AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಾರ್ಯ ಮಾಡಿದ್ರೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ರಾಜ ಹುಲಿ ಬಿರುದು ಕೊಡ್ತಾರಂತೆ!

ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿಮರಿ ರೀತಿ ಇರುತ್ತಾರೆ ಅಂತ ಟಗರು ಹೂಂಕರಿಸಿದ್ದೇ ತಡ, ಕೇಸರಿ ಪಡೆಯಲ್ಲಿ ಬಿರುಗಾಳಿ ಎದ್ದಿತ್ತು. ಆದರೂ ಸಿದ್ದರಾಮಯ್ಯ ಮಾತ್ರ ತನ್ನದೇನು ತಪ್ಪಿಲ್ಲ ಎಂಬಂತೆ ಹೇಳಿಕೆ ನೀಡುತ್ತಲೇ ಇದ್ದಾರೆ.

ಈ ಕಾರ್ಯ ಮಾಡಿದ್ರೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ರಾಜ ಹುಲಿ ಬಿರುದು ಕೊಡ್ತಾರಂತೆ!
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Jan 06, 2023 | 11:27 AM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ನಾಯಿ ಮರಿಗೆ ಹೋಲಿಕೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ತಾನು ಹಾಕಿದ ಷರತ್ತು ಪೂರ್ಣಗೊಳಿಸಿದರೆ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿಮರಿ ರೀತಿ ಇರುತ್ತಾರೆ ಅಂತ ಟಗರು ಹೂಂಕರಿಸಿದ್ದೇ ತಡ, ಕೇಸರಿ ಪಡೆಯಲ್ಲಿ ಬಿರುಗಾಳಿ ಎದ್ದಿತ್ತು. ಆದರೂ ಸಿದ್ದರಾಮಯ್ಯ ಮಾತ್ರ ತನ್ನದೇನು ತಪ್ಪಿಲ್ಲ, ನಾನು ಆಡಿದ್ದೇ ಮಾತು ಪ್ರಮಾದವೇನೂ ಇಲ್ಲ ಅನ್ನುವ ರೀತಿ ಸ್ಪಷ್ಟನೆ ನೀಡುತ್ತಿದ್ದಾರೆ. ಈ ನಡುವೆ ಒಂದು ಟ್ವೀಟ್ ಮಾಡಿದ ಸಿದ್ದರಾಮಯ್ಯ, ಕೇಂದ್ರದಿಂದ ನ್ಯಾಯ ಕೊಡಿಸಿದರೆ ನಾಯಿಮರಿ ಹೇಳಿಕೆಯನ್ನು ಹಿಂಪಡೆಯುತ್ತೇನೆ, ರಾಜಹುಲಿ ಬಿರುದು ನೀಡುತ್ತೇನೆ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಧೈರ್ಯದಿಂದ ಹೇಳಿ ರಾಜ್ಯಕ್ಕೆ ನ್ಯಾಯ ಕೊಡಿಸಿದರೆ ನಾನು ‘ನಾಯಿ ಮರಿ’ ಎಂದು ಹೇಳಿರುವುದನ್ನು ವಾಪಸು ಪಡೆದು ಅವರಿಗೆ ‘ರಾಜಾ ಹುಲಿ’ ಎನ್ನುವ ಬಿರುದು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳ ಬಗ್ಗೆ ಸಿಎಂ ಬೊಮ್ಮಾಯಿ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ಸಿದ್ದರಾಮಯ್ಯ, “ಕಾರ್ಪೋರೇಟ್ ತೆರಿಗೆ, ಸುಂಕ, ಪೆಟ್ರೋಲ್-ಡೀಸೆಲ್ ತೆರಿಗೆ, ಜಿಎಸ್‌ಟಿ ಮೂಲಕ ರಾಜ್ಯದಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಹಣ ಸುಮಾರು ರೂ.3.50 ಲಕ್ಷ ಕೋಟಿ, ರಾಜ್ಯಕ್ಕೆ ವಾಪಸು ಬರುವುದು ರೂ.50,000 ಕೋಟಿಗಿಂತಲೂ ಕಡಿಮೆ. ಈ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್ ಇದೆಯೇ ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Siddaramaiah: ರಾಜ್ಯ ರಾಜಕಾರಣದಲ್ಲಿ ಡಾಗ್​ಫೈಟ್, ನಾನು ನಾಯಿಮರಿ ಎಂದು ಹೇಳಿಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ

