ಉಡುಪಿ: ಮಣಿಪಾಲದ ಹೆಸರಾಂತ ಬ್ಯಾಕಸ್ ಇನ್ ಬಾರ್ (bar) ನಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಚುನಾವಣೆ ಮತ ಎಣಿಕೆ ಹಿನ್ನಲೆಯಲ್ಲಿ ನಿನ್ನೆಯವರೆಗೂ ಬಾರ್ ಬಂದ್ ಆಗಿತ್ತು. ಇಂದು ನಿತ್ಯ ವ್ಯವಹಾರದ ನಿಮಿತ್ತ ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು. ಸಂಜೆ ವೇಳೆಗೆ ಬಾರ್ ಗೆ ಆಗಮಿಸಿದ ಎರಡು ತಂಡಗಳ ನಡುವೆ ವಾದ-ವಿವಾದ ಉಂಟಾಗಿದ್ದು, ವಾಗ್ವಾದ ಜೋರಾದ ಬಳಿಕ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಬಾರ್ ಗಲಾಟೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾರ: ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ. ಮಾಗೊಂದಿ ಗ್ರಾಮದ ಸುದರ್ಶನ್ (23) ಮೃತ ಯುವಕ.
ತಮ್ಮದೆ ತೋಟದಲ್ಲಿ ಮೋಟರ್ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ, ಕೇಸರಿ ಧ್ವಜದ ಪಕ್ಕ ಮುಸ್ಲಿಂ ಧ್ವಜ ಹಾರಾಟ ನಡೆಸಲಾಯಿತು. ಇದೀಗ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತಿದ್ದಂತೇ ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಬಹುಮತ; ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು
ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಸುಮಾರು 15 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಟ್ಕಳ ಮೂಡಶಿರಾಲಿಯ ರಾಮಚಂದ್ರ ನಾಯ್ಕ್, ಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ಇವರ ಪತ್ನಿ, ಮಕ್ಕಳನ್ನು ದೂಡಿ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕ ಯುವಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಅವರು ಬಿಜೆಪಿಯ ಸುನೀಲ್ ನಾಯ್ಕ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಮಂಕಾಳು ವೈದ್ಯ ಗೆಲುವನ್ನ ಸಂಭ್ರಮಿಸುವ ವೇಳೆ ಭಟ್ಕಳ ಪಟ್ಟಣದಲ್ಲಿರುವ ಸಂಶುದ್ದೀನ್ ವೃತ್ತದ ಮೇಲೇರಿದ ಮುಸ್ಲಿಂ ಯುವಕರು ಕೇಸರಿ ಧ್ವಜದ ಪಕ್ಕ ನಿಂತು ಇಸ್ಲಾಂ ಧ್ವಜ ಪ್ರದರ್ಶನ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Sun, 14 May 23