ಸುರತ್ಕಲ್​ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲಿ ಅಪರಿಚಿತ ಕಾರು, ಮೈಕ್ರೋ ಸಿಮ್ ಪತ್ತೆ

| Updated By: ಆಯೇಷಾ ಬಾನು

Updated on: Jul 31, 2022 | 4:00 PM

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಹುಂಡೈ ಕಾರು ಪತ್ತೆಯಾಗಿದ್ದು ಮಂಗಳೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸುರತ್ಕಲ್​ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲಿ ಅಪರಿಚಿತ ಕಾರು, ಮೈಕ್ರೋ ಸಿಮ್ ಪತ್ತೆ
ಉಡುಪಿಯಲ್ಲಿ ಅಪರಿಚಿತ ಕಾರು ಪತ್ತೆ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರ ಸರಣಿ ಹತ್ಯೆ ನಡೆದಿದೆ. ಪ್ರವೀಣ್ ನೆಟ್ಟಾರ(Praveen Nettar) ಹತ್ಯೆಯಾದ ಬಳಿಕ ಸುರತ್ಕಲ್​ನಲ್ಲಿ ಫಾಜಿಲ್(Fazil) ಹತ್ಯೆ ನಡೆದಿದೆ. ಮುಸುಕುಧಾರಿ ಹಂತಕರು ಕಾರಿನಲ್ಲಿ ಬಂದಿಳಿದು ಫಾಜಿಲ್​ನನ್ನು ಅಟ್ಟಾಡಿಸಿ ಕೊಲೆ(Murder) ಮಾಡಿದ್ದರು. ಸದ್ಯ ಈಗ ಹಂತಕರು ಬಳಿಸಿದ್ದ ಕಾರು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಅಪರಿಚಿತ ಕಾರು ಪತ್ತೆಯಾಗಿದೆ. ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಳಿ ಬಣ್ಣದ ಇಯಾನ್​ ಕಾರು ಪತ್ತೆಯಾಗಿದ್ದು ಮಂಗಳೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮಂಗಳೂರಿನ ಸುರತ್ಕಲ್‌ನಲ್ಲಿ ಯುವಕ ಫಾಜಿಲ್‌ನನ್ನು ಕೊಂದು ಕಾರಿನಲ್ಲಿ ಪರಾರಿಯಾಗಿದ್ದ ಕೊಲೆಗಡುಕರು ಕೊಲೆ ನಡೆದ 500 ಮೀಟರ್ ದೂರದಲ್ಲಿ ಕಾರು ಪಾರ್ಕ್ ಮಾಡಿದ್ರು. ಕೊಲೆಗಡುಕರು ಹುಂಡೈ ಇಯಾನ್ ಕಾರಿನಲ್ಲಿ ಕುಳಿತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಈಗ ಉಡುಪಿಯಲ್ಲಿ ಕಾರು ಪತ್ತೆಯಾಗಿದೆ. ಹಂತಕರು ಕೊಲೆ ಮಾಡಿ ಉಡುಪಿಗೆ ಬಂದು ಅಲ್ಲಿ ಕಾರನ್ನು ಬಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ 2 ದಿನಗಳಿಂದ ಇಯಾನ್​ ಕಾರು ನಿಂತಲ್ಲೇ ನಿಂತಿದೆ. ಫಾಜಿಲ್ ಹತ್ಯೆ ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಹಂತಕರು ಪರಾರಿಯಾಗಿದ್ದಾರೆ. ಪಡುಬಿದ್ರೆ ಪೊಲೀಸರು ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ಲಿಮ್ಸಿ ಡಿಂಪಲ್ ಡಿಸೋಜಾ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ. ಬೆರಳಚ್ಚು ತಜ್ಞರಿಂದ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪೊಲೀಸರು ಕಾರಿನ ಮೇಲೆ ಟಾರ್ಪಲ್​ ಮುಚ್ಚಿದ್ದಾರೆ. ಸ್ಥಳದ ಬಗ್ಗೆ ಗೊತ್ತಿರುವವರೇ ಕಾರು ಇಲ್ಲಿಗೆ ತಂದು ನಿಲ್ಲಿಸಿರುವ ಶಂಕೆ ವ್ಯಕ್ತವಾಘಿದೆ. ನಿರ್ಜನ ಪ್ರದೇಶವೆಂಬ ಕಾರಣಕ್ಕೆ ಕಾರು ನಿಲ್ಲಿಸಿ ತೆರಳಿರುವ ಸಾಧ್ಯತೆ ಇದೆ.

ಹತ್ಯೆಗೆ ಬಳಸಿದ್ದ ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆ

ಇನ್ನು ಲೊಕೇಶನ್ ತಪ್ಪಿಸಲು ಆರೋಪಿಗಳು ಕಾರಿನಲ್ಲೇ ಸಿಮ್ ಬಿಟ್ಟು ಹೋಗಿದ್ದಾರೆ. ಕಾರಿನ ಹಿಂಬದಿ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲ್, ಚಿಲ್ಲರೆ ಹಣ ಪತ್ತೆಯಾಗಿದೆ. ಕೃತ್ಯಕ್ಕೆ ಬಳಿಸಿದ ಕಾರನ್ನು ಇಲ್ಲೇ ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಕಾರಿನ ಮಾಲೀಕ ಅಜಿತ್​ ಮನೆ ಸುತ್ತಮುತ್ತ ಪೊಲೀಸ್​ ಬಿಗಿ ಭದ್ರತೆ

ಹತ್ಯೆಗೆ ಬಳಸಿದ್ದ ಕಾರು ಮಾಲೀಕ ಅಜಿತ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಪ್ರೇಮ್​ನಗರದಲ್ಲಿರುವ ಕಾರಿನ ಮಾಲೀಕ ಅಜಿತ್​ ಬಾಡಿಗೆ ಮನೆ ಸುತ್ತಮುತ್ತ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಜಿತ್​ ಮಾಹಿತಿ ಮೇರೆಗೆ ಶಂಕಿತರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕೋಡಿಕೆರೆ ಪರಿಸರದಲ್ಲಿ ಸುರತ್ಕಲ್ ಠಾಣೆ ಪೊಲೀಸರು, ಕೆಎಸ್​ಆರ್​​ಪಿ ತುಕಡಿ ನಿಯೋಜನೆ ಮಾಡಲಾಗಿದ್ದು ಸುಮಾರು 3 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಪೊಲೀಸ್​ ಕಣ್ಗಾವಲಿದೆ. ಕೋಡಿಕೆರೆ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಭದ್ರತೆ ಕೈಗೊಳ್ಳಲಾಗಿದೆ.

ಅಜಿತ್ ಮುಸ್ಲಿಂ ಕುಟುಂಬಕ್ಕೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಮನೆಯ ಪಕ್ಕದಲ್ಲೇ ಹೊಸ ಮನೆ ಕಟ್ಟಿಸುತ್ತಿದ್ದಾರೆ. 4 ಬಾಡಿಗೆ ವಾಹನ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ಅಜಿತ್ ಫಾಜಿಲ್ ಹಂತಕರ ಪೈಕಿ ಒಬ್ಬನ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಜಿತ್ ಮಾಹಿತಿ ಮೇರೆಗೆ ಇನ್ನಷ್ಟು ಆರೋಪಿಗಳ ಬಂಧನವಾಗಲಿದೆ. ಪೊಲೀಸರು 50ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Published On - 3:05 pm, Sun, 31 July 22