ಉಡುಪಿ, ಫೆಬ್ರವರಿ 10: ನಕ್ಸಲ್ (Naxal) ಚಟುವಟಿಕೆ ರಾಜ್ಯದಲ್ಲಿ ಮತ್ತೆ ಶುರುವಾಗಿದೆ ಎಂಬ ಅನುಮಾನ ಶುರುವಾಗಿದೆ. ಉಡುಪಿ (Udupi) ಜಿಲ್ಲೆಯ ಬೈಂದೂರು (Baindur) ತಾಲೂಕಿನ ಕೊಲ್ಲೂರು ಭಾಗದಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ನಕ್ಸಲರು ಕೊಲ್ಲೂರು ಸಮೀಪದ ಉದಯನಗರದಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ಪ್ರತ್ಯಕ್ಷ ದರ್ಶಿಯ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ (ANF) ತಂಡ ಕಾರ್ಯಚರಣೆ ನಡೆಸಿದೆ. ಉದಯನಗರದಲ್ಲಿ ನಕ್ಸಲರ ಓಡಾಟವನ್ನು ಕಂಡ ಸ್ಥಳೀಯ ಶಾಜು ಟಿವಿ9 ಡಿಜಿಟಲ್ನೊಂದಿಗೆ ಮಾತನಾಡಿ, ಐವರು ನಕ್ಸಲರು ಎರಡು ದಿನಗಳ ಹಿಂದೆ ತಡರಾತ್ರಿ 2.30 ಗಂಟೆಗೆ ಮನೆ ಹತ್ತಿರದಲ್ಲಿ ಹಾದು ಹೋಗಿದರು. ಮಂಕಿ ಕ್ಯಾಪ್, ಬ್ಯಾಗ್ ಹಾಕಿಕೊಂಡಿದ್ದರು. ಇಬ್ಬರ ಬಳಿ ಕೋವಿ ಇರುವುದನ್ನು ಕಂಡಿದ್ದೇನೆ. ನಾಯಿ ಬೊಗಳಿದ್ದರಿಂದ ಮನೆ ಒಳಗಡೆಯಿಂದ ನೋಡಿದೆ. ಬೆಳಗ್ಗೆ ಎದ್ದವನೆ ಎಎನ್ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿದೆ.ಈ ತಂಡ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿದೆ. ಹೀಗೆ ಬಂದ ನಕ್ಸಲರು ಪೊಲೀಸರ ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ಸಾಕೇತ್ನ ನೆನಪಿಗಾಗಿ ನಕ್ಸಲ್ ಹುತಾತ್ಮ ದಿನಾಚರಣೆ ಆಚರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಕ್ಟಿವ್ ಆದ ನಕ್ಸಲ್ ಚಟುವಟಿಕೆ ! ಗ್ರಾಮಸ್ಥರಿಗೆ ಪೊಲೀಸರ ಸೂಚನೆ
2005ರ ಫೆಬ್ರವರಿ 5 ರಂದು ಕಳಸ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ರಾತ್ರಿ ಪೊಲೀಸರ ಎನ್ಕೌಂಟರ್ನಲ್ಲಿ ನಕ್ಸಲ್ ಸಾಕೇತ್ ಸಾವಿಗೀಡಾಗಿದ್ದನು. ಸಾಕೇತ್ ರಾಜನ್ ಸಾವಿಗೆ ರೆಡ್ ಸಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಸಾಕೇತ್ ನೆನಪಿಗಾಗಿ ನಕ್ಸಲರು ಪ್ರತಿ ವರ್ಷ ನಕ್ಸಲ್ ಹುತಾತ್ಮ ದಿನಾಚರಣೆ ಆಚರಿಸುತ್ತಾರೆ.
1990 ರಿಂದ 2012ರ ವರೆಗು ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಉತ್ತುಂಗದಲ್ಲಿತ್ತು. ಸುಮಾರು 40 ರಿಂದ 45 ಸಕ್ರಿಯ ಸಶಸ್ತ್ರ ನಕ್ಸಲರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ರಾಯಚೂರು, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು.
2005 ಮತ್ತು 2012 ರ ನಡುವೆ, ಎಎನ್ಎಫ್ ಅಧಿಕಾರಿಗಳ 11 ಎನ್ಕೌಂಟರ್ಗಳಲ್ಲಿ 19 ನಕ್ಸಲರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. 2005 ರಲ್ಲಿ ತುಮಕೂರಿನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಂಟು ಜನ ಸಿಬ್ಬಂದಿಗಳು ಮೃತಪಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