ಉಡುಪಿ: ಯಕ್ಷಗಾನ ಕಲಾರಂಗ ಎಂಬ ಸಂಘಟನೆ ಕಲಾವಿದರಿಗೆ ವಿಮೆ, ಬಸ್ ಪಾಸ್, ತುರ್ತು ಸಂದರ್ಭಗಳಲ್ಲಿ ನೆರವು ಆಶ್ರಯ ನೀಡುವ ಮೂಲಕ ಯಕ್ಷಗಾನ ಕಲಾರಂಗ ಸಂಸ್ಥೆಯು ಅಪರೂಪದ ಕಲಾ ಸೇವೆ ನಡೆಸುತ್ತಿದೆ. ವಾರ್ಷಿಕ 20 ಮಂದಿ ಕಲಾವಿದರಿಗೆ ಗೌರವಾನ್ವಿತ ಪ್ರಶಸ್ತಿಗಳನ್ನು ಕೂಡ ಈ ಸಂಸ್ಥೆ ನೀಡುತ್ತಿದೆ. ಈ ನಡುವೆ ಕಳೆದ ಒಂದುವರೆ ದಶಕದಿಂದ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿರುವ ಸಂಸ್ಥೆಯು, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ವಿದ್ಯಾಪೋಷಕ್ (vidya poshak) ಎಂಬ ಹೆಸರಿನಲ್ಲಿ ಶೇಕಡ 80ಕ್ಕೂ ಅಧಿಕ ಅಂಕ ಪಡೆದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಈ ಸಾಲಿನಲ್ಲಿ 1150 ವಿದ್ಯಾರ್ಥಿಗಳಿಗೆ 90 ಲಕ್ಷ ರೂಪಾಯಿ ಸ್ಕಾಲರ್ಶಿಪ್ ನೀಡಿದೆ.
ಪ್ರತಿ ವಿದ್ಯಾರ್ಥಿಗೂ ದಾನಿಯನ್ನು ಹುಡುಕಿ ಅವರ ಮೂಲಕ ವಾರ್ಷಿಕ ವಿದ್ಯಾರ್ಥಿಯ ವಾರ್ಷಿಕ ಶುಲ್ಕವನ್ನು ನೀಡಿ ಸಹಾಯ ಹಸ್ತ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿ ವೇತನ ನೀಡುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಸಂದರ್ಶಿಸಲಾಗುತ್ತದೆ. ಹೀಗೆ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಬಡ ವಿದ್ಯಾರ್ಥಿಗಳಿಗೆ ದಾನಿಗಳಿಂದ ಮನೆ ಕಟ್ಟಿಸಿ ಕೊಡುವ ಕಾರ್ಯವನ್ನು ಕಳೆದ 8 ವರ್ಷಗಳಿಂದ ನಡೆಸಲಾಗುತ್ತಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಪ್ರವರ್ತಕರಾದ ಎಚ್.ಎಸ್. ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಮಂಜುಶ್ರೀ ಹಾಗೂ ಪೂರ್ಣಿಮಾ ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ ಉದ್ಘಾಟನೆಗೊಂಡಿದೆ.
ಈ ಎರಡೂ ಮನೆಗಳು ಸೇರಿ ಸಂಸ್ಥೆ ಈವರೆಗೆ 36 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಈಗಾಗಲೇ 36 ಮನೆಗಳನ್ನು ಪೂರ್ಣಗೊಳಿಸಿದ್ದು, ಇನ್ನು 14 ಮನೆಗಳನ್ನು ನಿರ್ಮಿಸಿ ಕೊಡುವ ಉದ್ದೇಶ ಹೊಂದಿದೆ. ಅನೇಕ ದಾನಿಗಳು ಈ ಮಹತ್ಕಾರ್ಯದಲ್ಲಿ ಕೈಜೋಡಿಸಿದ್ದು, ಮನೆಯಲ್ಲಿ ಶುಭಕಾರ್ಯ ನಡೆದ ವೇಳೆಯಲ್ಲಿ, ಅಥವಾ ವರ್ಷಕ್ಕೆ ಇಂತಿಷ್ಟು ಎಂದು ನೆರವು ನೀಡುವ ನೆಪದಲ್ಲಿ ಕೋಟ್ಯಾಂತರ ರೂಪಾಯಿಯನ್ನು ಮಕ್ಕಳ ಮನೆ ನಿರ್ಮಾಣಕ್ಕೆ ದಾನಿಗಳು ನೀಡಿದ್ದಾರೆ.
ಇದನ್ನೂ ಓದಿ:ಉಡುಪಿಯ ಕಡಲ ತೀರದಲ್ಲಿ ಹಿಮಾಲಯ ಅಘೋರಿಗಳಿಂದ ಗೌಪ್ಯವಾಗಿ ನಡೆಯುತ್ತಿದೆ ಮಹಾಯಾಗ
ಪ್ರತಿಯೊಂದು ಮನೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ, ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಕೇವಲ ಐದಾರು ಲಕ್ಷದಲ್ಲಿ ಅದ್ಭುತ ಮನೆಗಳು ನಿರ್ಮಾಣಗೊಂಡಿವೆ. ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷರು ಸ್ವತಃ ಇಂಜಿನಿಯರ್ ಆಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳುತ್ತಿದ್ದಾರೆ. ಸಂಘಟನೆಯೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾನಿಗಳ ನೆರವು ಪಡೆದು ಇಷ್ಟು ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿರುವುದೇ ಊಹಿಸಲಾಗದ ಸಾಧನೆಯಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