ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇನಲ್ಲಿ150 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲು ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇ ಪರಿಶೀಲಿಸಿ 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಾನು ಹೋಗಿ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysore Expressway) ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ಕೆಲ ಸೌಲಭ್ಯ ಆಗಬೇಕಿದೆ ಅಷ್ಟೆ. ಈಗಾಗಲೇ ಅಧಿಕಾರಿಗಳಿಗೆ ನಾವು ಸೂಚನೆ ಕೊಟ್ಟಿದ್ದೇವೆ. 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಾನು ಹೋಗಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಜೊತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ಇಂದು (ಜು.29) ಮಂಡ್ಯ (Madya) ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಗ್ರಾಮದ ಬಳಿ ಎಕ್ಸಪ್ರೆಸ್ವೇ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಪಘಾತಗಳ ತಡೆಗೆ ಹೈವೇ ಪಕ್ಕ ಸ್ಪೀಡ್ ಮೀಟರ್ ಅಳವಡಿಸಲಾಗಿದೆ. 10 ಕಿ.ಮೀ. ಅಂತರದಲ್ಲಿ ಮೀಟರ್ ಅಳವಡಿಸಿದರೆ ಅನುಕೂಲ ಆಗಲಿದೆ. ಎನ್ಹೆಚ್ಎಐ ಅಧಿಕಾರಿಗಳ ಜೊತೆ ನಮ್ಮ ಅಧಿಕಾರಿಗಳು ಸಭೆ ಮಾಡಿದ್ದಾರೆ ಎಂದು ತಿಳಿಸಿದರು.
ಎಕ್ಸಪ್ರೆಸ್ವೇಯಲ್ಲಿ ವೇಗದ ಮಿತಿ ಇರಲಿಲ್ಲ. ಇದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿತ್ತು. ಜೂನ್ನಲ್ಲಿ ಹೆಚ್ಚು ಅಪಘಾತವಾಗಿದ್ದವು. ಜುಲೈನಲ್ಲಿ ಅಪಘಾತ ಪ್ರಮಾಣ ಇಳಿಕೆಯಾಗಿದೆ. ಜೂನ್ ತಿಂಗಳಲ್ಲಿ 20 ಅಪಘಾತಗಳಾಗಿದ್ದರೆ, ಜುಲೈನಲ್ಲಿ 5 ಅಪಘಾತಗಳು ಸಂಭವಿಸಿವೆ. ಹೆಚ್ಚುವರಿ ಕಾಮಗಾರಿ ಕೆಲಸ ನವೆಂಬರ್ ಬಳಿಕ ಆರಂಭವಾಗುತ್ತೆ ಎಂದ ಹೇಳಿದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇಯಲ್ಲಿ ಅಪಘಾತ ಸಂಖ್ಯೆ ಏರಿಕೆ: ಲೋಕಸಭೆಯಲ್ಲಿ ಸಚಿವ ನಿತಿನ್ ಗಡ್ಗರಿ ಉತ್ತರ
ಗುತ್ತಿಗೆದಾರರ ಬಿಲ್ ಬಾಕಿ ವಿಚಾರವಾಗಿ ಮಾತನಾಡಿದ ಅವರು ಗುತ್ತಿಗೆದಾರರ ಬಿಲ್ ಬಾಕಿ ನಾವು ಉಳಿಸಿಕೊಂಡಿಲ್ಲ, ಹಿಂದಿನ ಸರ್ಕಾರ ಉಳಿಸಿಕೊಂಡಿತ್ತು. ಟೋಲ್ ಸಂಗ್ರಹ ನಾವು ಮಾಡಲ್ಲ. ಎನ್ಹೆಚ್ಎಐನವರು ಮಾಡುವುದು. ದೆಹಲಿಗೆ ಹೋಗಿ ಮಾತನಾಡುವೆ ಎಂದರು.
ಬಿಜೆಪಿ ಅವರು ಹೆಣದ ಮೇಲೆ ರಾಜಕೀಯ ಮಾಡುವವರು
ಉಡುಪಿ ವಿಡಿಯೋ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ ಎಫ್ಐಆರ್ ದಾಖಲು ಆಗಿದೆ. ಕಾನೂನು ಪ್ರಕಾರ ಕ್ರಮ ತೆಗದುಕೊಳ್ಳುತ್ತೇವೆ. ಅದರ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಿಜೆಪಿ ಅವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂದು ಹರಿಹಾಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 29 July 23