ಉಡುಪಿ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ, ಇಬ್ಬರು ಮಹಿಳೆಯರಿಗೆ ಗಾಯ

| Updated By: ವಿವೇಕ ಬಿರಾದಾರ

Updated on: May 08, 2024 | 12:36 PM

ಕಳೆದ ವರ್ಷ ಹಾವೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿದ್ದ ಪಟಾಕಿ ಗೋಡೌನ್​ನಲ್ಲಿ ಸ್ಫೋಟ ಸಂಭವಿಸಿ ಹಲವರು ಮೃತಪಟ್ಟಿದ್ದರು. ಇದು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಎರಡೂ ಪ್ರಕರಣ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆಯ ಕಾಜೆ ಎಂಬ ಪ್ರದೇಶದಲ್ಲಿರುವ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಉಡುಪಿ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ, ಇಬ್ಬರು ಮಹಿಳೆಯರಿಗೆ ಗಾಯ
ಸಿಡಿಮದ್ದು ತಯಾರಿಕಾ ಘಟಕ
Follow us on

ಉಡುಪಿ, ಮೇ 08: ಕಾರ್ಕಳ (Karkala) ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆಯ ಕಾಜೆ ಎಂಬ ಪ್ರದೇಶದಲ್ಲಿರುವ ಸಿಡಿಮದ್ದು ತಯಾರಿಕಾ ಘಟಕದಲ್ಲಿ (Firecracker Manufacturing Unit) ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡ ಮಹಿಳೆಯರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಪ್ರತ್ಯೇಕ ಕಟ್ಟಡಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಿಡಿಮದ್ದು ತಯಾರಿಸಲಾಗುತ್ತಿತ್ತು. ಒಂದು ಕಟ್ಟಡದಲ್ಲಿ ಇಂದು (ಮೇ 08) ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ಮಹಿಳೆಯರಿಬ್ಬರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದು ಸಂಪೂರ್ಣ ಹಾನಿಯಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಬೆಂಗಳೂರು: ಯಲಹಂಕ ತಾಲೂಕಿನ ರಾಜಾನುಕುಂಟೆಯ ರಕ್ಷಾ ಆಸ್ಪತ್ರೆಯಲ್ಲಿ ಕೆಳಮಹಡಿಯಲ್ಲಿ ಮಂಗಳವಾರ (ಮೇ 07)ರ ಬೆಳಗ್ಗೆ 7 ಗಂಟೆ ಸುಮಾರಿಗೆ ದಟ್ಟ ಹೊಗೆ ಆವರಿಸಿತ್ತು. ಈ ಆಸ್ಪತ್ರೆಗೆ ಔಷಧಿ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬ ಹೊಗೆಯನ್ನು ನೋಡಿ ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾನೆ. ಕೆಳ ಮಹಡಿಯಲ್ಲಿ ಆರಂಭವಾದ ಹೊಗೆ ನಾಲ್ಕೂ ಮಹಡಿಗೆ ಆವರಿಸಿದೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಹಾಗೂ ಹೋರ ರೋಗಿಗಳು ಹೊರಗಡೆ ಓಡಿ ಬಂದಿದ್ದು ಅಪಘಾತದಿಂದ ಪಾರಾಗಿದ್ದಾರೆ.

ಇನ್ನು ಆಸ್ವತ್ರೆಯ ಮೂರನೆ ಮಹಡಿಯ ಐಸಿಯುನಲ್ಲಿದ್ದ 14 ಜನ ರೋಗಿಗಳು ಹಾಗೂ ನಾಲ್ಕನೆ ಮಹಡಿಯ ರೂಂಗಳಲ್ಲಿದ್ದ ಸಿಬ್ಬಂದಿ ಸೇರಿದಂತೆ 30 ಜನ ಬೆಂಕಿ ಕಂಡು ಆತಂಕಕ್ಕೀಡಾಗಿ ಮಹಡಿ ಮೇಲೆಯೆ ಸಿಲುಕಿದ್ದಾರೆ. ಹೀಗಾಗಿ ಮಹಡಿ ಮೇಲೆ ಸಿಲುಕಿದ್ದವರನ್ನ ಕಂಡ ಅಕ್ಕ-ಪಕ್ಕದ ಬಿಲ್ಡಿಂಗ್ ನಿವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್​​ಗಳನ್ನು ಹಾಕಿಕೊಂಡು ಒಳನುಗ್ಗಿ ಎಲ್ಲರನ್ನೂ ಸುರಕ್ಷಿತವಾಗಿ ಹೊರಗಡೆ ಕರೆತರುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇನ್ನೂ ಕೆಳ ಮಹಡಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಆಸ್ವತ್ರೆಯ ಎರಡನೇ ಮಹಡಿಗೂ ಆವರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಪಟಾಕಿ ದುರಂತ: ಓರ್ವ ಕಾರ್ಮಿಕ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ!

ಸ್ಪಾನಲ್ಲಿ ಹೊತ್ತಿಕೊಂಡ ಬೆಂಕಿ

ಬೆಂಗಳೂರು: ಸ್ಪಾನಲ್ಲಿ ಬೆಂಕಿ ಹೊತ್ತಿಕೊಂಡ ಧಗಧಗನೆ ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ನಡೆದಿದೆ. ಮಂಗಳವಾರ (ಮೇ 07) ನಸುಕಿನ ಜಾವ ತಾರಾ ಹೆಸರಿನ ಸ್ಪಾನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಸ್ಪಾನಲ್ಲಿ ದೀಪ ಹಚ್ಚಿದ್ದು, ದೀಪ ಕೆಳಗೆ ಬಿದ್ದು ಬೆಂಕಿ ಹೊತ್ತಿ ಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲು, ಎರಡು ಮತ್ತು ನಾಲ್ಕನೇ ಮಹಡಿಯಲ್ಲಿ ಬಟ್ಟೆ ಮಳಿಗೆಗಳು ಸೇರಿದಂತೆ ಇನ್ನಿತರ ಮಳಿಗೆಗಳಿವೆ. ಮೂರನೇ ಮಹಡಿಯಲ್ಲಿದ್ದ ಸ್ಪಾನಲ್ಲಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಕೆನ್ನಾಲಿಗೆ ಹೊರಭಾಗಕ್ಕೂ ಆವರಿಸಿದ್ದು, ಘಟನೆಯಿಂದ ಕೆಲವೊತ್ತು ಸ್ಥಳದಲ್ಲಿ ಆತಂಕ ಮನೆ ಮಾಡಿತ್ತು.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇನ್ನು ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಪಾವನ್ನು ಯಾವುದೇ ಅನುಮತಿ ಇಲ್ಲದೆ ತೆರೆಯಲಾಗಿತ್ತು ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Wed, 8 May 24