಟೀಲ್ ಗುದ್ದು
10.5 ಲಕ್ಷ ಹಣ ಪತ್ತೆ ಪ್ರಕರಣದಲ್ಲಿ ನಾನು ಯಾವುದೇ ಒತ್ತಡ ಹಾಕಿಲ್ಲ. ಹಾಗೇನಾದರೂ ಇದ್ದರೆ ಅವರೇ ಹೇಳಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಬೆಂಗಳೂರು: ವಿಧಾನಸೌಧ (Vidhana Soudha)ದ ಪಶ್ಚಿಮ ಗೇಟ್ನಲ್ಲಿ 10.5 ಲಕ್ಷ ಹಣ ಪತ್ತೆ (Money Found Case)ಯಾಗಿರುವುದು ವಿರೋಧ ಪಕ್ಷಕ್ಕೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಟೀಕಿಸಲು ಅಸ್ತ್ರ ಸಿಕ್ಕಂತಾಗಿದೆ. ಹಣ ಲೋಕೋಪಯೋಗಿ ಸಚಿವರಿಗೆ ನೀಡಲು ಹೋಗಿದ್ದಿರಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ (C.C.Patil), ಆ ಹಣವನ್ನು ಸಿದ್ದರಾಮಯ್ಯಗೆ ಕೊಡಲು ತಂದಿರಬಹುದೆಂದು ನಾನು ಹೇಳಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು ಹಣ ತಂದಿದ್ದ ಜಗದೀಶ್ರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ನಂತರ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.
ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24 ಗಂಟೆ ಕಸ್ಟಡಿಯಲ್ಲಿದ್ದರೆ ಆಟೋಮ್ಯಾಟಿಕ್ ಆಗಿ ಸಸ್ಪೆಂಡ್ ಆಗುತ್ತದೆ. 10.5 ಲಕ್ಷ ಹಣ ಪತ್ತೆ ಪ್ರಕರಣದಲ್ಲಿ ನಾನು ಯಾವುದೇ ಒತ್ತಡ ಹಾಕಿಲ್ಲ. ಹಾಗೇನಾದರೂ ಇದ್ದರೆ ಅವರೇ ಹೇಳಬಹುದು. ಎಇ ಜಗದೀಶ್ ಬಳಿ 10.5 ಲಕ್ಷ ಸಿಕ್ಕಿದ್ದು ವಿಧಾನಸೌಧದ ಹೊರಗೆ. ನಾನು ವಿಕಾಸಸೌಧದಲ್ಲಿ ಇದ್ದಿದ್ದು, ಹಣ ಸಿಕ್ಕಿದ್ದು ಒಂದೇ ಸಮಯ ಅಂತಾದರೆ. ನಾನು ವಿಧಾನಸೌಧಕ್ಕೆ ಬರಲೇ ಬಾರದಾ ಎಂದು ಪ್ರಶ್ನಿಸಿ ಆರೋಪ ಮಾಡಲು ವಿರೋಧ ಪಕ್ಷದವರಿಗೆ ಇದೊಂದು ಅವಕಾಶವಷ್ಟೇ ಎಂದರು.
ಇದನ್ನೂ ಓದಿ: ಈ ಕಾರ್ಯ ಮಾಡಿದ್ರೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ರಾಜ ಹುಲಿ ಬಿರುದು ಕೊಡ್ತಾರಂತೆ!
ಬೆಂಗಳೂರು ಚೆನ್ನೈ ರಸ್ತೆಯಲ್ಲಿ ಎರಡು ಕಡೆ ಅರಣ್ಯದ ಸಮಸ್ಯೆ ಬಗೆಹರಿಸಲು ಕ್ರಮ
ನಿನ್ನೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡು ಹೆದ್ದಾರಿಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಚೆನ್ನೈ ರಸ್ತೆಯಲ್ಲಿ ಎರಡು ಕಡೆ ಅರಣ್ಯದ ಸಮಸ್ಯೆ ಇದೆ, ಅದನ್ನು ಬಗೆಹರಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಮುಂದಿನ ತಿಂಗಳು ಮುಗಿಯುತ್ತದೆ. ಮೋದಿ ಉದ್ಘಾಟನೆ ಮಾಡಬಹುದು ಎಂದು ಗಡ್ಕರಿ ಹೇಳಿದ್ದಾರೆ. ಪೀಣ್ಯ ಮೇಲ್ಸೇತುವೆ ಪೂರ್ಣ ಕಾಮಗಾರಿ ನಾಲ್ಕು ತಿಂಗಳುಗಳಲ್ಲಿ ಮುಗಿಯಲಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಕೇಬಲ್ ರಿಪ್ಲೇಸ್ ಮೆಂಟ್ ಕೆಲಸ ಆಗಬೇಕಿದೆ ಎಂದರು.
