ಉಡುಪಿ, ಜುಲೈ 29: ಉಡುಪಿಯ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಓರ್ವ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಬಿಜೆಪಿ (BJP) ಪ್ರತಿಭಟನೆ ನಂತರ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು,
ಇದೀಗ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಲಾಗಿದೆ. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ಉಡುಪಿ ಎಸ್ಪಿ ಅಕ್ಷಯ್ ನೇಮಕ ಮಾಡಿದ್ದಾರೆ.
ಆರಂಭದಿಂದ ತನಿಖೆ ನಡೆಸಿಕೊಂಡು ಬಂದಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡರನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಅದರಂತೆಯೇ ಇದೀಗ ಬದಲಾವಣೆ ಮಾಡಿ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪರಿಗೆ ತನಿಖೆ ವಹಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಮತ್ತು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ದಕ್ಷ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಅವರು ಕಾರ್ಯನಿರ್ವಹಿಸಿದ್ದರು.
ಸದ್ಯ ಐಜಿಪಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಮಹಿಳಾ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಎಲ್ಲ ಮೊಬೈಲ್ಗಳ ಕಾಲ್ ಡೀಟೇಲ್ಸ್ಗಳನ್ನು ಪತ್ತೆ ಹಚ್ಚಿದ್ದು, ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಜೊತೆಗೆ ಅನಗತ್ಯ ವ್ಯಕ್ತಿಗಳು ಕಾಂಪೌಂಡ್ ಆವರಣದಲ್ಲಿ ಓಡಾಟ ಆರೋಪ ಕೇಳಿಬಂದಿದ್ದು, ಕಾಲೇಜು ಆವರಣದಲ್ಲಿನ ಸಿಸಿ ಕ್ಯಾಮರಾಗಳ ಫೂಟೇಜ್ನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Udupi News: ನೇತ್ರ ಜ್ಯೋತಿ ಕಾಲೇಜು ಆಡಳಿತ ಮಂಡಳಿಯವರಿಗೆ ನಿರೀಕ್ಷಣಾ ಜಾಮೀನು
ಸಿಎಂ ಸಿದ್ಧರಾಮಯ್ಯ ಈ ಕುರಿತಾಗಿ ಮಂಡ್ಯದಲ್ಲಿ ಮಾತನಾಡಿದ್ದು, ಈಗಾಗಲೇ ಎಫ್ಐಆರ್ ದಾಖಲು ಆಗಿದೆ. ಕಾನೂನು ಪ್ರಕಾರ ಕ್ರಮ ತೆಗದುಕೊಳ್ಳುತ್ತೇವೆ. ಅದರ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಿಜೆಪಿ ಅವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಮಣಿಪುರ ಹೊತ್ತಿ ಉರಿಯುತ್ತಿದೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಲ್ಲಿ ಮಹಿಳೆಯರ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮರಾ ಅಂತಿದ್ದೀರಾ. ಕಾಂಗ್ರೆಸ್, ಬಿಜೆಪಿಯವರು ನಮ್ಮನ್ನು ತೋರಿಸಿ ವೋಟ್ ಪಡೆದರು. ಎರಡೂ ಪಕ್ಷಗಳು ಜೆಡಿಎಸ್ ಕಡೆ ಬೆರಳು ಮಾಡಿ ವೋಟ್ ಪಡೆದವು. ಭಯೋತ್ಪಾದನೆ ಶುರುವಾಗುತ್ತಿದೆ ಅನ್ನೋದು ಅವರಿಗೆ ಚುನಾವಣೆ ವಿಷಯ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:21 pm, Sat, 29 July 23