ಉಡುಪಿ: ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು
ಉಡುಪಿಯ ಮಸೀದಿ ಕಾಂಪ್ಲೆಕ್ಸ್ನಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಉಡುಪಿ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರ ಹೋಟೆಲ್ ತೆರವುಗೊಳಿಸಲಾಗಿದೆ.
ಉಡುಪಿ: ಉಡುಪಿಯ (Udupi) ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರ ಹೋಟೆಲ್ ತೆರವುಗೊಳಿಸಲಾಗಿದೆ. ಹೋಟೆಲ್ ಮಾಲಿಕ ನಜೀರ್ ಅಹಮ್ಮದ್ ಝರಾಗೆ ಈಗಾಗಲೇ ಹಲವು ಬಾರಿ ಉಡುಪಿ ನಗರಸಭೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿಂದ ಅಂಗಡಿ ತೆರವುಗೊಳಿಸಲಾಗುತ್ತಿದೆ. ಕಟ್ಟಡದಲ್ಲಿನ ‘ಝೈತರ್ ಆನ್’ ಎಂಬ ಮಳಿಗೆಯನ್ನೂ ತೆರವುಗೊಳಿಸಲಾಗಿದೆ. ನಜೀರ್ ಅಹಮದ್ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ಉಡುಪಿ ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಹೇಳಿದ್ದೇನು?
ಮಸೀದಿ ರಸ್ತೆಯಲ್ಲಿ ನಗರಸಭೆ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಉಡುಪಿ ನಗರಸಭೆ ಪೌರಾಯುಕ್ತ ಉದಯ್ಕುಮಾರ್ ಶೆಟ್ಟಿ, ‘‘ಇದೊಂದು ಅನಧಿಕೃತ ಕಟ್ಟಡ. ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ. ಕಟ್ಟಡವನ್ನು ತೆರವುಗೊಳಿಸಲು 2018ರಲ್ಲಿ ಆರ್ಡರ್ ಆಗಿದೆ. ಸ್ಟೇ ಆರ್ಡರ್ ಇತ್ತು. ಸ್ಟೇ ವೆಕೆಟ್ ಆಗಿದೆ. ನಗರಸಭೆಯಿಂದ ತೆರವುಗೊಳಿಸಲು ಬಂದಾಗ ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಪರವಾನಿಗೆ ಇರುವ ಯಾವ ಅಂಗಡಿಗಳು ಇಲ್ಲ. ಉಡುಪಿಯಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ಲೈಸನ್ಸ್ ಇಲ್ಲದೆ ಕಟ್ಟಿರುವ ಏಕೈಕ ಕಟ್ಟಡ ಇದು. ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದ ಕಟ್ಟಡ ಇದೊಂದೇ ಆಗಿದ್ದು, ಕೋರ್ಟ್ನಲ್ಲಿ ಸ್ಟೇ ಆರ್ಡರ್ ತೆರವು ಆಗಿರುವುದರಿಂದ ನಾವು ಕ್ರಮವನ್ನು ಕೈಗೊಂಡಿದ್ದೇವೆ. ಆದಾಯ ತೆರಿಗೆಯನ್ನು ನಗರಸಭೆಗೆ ಅವರು ಕಟ್ಟುತ್ತಿಲ್ಲ. ಈ ಕಟ್ಟಡಕ್ಕೆ ಯಾವುದೇ ಟ್ರೇಡ್ ಲೈಸನ್ಸ್ ಇಲ್ಲ. ಬೇರೆ ಕಟ್ಟಡಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಮೇಲೆ ರಾಜಕೀಯ ಒತ್ತಡದಂತದ್ದು ಏನೂ ಇಲ್ಲ. ಕಾನೂನು ಅಧಿಕಾರಿಗಳಿಂದ ನಾವು ಒಪಿನಿಯನ್ ತೆಗೆದುಕೊಂಡಿದ್ದೇವೆ. ಎಲ್ಲಾ ಅಧಿಕಾರಿಗಳು, ಪಿಪಿ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ’’ ಎಂದಿದ್ದಾರೆ.
ಗದಗ: ಮೊಸಳೆ ಮರಿ ಕಾಣಿಸಿಕೊಂಡ ಹಿನ್ನೆಲೆ; ಸ್ಥಳೀಯರಲ್ಲಿ ಆತಂಕ
ಗದಗ: ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ನದಿ ದಡದಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಆತಂಕ ಹೆಚ್ಚಾಗಿದೆ. ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಲಪ್ರಭಾ ನದಿಯಲ್ಲಿ ಇನ್ನೂ ಸಾಕಷ್ಟು ಮೊಸಳೆ ಇರುವ ಭಯ ಇದ್ದು, ಮೊಸಳೆ ಹಿಡಿದುಕೊಂಡು ಹೋಗುವಂತೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಡ್ಯ: ಕರ್ತವ್ಯಲೋಪ ಹಿನ್ನೆಲೆ; ತಹಶೀಲ್ದಾರ್ ಅಮಾನತು
ಮಂಡ್ಯ: ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್ರನ್ನು ಅಮಾನತುಗೊಳಿಸಲಾಗಿದೆ. ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪವಿತ್ತು. ಹಾಗೆಯೇ ಕೊರೊನಾ ವೇಳೆ ಕರ್ತವ್ಯ ಲೋಪವೆಸಗಿದ ಆರೋಪವಿತ್ತು. ಕರ್ತವ್ಯಲೋಪ ಸೇರಿದಂತೆ 13 ಕಾರಣ ನೀಡಿ ಚಂದ್ರಶೇಖರ್ ಶಂಭಣ್ಣರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ:
ಶಾಲೆಯ ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ಸಖತ್ ವೈರಲ್ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ
Published On - 9:48 am, Sat, 26 March 22