
ಉಡುಪಿ, ಅಕ್ಟೋಬರ್ 15: ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ಕೊಡೇರಿಯ ಹೊಸಹಿತ್ಲು ಕಡಲ ತೀರದಲ್ಲಿ ನಡೆದಿರುವ ಈ ದುರಂತ, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ನೀರುಪಾಲಾದವರೆಲ್ಲರೂ ವಿದ್ಯಾಭ್ಯಾಸ ಮಾಡುತ್ತಿರುವ ಪುಟ್ಟ ಮಕ್ಕಳು. ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ, ಮುಳುಗಡೆಯಾಗಿದ್ದಾರೆ. ಈ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದ್ದಾರೆ. ಕಡಲ ಮಕ್ಕಳ ಈ ಸಾಹಸ ಫಲ ನೀಡಲಿಲ್ಲ. ಅಷ್ಟರಲ್ಲಿಯೇ ಕಡಲ ಅಲೆಗಳಲ್ಲಿ ಮೂವರು ಮಕ್ಕಳು ಉಸಿರು ಚೆಲ್ಲಿದ್ದಾರೆ. ತಕ್ಷಣವೇ ಶವಗಳನ್ನು ಮೇಲಕ್ಕೆತ್ತಲಾಗಿದೆ.
ಕಿರಿಮಂಜೇಶ್ವರ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ 15 ವರ್ಷ ವಯಸ್ಸಿನ ಆಶಿಶ್ ದೇವಾಡಿಗ, ಕಿರಿ ಮಂಜೇಶ್ವರ ಹೈಸ್ಕೂಲ್ನಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷ ವಯಸ್ಸಿನ ಸೂರಜ್ ಪೂಜಾರಿ ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ 18 ವರ್ಷ ವಯಸ್ಸಿನ ಸಂಕೇತ ದೇವಾಡಿಗ ಮೃತ ಬಾಲಕರು. ಕೂಲಿ ಮಾಡಿ ಜೀವನ ನಡೆಸುವ ಮನೆಯಿಂದ ಬಂದ ಈ ಮಕ್ಕಳ ಈ ಸಾವನ್ನು ಅರಗಿಸಿಕೊಳ್ಳಲು ಕುಟುಂಬ ಮಾತ್ರವಲ್ಲ, ಊರಿನವರಿಗೂ ಸಾಧ್ಯವಾಗುತ್ತಿಲ್ಲ. ವಿಷಯ ತಿಳಿಯುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಮಕ್ಕಳ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಕಡಲ ತೀರಗಳಿಗೆ ಹೋಗುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ಹವಾಮಾನದ ವೈಪರೀತ್ಯಗಳನ್ನು ಅಂದಾಜಿಸಲು ಬರುವುದಿಲ್ಲ. ಸ್ಥಳೀಯರೇ ಇಲ್ಲಿ ದುರಂತದಲ್ಲಿ ಮೃತಪಟ್ಟಿರುವುದರಿಂದ ಬೇರೆ ಊರುಗಳಿಂದ ಬಂದವರು ಕಡಲಿಗಿಳಿಯುವಾಗ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.