ಮನಮೋಹನ್ ಸಿಂಗ್ ಸರ್ಕಾರ 2019ರಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನೀಡಿರುವ ಪಾಲು ರೂ.39,000 ಕೋಟಿ, ಕಳೆದ ವರ್ಷ ರಾಜ್ಯಕ್ಕೆ ಬಂದಿರುವ ಹಣ ರೂ.29,000 ಕೋಟಿ. ಬಜೆಟ್ ಗಾತ್ರ ಹೆಚ್ಚಿದೆ, ತೆರಿಗೆ ಸಂಗ್ರಹ ಹೆಚ್ಚಿದೆ, ರಾಜ್ಯದ ಪಾಲು ಕಡಿಮೆಯಾಗಿದೆ ಯಾಕೆ ಎಂದು ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಜಿಎಸ್‌ಟಿ ಪರಿಹಾರದಿಂದ ಬಂದಿರುವ ಹಣ ರೂ.30,000 ಕೋಟಿ, ಈ ವರ್ಷ ಕೇಂದ್ರ ನೀಡಿರುವುದು ರೂ.20,106 ಕೋಟಿ. ವರ್ಷದಿಂದ ವರ್ಷಕ್ಕೆ ರಾಜ್ಯದ ಪಾಲು ಕಡಿಮೆಯಾಗುತ್ತಿರುವುದು ಯಾಕೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

2017ರಿಂದ ಮೇಕೆದಾಟು, 2020ರಿಂದ ಮಹದಾಯಿ ಮತ್ತು 2021ರಿಂದ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಮಹದಾಯಿ ಬಗ್ಗೆ ಇತ್ತೀಚೆಗೆ ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರ ವಿರುದ್ಧ ದನಿ ಎತ್ತುವವರು ಯಾರು ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ನಾಯಿಮರಿ ಪದ ಬಳಸಿ ತಮ್ಮ ಸಂಸ್ಕೃತಿ ಪ್ರದರ್ಶಿಸಿದ್ದಾರೆ: ಬಿ ಶ್ರೀರಾಮುಲು, ಸಾರಿಗೆ ಸಚಿವ

ರಾಜ್ಯದ ವಿಮಾನ ನಿಲ್ದಾಣ, ಬಂದರುಗಳು ಅದಾನಿ ಕಂಪೆನಿಗೆ ಮಾರಾಟ ಮಾಡಲಾಗುತ್ತಿದೆ. ರಾಯಚೂರು ಉಷ್ಣವಿದ್ಯುತ್ ಸ್ಥಾವರವೂ ಅದೇ ಸಾಲಿಗೆ ಸೇರಲಿದೆ, ಈಗ ರಾಜ್ಯದ ನಂದಿನಿ ಡೇರಿ ಮೇಲೆ ಕಣ್ಣು ಬಿದ್ದಿದೆ. ರಾಜ್ಯದಲ್ಲಿರುವುದು ಜನರ ಸರ್ಕಾರವೇ? ಕೇಂದ್ರದ ಏಜಂಟ್ ಸರ್ಕಾರವೇ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನದ ಆಶ್ವಾಸನೆಯಷ್ಟೇ ಲಾಭ, ಈ ವರೆಗೆ ಪೈಸೆ ಹಣ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳೆಲ್ಲವೂ ಕೇಂದ್ರ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣಕ್ಕೆ ಕುಂಟುತ್ತಾ ಸಾಗಿದೆ. ಇದನ್ನು ಪ್ರಶ್ನಿಸುವ ಶಕ್ತಿ ಯಾರಿಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Fri, 6 January 23