ಉಡುಪಿ: ಸದ್ಯ ದೇಶದಾದ್ಯಂತ ಸುದ್ದಿಯಲ್ಲಿರುವ ಜನಸಂಖ್ಯಾ ನಿಯಂತ್ರಣ ನೀತಿ ನಮ್ಮ ರಾಜ್ಯಕ್ಕೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಬಿಜೆಪಿ ಶಾಸಕ ರಘುಪತಿ ಭಟ್. ಜನಸಂಖ್ಯೆ ನಿಯಂತ್ರಿಸಲು (Population Control) ಕಾನೂನು ರೂಪಿಸಲು ರಾಜ್ಯ ಸರ್ಕಾರ ಮುಂದೆ ಬರಬೇಕು. ಜನಸಂಖ್ಯೆ ಅಸಮತೋಲನವಾದರೆ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಅಧಿವೇಶನದಲ್ಲಿ ಈ ಕುರಿತು ನಾನು ಒತ್ತಾಯ ಮಾಡುತ್ತೇನೆ ಎಂದು ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಒಂದು ಬೇಕು ಎರಡು ಸಾಕು ಯೋಜನೆ ಜಾರಿಯಾಗಬೇಕು. ಭಾರತಕ್ಕೆ ಮತ್ತು ವಿಶ್ವಕ್ಕೆ ಬೇಕಾದ ಮಾನವ ಸಂಪತ್ತನ್ನು ಒದಗಿಸಬಹುದು ಅಥವಾ ಭಾರತ ಮಾನವ ಸಂಪತ್ತನ್ನು ಒದಗಿಸುವ ಫ್ಯಾಕ್ಟರಿ, ಎಷ್ಟು ಬೇಕಾದರೂ ಅಷ್ಟು ಮಕ್ಕಳು ಮಾಡಬಹುದು ಎಂಬ ಮನಸ್ಥಿತಿ ಇದ್ದರೆ ಕಷ್ಟವಾಗಲಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಉತ್ತಮ ಕಾನೂನನ್ನು ಜಾರಿಗೊಳಿಸಲು ಮುಂದಾಗುತ್ತಿದೆ. ನಮ್ಮ ರಾಜ್ಯದಲ್ಲೂ ಈ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಇಂತಹ ಕಾನೂನು ರೂಪಿಸಲು ರಾಜ್ಯ ಸರಕಾರ ಮುಂದೆ ಬರಬೇಕು. ಜನಸಂಖ್ಯೆ ವಿಪರೀತ ಏರಿಕೆಯಾದ್ರೆ ದೇಶಕ್ಕೆ ಸಮಸ್ಯೆ ಎದುರಾಗಲಿದೆ ಎಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ: ಸಿ ಟಿ ರವಿ ಅಭಿಪ್ರಾಯ
ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸೂಕ್ತ ಸಮಯವಾಗಿದೆ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಆ ಮೂಲಕ, ಜನಸಂಖ್ಯಾ ನಿಯಂತ್ರಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಸಿ.ಟಿ. ರವಿ ಒಲವು ತೋರಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಈ ನೀತಿ ಜಾರಿ ಕುರಿತು ಅಭಿಪ್ರಾಯಗಳು ಕೇಳಿಬಂರುತ್ತಿದೆ. ಜನಸಂಖ್ಯೆ ನಿಯಂತ್ರಣ ನೀತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚೆ ಮಾಡಲಾಗುವುದು. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಜುಲೈ 12ರಂದು ತಿಳಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣ ಗುರಿ ಹೊಂದಿರುವ ನೂತನ ಜನಸಂಖ್ಯಾ ನೀತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಬಿಡುಗಡೆ ಮಾಡಿದ್ದರು. ವಿಶ್ವ ಜನಸಂಖ್ಯಾ ದಿನಾಚರಣೆಯಾದ ಜುಲೈ 11ರಂದು ಈ ನೀತಿ ಬಿಡುಗಡೆ ಆಗಿತ್ತು. ಜನಸಂಖ್ಯೆ ಏರಿಕೆ ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಬಹುದು. ಜನಸಂಖ್ಯಾ ನೀತಿ 2021-2030 ರಲ್ಲಿ ಪ್ರತಿ ಸಮುದಾಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದರು. ಜನಸಂಖ್ಯೆ ನಿಯಂತ್ರಣವು ಜನಸಾಮಾನ್ಯರಲ್ಲಿ ಅರಿವು ಮತ್ತು ಬಡತನದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ; ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದ ಕೆ ಎಸ್ ಈಶ್ವರಪ್ಪ
(Population Control BJP MLA Raghupathi Bhat urges for Karnataka state needs a population control policy)