ಉಡುಪಿ: ಕೊಲ್ಲೂರು ದೇಗುಲದಲ್ಲಿ (Kollur Mookambika Temple) ಟಿಪ್ಪು ನೆನಪಿಗೆ ನಡೆಯುವ ಸಲಾಂ ಮಂಗಳಾರತಿ ಹೆಸರು ಬದಲಿಸಲು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಆದರೆ ಈ ಬಗ್ಗೆ ಬೆಳಕು ಚೆಲ್ಲಿರುವ ಇತಿಹಾಸ ತಜ್ಞರು ಟಿಪ್ಪುವಿನಿಂದ (Tipu Sultan) ಸಹಾಯ ಪಡೆದ ಎಲ್ಲಾ ಕ್ಷೇತ್ರಗಳಲ್ಲೂ ಆ ಕಾಲದಿಂದಲೂ ಸಲಾಂ ಪೂಜೆ ನಡೆಯುತ್ತಾ ಬಂದಿದೆ ಎಂದು ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುತ್ತಾ ಇತಿಹಾದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇತಿಹಾಸ ತಜ್ಞ ಪ್ರೊ. ಮುರುಗೇಶಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊಲ್ಲೂರಿನಲ್ಲಿ ಪ್ರತಿನಿತ್ಯ ಸಂಜೆ ಸಲಾಂ ಪೂಜೆ (Salam Mangalarathi) ಮಾಡುತ್ತಾರೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಸಲಾಂ ಪೂಜೆ ಆರಂಭವಾಯಿತು. ಇದಕ್ಕೆ ಐತಿಹಾಸಿಕ ಕಾರಣವಿದೆ ಎಂದು ಹೇಳಿದ್ದಾರೆ.
ಟಿಪ್ಪು ಆಡಳಿತ ಕಾಲದಲ್ಲಿ ಮರಾಠರು ಕರಾವಳಿ ಮಲೆನಾಡಿಗೆ ದಾಳಿ ಮಾಡಿದ್ದರು. ಶೃಂಗೇರಿ ಕ್ಷೇತ್ರದ ಮೇಲೆಯೂ ಮರಾಠರು ದಾಳಿ ಮಾಡಿದ್ದರು. ಬಸ್ರೂರಿನ ಮೇಲೂ ಮರಾಠರು ದಾಳಿ ಮಾಡಿದ್ದರು. ತನ್ನ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರಗಳಿಗೆ ಟಿಪ್ಪು ಈ ವೇಳೆ ಸಹಾಯ ಮಾಡಿದ್ದಾನೆ. ಅನ್ಯಾಯವನ್ನು ಗಮನಿಸಿ ಸಹಾಯ ಮಾಡಿದ್ದಾನೆ. ಶೃಂಗೇರಿ ಪೀಠಾಧಿಪತಿಗಳಿಗೆ ಪತ್ರ ಬರೆದಿದ್ದಾನೆ. ಶೃಂಗೇರಿಗೆ ಅನೇಕ ದಾನ ಧರ್ಮ ನೀಡಿದ್ದಾನೆ. ಶೃಂಗೇರಿಯಲ್ಲೂ ಸಲಾಂ ಪೂಜೆ ನಡೆಯುತ್ತದೆ ಎಂದು ಇತಿಹಾಸದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಸ್ರೂರು ಭಾಗದಲ್ಲೇ ಕೊಲ್ಲೂರು ಕ್ಷೇತ್ರ ಬರುತ್ತಿತ್ತು. ಕೊಲ್ಲೂರು ಕ್ಷೇತ್ರಕ್ಕೂ ಟಿಪ್ಪು ಸಂಪೂರ್ಣ ಬೆಂಬಲ ನೀಡಿದ್ದಾನೆ. ಅದಕ್ಕೋಸ್ಕರ ಕೊಲ್ಲೂರಿನಲ್ಲಿ ಸಲಾಂ ಪೂಜೆ ನಡೆಸಲಾಗುತ್ತದೆ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂದು ಬಿಂಬಿಸಲ್ಪಟ್ಟಿದ್ದಕ್ಕೂ ಚಾರಿತ್ರಿಕ ದಾಖಲೆಗಳಿಗೂ ತಾಳೆ ಆಗುವುದಿಲ್ಲ. ಮುಸ್ಲಿಂ ಆಡಳಿತಗಾರರಾಗಿದ್ದರೂ ಸಹ ತನ್ನ ಪ್ರಜೆಗಳನ್ನು ಸಮಾನವಾಗಿ ನೋಡುತ್ತಿದ್ದರು. ಇದೆಲ್ಲಾ ಶೃಂಗೇರಿ ಕ್ಷೇತ್ರಕ್ಕೆ ಬರೆದಿರುವ ಪತ್ರಗಳಲ್ಲಿ ಲಭ್ಯವಿದೆ. ತನ್ನ ಆಡಳಿತದಿಂದ ನಿಮಗೆ ಸಹಾಯ ಮಾಡುವುದಾಗಿ ಆತ ಪತ್ರದಲ್ಲಿ ಬರೆದಿದ್ದ, ಬಸ್ರೂರು ಆಗ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಟಿಪ್ಪುವಿನಿಂದ ಸಹಾಯ ಪಡೆದ ಎಲ್ಲಾ ಕ್ಷೇತ್ರಗಳಲ್ಲೂ ಸಲಾಂ ಪೂಜೆ ನಡೆಯುತ್ತಾ ಬಂದಿದೆ ಎನ್ನುತ್ತಾರೆ ಪ್ರೊ. ಮುರುಗೇಶಿ.
ಸಲಾಂ ಮಂಗಳಾರತಿ ಹೆಸರು ಬದಲಿಸಲು ವಿಶ್ವ ಹಿಂದೂ ಪರಿಷತ್ ಮನವಿ: ಏನಿದು ದಿಢೀರ್ ವಿವಾದ
ಕೊಲ್ಲೂರು ಮೂಕಾಂಬಿಕ ದೇಗುಲದಲ್ಲಿ ನಡೆಯುವ ಸಲಾಂ ಮಂಗಳಾರತಿ ಎಂಬ ಆರತಿಯ ಹೆಸರು ತೆಗೆಯುವಂತೆ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ದೇಗುಲದ ಅಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಟಿಪ್ಪು ಸುಲ್ತಾನ್ ನೆನಪಿಗಾಗಿ ನಡೆಯುವ ಮಂಗಳಾರತಿಯ ಸಲಾಂ ಮಂಗಳಾರತಿ ಎಂಬ ಹೆಸರನ್ನು ತೆಗೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಟಿಪ್ಪು ಕ್ರೂರಿ, ಮತಾಂಧ, ಹಿಂದೂ ವಿರೋಧಿ ಎಂದು ವಿಹಿಂಪ ಹೇಳಿದೆ. ಟಿಪ್ಪು ಸಾವಿರಾರು ಹಿಂದೂಗಳ ನರಮೇಧ ನಡೆಸಿದ್ದಾನೆ. ಟಿಪ್ಪು ನೂರಾರು ದೇವಸ್ಥಾನಗಳು ಧ್ವಂಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ಮಂಗಳಾರತಿ ನಡೆಸುವುದು ಸರಿಯಲ್ಲ. ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಲ್ಲಿ ಮಂಗಳಾರತಿ ಗುಲಾಮಗಿರಿಯ ಸಂಕೇತ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು. ಸಲಾಂ ಹೆಸರನ್ನು ತೆಗೆದು ದೇವರ ಹೆಸರಲ್ಲಿ ಆರತಿ ಮಾಡಿ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ದೇವಾಲಯದಲ್ಲಿ ಜಾತ್ರಾ ಮಹೋತ್ಸವ ವೇಳೆ ಮಾಡಲಾಗುವ ಈ ಆರತಿಯ ಹೆಸರು ಬದಲಿಸುವಂತೆ ಆಗ್ರಹ ಕೇಳಿಬಂದಿದೆ.
Published On - 7:06 pm, Sat, 26 March 22