ಉಡುಪಿ: ನಾವು ವಾಸಿಸುವ ಅಥವಾ ನಮ್ಮ ಸುತ್ತಮುತ್ತ ಇರುವ ಕೆಲವೊಂದು ನಿರ್ಜೀವ ವಸ್ತುಗಳ ಜೊತೆಯೂ ನಮಗೆ ಒಂದು ರೀತಿಯ ಅಟ್ಯಾಚ್ಮೆಂಟ್ ಮತ್ತು ಸೆಂಟಿಮೆಂಟ್ ಬೆಳೆದಿರುತ್ತೆ. ಅದೇ ರೀತಿ ಇಲ್ಲೊಬ್ಬರು ತಮ್ಮ ತಂದೆಯ ನೆನಪುಗಳಿದ್ದ ಮನೆಯನ್ನ ಆಧುನಿಕ ತಂತ್ರಜ್ಞಾನ ಬಳಸಿ ಉಳಿಸಿಕೊಂಡಿದ್ದಾರೆ.
ಮನೆ ಅಂದ್ರೆನೆ ಹಾಗೇ.. ಅದೇನೋ ಪ್ರೀತಿ.. ಅದೇನೋ ಕಾಳಜಿ.. ತಮ್ಮ ಬಾಲ್ಯದಲ್ಲಿ ಬೆಳೆದ ಮನೆಯಲ್ಲಿ ಹೇಳಲಾರದಷ್ಟು ನೆನಪುಗಳಿರುತ್ತೆ. ಅಂತಹ ಮನೆಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಆಸೆಯೂ ಇರುತ್ತೆ. ಅದೇ ರೀತಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಲ್ಯಾ ಮಜಲಗುತ್ತು ಗ್ರಾಮದ ಅಜಿತ್ ಶೆಟ್ಟಿ ಎನ್ನುವವರಿಗೆ ತಂದೆ ಕಟ್ಟಿದ ಮನೆ ಉಳಿಸುವ ಆಸೆ. ಆದ್ರೆ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಮನೆಯನ್ನು ಕೆಡವದೇ, ನೀರು ನುಗ್ಗದಂತೆ ತಡೆಯಲು ಹೊಸ ಪ್ಲ್ಯಾನ್ ಮಾಡಿದ್ದಾರೆ.
ಈ ಮನೆಯನ್ನು 22ವರ್ಷದ ಹಿಂದೆ ದಿವಂಗತ ರವೀಂದ್ರ ಶೆಟ್ಟಿ ಅವರು ಕಟ್ಟಿದ್ರು. ಆಗಿನ ಕಾಲಕ್ಕೆ ಈ ಭಾಗದ ಪ್ರಥಮ ತಾರಸಿ ಮನೆ ಕೂಡ ಇದಾಗಿತ್ತು. ಆದ್ರೆ ಇತ್ತೀಚಿನ ಕೆಲ ವರ್ಷಗಳಲ್ಲಿ, ಮನೆ ತಗ್ಗಿನಲ್ಲಿ ಇರೋ ಕಾರಣದಿಂದ ಮಳೆಗಾಲದಲ್ಲಿ ನೀರು ನುಗ್ಗುವ ಸಮಸ್ಯೆ ಎದುರಾಗುತ್ತಿದೆ. ಆದ್ರೆ ಮನೆ ಕೆಡವಿ ಎತ್ತರದಲ್ಲಿ ಹೊಸ ಮನೆ ಕಟ್ಟೋಣ ಅಂದ್ರೆ ತಂದೆಯ ಪ್ರೀತಿಯ ನೆನಪಿನ ಆಲಯ. ಹೀಗಾಗಿ, ಏನ್ಮಾಡೋದು ಅಂತ ಯೋಚಿಸಿದಾಗ ನೆನಪಾಗಿದ್ದು, ಜ್ಯಾಕ್ ಲಿಫ್ಟಿಂಗ್ ಎನ್ನುವ ಹೊಸ ತಂತ್ರಜ್ಞಾನ.
ಬೆಂಗಳೂರಿನಲ್ಲಿ ವಾಸವಾಗಿರೋ ದಿವಂಗತ ರವೀಂದ್ರ ಶೆಟ್ಟಿ ಅವರ ಮಗ ಉದ್ಯಮಿ ಅಜಿತ್ ಶೆಟ್ಟಿ ಅವರಿಗೆ ಜ್ಯಾಕ್ ಲಿಫ್ಟಿಂಗ್ ಬಗ್ಗೆ ಐಡಿಯಾ ಇತ್ತು. ಹೀಗಾಗಿ ತಂದೆ ಕಟ್ಟಿದ ಮನೆಯನ್ನು ಹಾಗೆ ಉಳಿಸುವ ನಿಟ್ಟಿನಲ್ಲಿ, ಹರ್ಯಾಣ ಮೂಲದ ಜ್ಯಾಕ್ ಲಿಫ್ಟಿಂಗ್ ಕಂಪನಿಯ ಮೂಲಕ ಮನೆಯನ್ನು ಮೂರು ಫೀಟ್ ಮೇಲಕ್ಕೆ ಎತ್ತರಿಸುತ್ತಿದ್ದಾರೆ. ಹರ್ಯಾಣ ಮೂಲದ ಜ್ಯಾಕ್ ಲಿಫ್ಟಿಂಗ್ ಕಂಪನಿ ಈಗಾಗಲೇ ಕಾರ್ಯಾರಂಭ ಮಾಡಿದ್ದು, ಈ ತಿಂಗಳ ಒಳಗಡೆ ಕಂಪ್ಲೀಟ್ ಆಗುತ್ತೆ. ಇದಕ್ಕೆ ಒಟ್ಟು 3 ಲಕ್ಷ ಖರ್ಚಾಗುತ್ತೆ ಎನ್ನುತ್ತಾರೆ ಅಜಿತ್ ಶೆಟ್ಟಿ. ಇನ್ನು ಮನೆಗೆ ಹಾನಿ ಆದ್ರೆ ನಾವೇ ಜವಾಬ್ದಾರಿ ಅಂತ ಕಂಪನಿ ಬಾಂಡ್ ಕೂಡ ಬರೆದುಕೊಟ್ಟಿದೆ. ಒಟ್ನಲ್ಲಿ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಲಿಫ್ಟಿಂಗ್ ಕಾರ್ಯಾಚರಣೆ ನೋಡಲು ಸುತ್ತಮುತ್ತಲಿನವರು ಕೂಡ ಬರ್ತಿದ್ದಾರೆ. ಹೊಸ ತಂತ್ರಜ್ಞಾನ ನೋಡಿ ತಾವೂ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
ವರದಿ: ಹರೀಶ್ ಪಾಲೆಚ್ಚಾರ್, ಟಿವಿ9, ಉಡುಪಿ.
ಇದನ್ನೂ ಓದಿ: ಕನಸಿನ ಮನೆ ಕಣ್ಣೆದಿರು ಕುಸಿದು ಉಕ್ಕಿ ಹರಿಯುವ ನದಿಗೆ ಬಿದ್ದರೆ, ಆ ಆಘಾತವನ್ನು ತಡೆದುಕೊಳ್ಳುವುದು ಸುಲಭವಲ್ಲ!
Published On - 12:37 pm, Wed, 26 January 22