ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ; ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದ ಕೆ ಎಸ್ ಈಶ್ವರಪ್ಪ
ಜನಸಂಖ್ಯೆ ನಿಯಂತ್ರಣ ನೀತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚೆ ಮಾಡಲಾಗುವುದು. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗ: ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಈ ನೀತಿ ಜಾರಿ ಕುರಿತು ಅಭಿಪ್ರಾಯಗಳು ಕೇಳಿಬಂದಿದೆ. ಜನಸಂಖ್ಯೆ ನಿಯಂತ್ರಣ ನೀತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚೆ ಮಾಡಲಾಗುವುದು. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಇಂದು (ಜುಲೈ 12) ತಿಳಿಸಿದರು.
ಜನಸಂಖ್ಯೆ ನಿಯಂತ್ರಣ ಗುರಿ ಹೊಂದಿರುವ ನೂತನ ಜನಸಂಖ್ಯಾ ನೀತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಬಿಡುಗಡೆ ಮಾಡಿದ್ದರು. ವಿಶ್ವ ಜನಸಂಖ್ಯಾ ದಿನಾಚರಣೆಯಾದ ಜುಲೈ 11ರಂದು ಈ ನೀತಿ ಬಿಡುಗಡೆ ಆಗಿತ್ತು. ಜನಸಂಖ್ಯೆ ಏರಿಕೆ ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಬಹುದು. ಜನಸಂಖ್ಯಾ ನೀತಿ 2021-2030 ರಲ್ಲಿ ಪ್ರತಿ ಸಮುದಾಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದರು. ಜನಸಂಖ್ಯೆ ನಿಯಂತ್ರಣವು ಜನಸಾಮಾನ್ಯರಲ್ಲಿ ಅರಿವು ಮತ್ತು ಬಡತನದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಮೀಸಲಾತಿ ಪ್ರಕಟ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯೆ ನೀಡಿದರು. ಮೀಸಲಾತಿ ಪ್ರಕಟಿಸಿದ್ದಕ್ಕೆ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗ್ತಿದೆ. ಮೀಸಲಾತಿ ಪ್ರಕಟಿಸುವುದಕ್ಕೂ ಮುನ್ನ ಚುನಾವಣಾ ಆಯೋಗ ರಾಜ್ಯ ಸರ್ಕಾರದ ಸಲಹೆ ಕೇಳಬೇಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಈಗ ಮೀಸಲಾತಿ ಘೋಷಣೆ ಆಗಿರುವುದನ್ನು ಪ್ರಶ್ನಿಸುವುದಿಲ್ಲ. ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಚುನಾವಣೆ ನಡೆಸುತ್ತದೆ. ಉತ್ತರ ಪ್ರದೇಶದ ಫಲಿತಾಂಶ ರಾಜ್ಯದಲ್ಲೂ ಬರಲಿದೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ನಡುವೆ ಮೀಸಲಾತಿ ಪ್ರಕಟಿಸಿದ್ದಕ್ಕೆ ತೀವ್ರ ಬೇಸರ ತೋರಿದ ಈಶ್ವರಪ್ಪ, ಚುನಾವಣಾ ಆಯೋಗದ ಕ್ರಮಕ್ಕೆ ಸಚಿವ ಈಶ್ವರಪ್ಪ ಅಸಮಾಧಾನಗೊಂಡಿರುವುದನ್ನು ಹೇಳಿದರು. ಡಿಸೆಂಬರ್ವರೆಗೆ ಚುನಾವಣೆ ಬೇಡವೆಂದು ಸರ್ಕಾರ ಮನವಿ ಮಾಡಿತ್ತು. ಚುನಾವಣೆಗೆ 15 ದಿನ ಮೊದಲು ಮೀಸಲಾತಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಇಷ್ಟು ಬೇಗ ಮೀಸಲಾತಿ ಪ್ರಕಟಿಸಿದ್ದರಿಂದ ಸಮಸ್ಯೆ ಆಗಿದೆ. ಸ್ಪರ್ಧಾಕಾಂಕ್ಷಿಗಳು ಮನೆ ಮಠವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಸಾಮಾಜಿಕ ಅಸಮಾನತೆಗೆ ಜನಸಂಖ್ಯೆ ಹೆಚ್ಚಳ ಕಾರಣ; ಜಾಗೃತಿ ಮೂಡಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮನವಿ
Published On - 3:07 pm, Mon, 12 July 21