ಸನಾತನ ಹಿಂದೂ ಧರ್ಮೀಯರು ಕೊಲೆಗಡುಕರು ಎಂದಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಗೌರಿಲಂಕೇಶನ ಕೊಂದವರ್ಯಾರು? ಸನಾತನ ಧರ್ಮದವರು, ಸನಾತನ ಧರ್ಮದವರು ಯಾರು ಆರ್​ಎಸ್​​ಎಸ್​ನವರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ.

ಸನಾತನ ಹಿಂದೂ ಧರ್ಮೀಯರು ಕೊಲೆಗಡುಕರು ಎಂದಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
ಸಿದ್ದರಾಮಯ್ಯ ಮತ್ತು ಬಿಜೆಪಿ
Follow us
TV9 Web
| Updated By: Rakesh Nayak Manchi

Updated on:Jan 06, 2023 | 10:04 AM

ಬೆಂಗಳೂರು: ಹಿಂದೂ, ಹಿಂದುತ್ವ ಪದ ಕೆಳಿದಾಕ್ಷಣ ಕೆಂಗಣ್ಣಾಗುವ ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ಮತ್ತೆ ಸನಾತನ ಧರ್ಮ (Sanatan Dharm)ದ ಬಗ್ಗೆ ಹೇಳಿಕೆ ನೀಡಿ ಬಿಜೆಪಿಯ ಬಾಯಿಗೆ ತುತ್ತಾಗಿದ್ದಾರೆ. ಸನಾತನ ಹಿಂದೂ (Hindu) ಧರ್ಮೀಯರು ಕೊಲೆಗಡುಕರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಆಕ್ರೋಶಗೊಂಡಿರುವ ಬಿಜೆಪಿ, ಸಿದ್ದರಾಮಯ್ಯ ವಿರುದ್ದ ಮತ್ತೆ ಹಿಂದುತ್ವ ಅಸ್ತ್ರ ಬಳಸಲು ಮುಂದಾಗಿದೆ. ಅವರ ಮಾನಸಿಕ ಆರೋಗ್ಯದ ಬಗ್ಗೆ ನಮಗೆ ಚಿಂತೆಯಿದೆ, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಬಿಜೆಪಿ ಟ್ವೀಟ್ (BJP Tweet) ಮಾಡಿದೆ.

ಗೌರಿಲಂಕೇಶನ ಕೊಂದವರ್ಯಾರು? ಸನಾತನ ಧರ್ಮದವರು. ಸನಾತನ ಧರ್ಮದವರು ಅಂದರೆ ಯಾರು? ಆರ್​ಎಸ್​ಎಸ್​ನವರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಬಿಜೆಪಿ, ಸನಾತನ ಧರ್ಮ ಅಂದರೆ ಹಿಂದೂ ಧರ್ಮ. ಸಿದ್ದರಾಮಯ್ಯ ಅವರ ಹೇಳಿಕೆ 100 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಟೀಕಿಸಿದೆ.

ಇದನ್ನೂ ಓದಿ: ಇಂಜಿನಿಯರ್ 10.5 ಲಕ್ಷ ರೂ. ವಿಧಾನಸೌಧಕ್ಕೆ ತಂದಿದ್ದೇಕೆ? ಲಂಚ ಪಡೆದ ಹಣವೋ, ಮಂತ್ರಿಗೆ ಕೊಡಲು ತಂದ ಹಣವೋ? ಕೈ ಪ್ರಶ್ನೆ

ಇದನ್ನೂ ಓದಿ: ನಾನು ನಿಯತ್ತಾಗಿ ಸರ್ಕಾರ ನಡೆಸುತ್ತಿದ್ದೇನೆ; ಸಿದ್ದರಾಮಯ್ಯ ಹೇಳಿಕೆಗೆ ಜನ ಉತ್ತರ ಕೊಡುತ್ತಾರೆ -ಸಿಎಂ ಬೊಮ್ಮಾಯಿ

ಸನಾತನ ಹಿಂದೂ ಧರ್ಮೀಯರು ಕೊಲೆಗಡುಕರು ಎನ್ನುವ ಮೂಲಕ 100ಕೋಟಿ ಹಿಂದೂಗಳಿಗೆ ಸಿದ್ದರಾಮಯ್ಯ ಅವರು ಅವಮಾನ ಮಾಡಿರುವುದು ಅವರ ವಿಕೃತಿಗೆ ಹಿಡಿದ ಕೈಗನ್ನಡಿ, ಪದೇಪದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅವರ ಈ ಚಾಳಿಯಿಂದ ಅವರ ಮಾನಸಿಕ ಆರೋಗ್ಯದ ಬಗ್ಗೆ ನಮಗೆ ಚಿಂತೆಯಿದೆ, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ಸನಾತನ ಧರ್ಮ ಬೇರೆ ಸಂಘಟನೆ ಬೇರೆ: ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್