ಜಯ ಮೃತ್ಯುಂಜಯ ಸ್ವಾಮೀಜಿಗಳ ಹೋರಾಟವನ್ನು ಅಭಿನಂದಿಸುತ್ತೇನೆ
2ಎ ಮೀಸಲಾತಿ ಹೋರಾಟ ವಿಚಾರ ಮುಂದುವರಿಕೆ ಘೋಷಣೆ ವಿಚಾರವಾಗಿ ಮಾತನಾಡಿದ ಸಚಿವರು, ಜಯ ಮೃತ್ಯುಂಜಯ ಸ್ವಾಮೀಜಿಗಳ ಹೋರಾಟವನ್ನು ಅಭಿನಂದಿಸುತ್ತೇನೆ. ಅಂದು ಗೃಹ ಸಚಿವರಾಗಿದ್ದ ಬೊಮ್ಮಾಯಿ ಅಂದು ಸ್ವಾಮೀಜಿ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದರು. ಅಂದು ಅರಮನೆ ಮೈದಾನದಲ್ಲಿ ಸಮಾರೋಪಕ್ಕೆ ಅನುಮತಿ ಕೇಳಲು ಮರೆತ್ತಿದ್ದರೂ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಅಧ್ಯಯನ ವರದಿ ಕೊಡಲು ಸೂಚಿಸಲಾಗಿತ್ತು. ವರದಿ ಕೊಡಲು ಸ್ವಲ್ಪ ತಡೆ ಆಗಿತ್ತು. ಮಧ್ಯಂತರ ವರದಿಯಲ್ಲಿ ಪೂರಕ ವರದಿ ಇದೆ ಅಂತಾ ಭಾವಿಸಿದ್ದೇನೆ. ತಡ ಆದರೆ ನೀತಿ ಸಂಹಿತೆ ಬಂದು ನಿಂತು ಹೋಗುತ್ತದೆಯೋ ಎಂದು ಸ್ವಾಮೀಜಿ ಮತ್ತು ಹೋರಾಟಗಾರರಿಗೆ ಭಯ ಇದ್ದಿರಬಹುದು. ಸಿದ್ದೇಶ್ವರ ಶ್ರೀ ಲಿಂಗೈಕ್ಯರಾದ ಕಾರಣ ಸ್ವಲ್ಪ ಸಮಯ ಹೋಯಿತು. ಜಯ ಮೃತ್ಯುಂಜಯ ಶ್ರೀ 24 ಗಂಟೆಗಳ ಗಡುವು ಕೊಟ್ಟಿದ್ದು ಸರಿಯಲ್ಲ, ನೀವು ಬಂದು ಸರ್ಕಾರದ ಜೊತೆ ಮಾತುಕತೆ ಮಾಡಿ. ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಹಣ ಪತ್ತೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ- ಸಿದ್ದರಾಮಯ್ಯ ವಾಗ್ದಾಳಿ
ಮತ್ತೆ ಮುಖ್ಯಮಂತ್ರಿ ಕ್ಷೇತ್ರದಿಂದ ಹೋರಾಟ ಮಾಡುವುದು ಸರಿಯಲ್ಲ. ಪ್ರಾಮಾಣಿಕತೆಯಿಂದ ಸ್ವಾಮೀಜಿಯವರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ. ಸರ್ಕಾರದ ಭಾಗವಾಗಿ, ಸಮುದಾಯದ ವ್ಯಕ್ತಿಯಾಗಿ ಈ ಮಾತು ಹೇಳುತ್ತಿದ್ದೇನೆ. ನಾವು ಮಾತಿಗೆ ತಪ್ಪಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಪ್ರಾಮಾಣಿಕತೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಮುಖ್ಯಮಂತ್ರಿಯವರಿಂದ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಆಗುವುದಿಲ್ಲ ಎಂಬ ವಿಶ್ವಾಸ ಇದೆ. ನಮ್ಮದು ಹಗ್ಗದ ಮೇಲಿನ ನಡಿಗೆಯಾಗಿದೆ. 24 ಗಂಟೆಗಳ ಗಡುವು ಬಿಟ್ಟು ಅವರು ಮಾತುಕತೆಗೆ ಬಂದರೆ ನಾನೂ ಅದರ ಭಾಗವಾಗಿ ಹೋಗುತ್ತೇನೆ ಎಂದರು.
ನನಗೆ ಸ್ಯಾಂಟ್ರೋನೂ ಗೊತ್ತಿಲ್ಲ ಯಾರೂ ಗೊತ್ತಿಲ್ಲ
ಸ್ಯಾಂಟ್ರೋ ರವಿ ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಕೊಠಡಿ ಪಡೆದಿದ್ದ ವಿಚಾರವಾಗಿ ಮಾತನಾಡಿದ ಸಚಿವರು, ನನಗೆ ಸ್ಯಾಂಟ್ರೋನೂ ಗೊತ್ತಿಲ್ಲ ಯಾರೂ ಗೊತ್ತಿಲ್ಲ. ನಾನು ಯಾರಿಗೂ ಫೋನ್ ಮಾಡಿ ಕೊಠಡಿ ಕೊಡಿಸಿಲ್ಲ. ಕುಮಾರಕೃಪಾ ಗೆಸ್ಟ್ ಹೌಸ್ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವುದಿಲ್ಲ. ಕಾವೇರಿ ಅತಿಥಿಗೃಹ ಮಾತ್ರ ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Fri, 6 January 23