ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ, ನಗರ ವ್ಯಾಪ್ತಿ ಪ್ರದೇಶಗಳಲ್ಲೂ ಸಾಧ್ಯವಾದಷ್ಟು ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಮನೆಯವರು ಪ್ರತೀ ತಿಂಗಳು 100 ಇಲ್ಲವೇ 75 ರೂಪಾಯಿ ಅಥವಾ ವರ್ಷಕ್ಕೆ ಇಂತಿಷ್ಟು ಹಣ ಅಂತ ಪಾವತಿ ಮಾಡುತ್ತಾರೆ. ಆದರೆ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಕಸ ಸಂಗ್ರಹಣೆಗಾಗಿ 150 ರೂ. ತೆಗೆದುಕೊಳ್ಳುತ್ತಾರಂತೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪವಿತ್ರ ಎಂಬವರು ಒಂದು ಪೋಸ್ಟ್ ಅನ್ನು ಕೂಡಾ ಕೂಡಾ ಹಂಚಿಕೊಂಡಿದ್ದರು.
ಇದರ ಹಿಂದಿನ ಕಾರಣ ಏನು ಎಂದು ನೋಡಿದಾಗ ಕಟಪಾಡಿ ಗ್ರಾಮ ಪಂಚಾಯತ್‌ಗೆ ಬಯೋ ಮೆಡಿಕಲ್ ವೇಸ್ಟ್ ಎಂದೇ ಪರಿಗಣಿತವಾಗಿರುವ ಮಕ್ಕಳ ಡೈಪರ್ ಮತ್ತು ಸ್ಯಾನಿಟರಿ ತ್ಯಾಜ್ಯಗಳ ವಿಲೇವಾರಿ ಮಾಡುವುದು ತುಂಬಾ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಪ್ರತ್ಯೇಕ ತ್ಯಾಜ್ಯಗಳ ವಿಲೇವಾರಿ ಘಟಕ ಇಲ್ಲಿ ಇಲ್ಲದಿರುವ ಕಾರಣ ಇಲ್ಲಿನ ಪಂಚಾಯತ್ ಈ ಪ್ರತ್ಯೇಕ ತ್ಯಾಜ್ಯಗಳನ್ನು ಬೇರೆ ಕಡೆ ಇನ್ಸಿಲರೇಶನ್ ಮಾಡುವ ಮೂಲಕ ವಿಲೇವಾರಿ ಮಾಡುತ್ತಿದೆ. ಇದಕ್ಕೆ ಪ್ರತಿ ತಿಂಗಳಿಗೆ ನಮಗೆ ಸುಮಾರು 30,000 ರೂ. ಖರ್ಚಾಗುತ್ತದೆ. ಈ ಕಾರಣಕ್ಕಾಗಿ ಯಾವ ಮನೆಗಳಿಂದ ಸ್ಯಾನಿಟರಿ ಅಥವಾ ಡೈಪರ್ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತದೆಯೋ ಆ ಮನೆಯವರಿಗೆ ಮಾತ್ರ ನಾವುಗಳು 150 ರೂ. ಚಾರ್ಜ್ ಮಾಡುತ್ತೇವೆ. ಕೇವಲ ಹಸಿ ಮತ್ತು ಒಣ ಕಸಗಳ ವಿಲೇವಾರಿಗಾಗಿ ಪ್ರತಿ ಮನೆಗಳಿಗೆ ಪ್ರತಿ ತಿಂಗಳು ಕೇವಲ 100 ರೂ. ಮಾತ್ರ ಶುಲ್ಕ ವಿಧಿಸುತ್ತೇವೆ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಬಿ. ಶೆಟ್ಟಿ ಹೇಳಿಕೊಂಡಿದ್ದಾರೆ.
ಇತರೆ ಹಸಿ, ಒಣ ಕಸಕ್ಕಿಂದ ಈ ಡೈಪರ್ ಮತ್ತು ಸ್ಯಾನಿಟರಿ ವೇಸ್ಟ್‌ಗಳ ವಿಲೇವಾರಿ ಬಹುದೊಡ್ಡ ಸಮಸ್ಯೆಯ ಬೆಟ್ಟವಾಗಿ ಪರಿಣಮಿಸಿದೆ. ಈಗ ಮಾರುಕಟ್ಟೆಯಲ್ಲಿ ಸಿಗುವ ಡೈಪರ್ ಆಗಿರಲಿ ಅಥವಾ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಅಂಶವಿದೆ. ಇದು ಸ್ವಾಭಾವಿಕವಾಗಿ ಕರಗುವಂಥದ್ದಲ್ಲ. ಹಾಗಾಗಿ ಇದನ್ನು ಎಲ್ಲೆಂದರಲ್ಲಿ ಡಂಪ್ ಮಾಡುವಂತಿಲ್ಲ ಜೊತೆಗೆ ಇದನ್ನು ಸುಡುವ ಹಾಗೆಯೂ ಇಲ್ಲ. ವಿಶೇಷವಾಗಿ ಈ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಎಂದು ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ: ಅಸ್ವಸ್ಥಗೊಂಡ ಯುವತಿಗೆ ನೆರವಾದ ಖಾಸಗಿ ಬಸ್ ಚಾಲಕ, ನಿರ್ವಾಹಕ
ಇದು ಕೇವಲ ಕಟಪಾಡಿ ಗ್ರಾಮದ ಸಮಸ್ಯೆಯಲ್ಲ, ನಮ್ಮ ದೇಶದಲ್ಲಿಯೇ ಡೈಪರ್ ಮತ್ತು ಸ್ಯಾನಿಟರಿ ವೇಸ್ಟ್‌ಗಳ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ಸ್ಯಾನಿಟರಿ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ದಹನ ಯಂತ್ರ ಅಥವಾ ಇನ್ಸಿನರೇಟರ್‌ಗಳು ಎಲ್ಲಾ ಕಡೆಗಳಲ್ಲಿ ಇಲ್ಲದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಇಲ್ಲೂ ಕೂಡಾ ಈ ವ್ಯವಸ್ಥೆಯಿಲ್ಲ. ಉಡುಪಿ ವ್ಯಾಪ್ತಿಯ ಸ್ಯಾನಿಟರಿ ತ್ಯಾಜ್ಯಗಳನ್ನು ಮೂಲ್ಕಿಯಲ್ಲಿರುವ ರಾಮ್ಕಿ ಸಂಸ್ಥೆಯ ಬಯೋಮೆಡಿಕಲ್ ವೇಸ್ಟ್ ಮ್ಯಾನೆಜ್‌ಮೆಂಟ್‌ನಲ್ಲಿ ಇನ್ಸಿಲರೇಶನ್ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕೆ ಪ್ರತಿ ಕೆ.ಜಿ ಗೆ 30 ರೂ. ಶುಲ್ಕವನ್ನು ಅವರು ವಿಧಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲೂ ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸಿ ಅದನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಇದೀಗ ಪಡುಬಿದ್ರಿಯಲ್ಲಿ ಪ್ರಾಯೋಗಿಕ ಇನ್ಸಿನರೇಟರ್ ವ್ಯವಸ್ಥೆ ಮಾಡಲಾಗಿದೆ. ಈ ಪ್ರಯೋದಲ್ಲಿ ಯಶಸ್ಸು ಕಂಡರೆ ಪ್ರತಿ ಕಡೆಗಳಲ್ಲೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಮತ್ತು ಇದರಿಂದ ವೇಸ್ಟೇಜ್ ಚಾರ್ಜ್ ಕೂಡಾ ಕಮ್ಮಿಯಾಗಬಹುದು ಎಂದು EO ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Tue, 13 August 24