ಮೈಸೂರು: ಸನಾತನ ಧರ್ಮ ಬೇರೆ, ಸಂಘಟನೆ ಬೇರೆ. ವ್ಯಕ್ತಿಗತವಾಗಿ ಆದ ಅಪರಾಧಗಳಿಗೆ ಧರ್ಮವನ್ನು ಹೊಣೆ ಮಾಡುವುದು ಸರಿಯಲ್ಲ. ಇದರಿಂದ ಧರ್ಮವನ್ನು ಆಚರಿಸುವವರ ಮನಸಿಗೆ ನೋವಾಗುತ್ತದೆ ಎಂದು ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್ ಹೇಳಿದ್ದಾರೆ. ರಾಜ್ಯದಲ್ಲಿ ಸನಾತನ ಧರ್ಮ ದಂಗಲ್ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಅವರು, ಸನಾತನ ವಿಷ್ಣುವಿನ ಹೆಸರು ಸನಾತನ ಎಂದರೆ ಹಳೆಯದು ಆದಿ ಗೊತ್ತಿಲ್ಲದಿರುವುದು. ಹಿಂದೂ ಧರ್ಮವನ್ನು ಪರ್ಯಾಯವಾಗಿ ಸನಾತನ ಧರ್ಮ ಎನ್ನುತ್ತಾರೆ. ಸನಾತನ ಸಂಸ್ಥೆ ಬೇರೆ ಸನಾತನ ಧರ್ಮ ಬೇರೆ. ರಾಜಕೀಯ ಕಾರಣಕ್ಕಾಗಿ ಧರ್ಮವನ್ನು ರಾಜಕೀಯಕ್ಕೆ ತರುವುದು ಸರಿಯಲ್ಲ ಎಂದರು.

ಗೋಡ್ಸೆ ಮತ್ತು ಗಾಂಧಿ ಇಬ್ಬರು ಸನಾತನ ಧರ್ಮದಲ್ಲಿದ್ದವರು. ಅವರ ಸಂಘರ್ಷ ವಿಚಾರ ಭೇಧಕ್ಕೆ‌ ಸಂಬಂಧಪಟ್ಟಿದ್ದಾಗಿತ್ತು. ಅದು ಧರ್ಮ ಭೇಧ ಸಂಘರ್ಷವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುವವರಿಗೆ ಇದರಿಂದ ಯಾವುದೇ ಸಮಸ್ಯೆಯಿಲ್ಲ. ಇದು ರಾಜಕೀಯ ಪ್ರೇರಿತವಾದಾಗ ಸಮಸ್ಯೆಯನ್ನುಂಟು ಮಾಡುತ್ತದೆ. ಸನಾತನ ಹೆಸರನ್ನು ಬೇರೆ ಬೇರೆ ಸಂಘ ಸಂಸ್ಥೆಗಳು ಬಳಸುತ್ತಿವೆ. ಮಹಾರಾಷ್ಟ್ರ, ಗೋವಾ, ಮೈಸೂರಿನಲ್ಲೂ ಖಾಸಗಿ ಸಂಘಟನೆ ಸಂಸ್ಥೆಗಳಿಗೆ ಸನಾತನ ಹೆಸರು ಇದೆ. ಸನಾತನ ಹೆಸರು ಬಳಕೆ ಮಾತ್ರಕ್ಕೆ ಅದು ಧರ್ಮದ ಭಾಗವಾಗುವುದಿಲ್ಲ ಎಂದರು. ಈ ರೀತಿಯಾದ ಚರ್ಚೆಗಳೇ ಸರಿಯಿಲ್ಲ, ಯಾರು ಈ ರೀತಿ ಮಾತನಾಡಬಾರದು. ಕ್ರಿಶ್ಚಿಯನ್‌ರು ಕ್ರಿಶ್ಚಿಯನ್‌ರನ್ನು ಕೊಂದಿದ್ದಾರೆ. ಮುಸ್ಲಿಂರು ಮುಸ್ಲಿಂರನ್ನು ಕೊಂದಿದ್ದಾರೆ. ಅಂದ ಮಾತ್ರಕ್ಕೆ ಧರ್ಮವನ್ನು ದೂಷಿಸುವುದು ಸರಿಯಲ್ಲ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Fri, 6 January 23