ಚೌಕಿಯಲ್ಲಿ ಬಣ್ಣ ಕಳಚುತ್ತಿದ್ದ ವೇಳೆ ಹೋಯಿತು ಮಹಿಷಾಸುರ ಪಾತ್ರಧಾರಿಯ ಪ್ರಾಣ

ಮಂದಾರ್ತಿ ಯಕ್ಷಗಾನ ಮೇಳದ ಕಲಾವಿದ ಈಶ್ವರ ಗೌಡ, ಮಹಿಷಾಸುರ ಪಾತ್ರ ನಿರ್ವಹಿಸಿ ಚೌಕಿಗೆ ಬಂದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಂದಾಪುರದ ಸೌಡದಲ್ಲಿ ನಡೆದ ಈ ದುರಂತ ಯಕ್ಷಗಾನ ಲೋಕಕ್ಕೆ ಆಘಾತ ತಂದಿದೆ. ಮಹಿಷಾಸುರ ಪಾತ್ರ ಮಾಡುತ್ತಿದ್ದ ಈಶ್ವರ ಗೌಡ, ತುಂಬಾ ಸುಸ್ತಾಗಿರುವ ಬಗ್ಗೆ ರಂಗಸ್ಥಳದಲ್ಲೇ ದೇವಿ ಪಾತ್ರಧಾರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಚೌಕಿಯಲ್ಲಿ ಬಣ್ಣ ಕಳಚುತ್ತಿದ್ದ ವೇಳೆ ಹೋಯಿತು ಮಹಿಷಾಸುರ ಪಾತ್ರಧಾರಿಯ ಪ್ರಾಣ
ಈಶ್ವರ ಗೌಡ

Updated on: Nov 21, 2025 | 10:59 AM

ಕುಂದಾಪುರ, ನ.21: ಮಂದಾರ್ತಿ ಯಕ್ಷಗಾನ ಮೇಳದ ಕಲಾವಿದರೊಬ್ಬರು (Yakshagana artist death) ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸಿ, ಚೌಕಿಗೆ ಬಂದು ಬಣ್ಣ ಕಳಚುತ್ತಿದ್ದ ವೇಳೆ ಹೃದಯಘಾತವಾಗಿ ಸಾವಿನ್ನಪ್ಪಿದ್ದಾರೆ. ಈ ಘಟನೆ ಕುಂದಾಪುರದ ಸೌಡದಲ್ಲಿ ನಡೆದಿದೆ. ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಈಶ್ವರ ಗೌಡ ಎಂಬ ಯಕ್ಷಗಾನ ಕಲಾವಿದ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 2ನೇ ಮೇಳದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಬುದ್ಧವಾರ ರಾತ್ರಿ ಸೌಡದ ಮಾಲಾಡಿಯಲ್ಲಿ ಆಯೋಜಿಸಲಾಗಿದ್ದ ದೇವಿ ಮಹ್ಮಾತೆ ಯಕ್ಷಗಾನದಲ್ಲಿ ಅದ್ಭುತವಾದ ಮಹಿಷಾಸುರ ಪ್ರದರ್ಶನ ನೀಡಿದ್ದ ಈಶ್ವರ ಗೌಡ ಚೌಕಿಗೆ ಬಂದು ಬಣ್ಣ ತೆಗೆಯುವ ವೇಳೆ ತೀವ್ರ ಎದೆ ನೋವು ಬಂದು ಸಾವನ್ನಪ್ಪಿದ್ದಾರೆ.

ದೇವಿ ಪಾತ್ರಧಾರಿ ಹೇಳಿದ್ದೇನು?

ಮಹಿಷಾಸುರ ಪಾತ್ರ ಮಾಡುತ್ತಿದ್ದ ಈಶ್ವರ ಗೌಡ, ತುಂಬಾ ಸುಸ್ತಾಗಿರುವ ಬಗ್ಗೆ ರಂಗಸ್ಥಳದಲ್ಲೇ ದೇವಿ ಪಾತ್ರಧಾರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ ಈಶ್ವರ ಗೌಡ ಸುಸ್ತಾಗಿರುವುದನ್ನು ಕಂಡು ದೇವಿ ಪಾತ್ರಧಾರಿ ಮಹಿಷ ವಧೆ ಸನ್ನಿವೇಶವನ್ನು ಬೇಗನೇ ಮುಗಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಈಶ್ವರ ಗೌಡ ಅವರು ಚೌಕಿ ಹೋಗಿ ಬಣ್ಣ ಕಳಚುವ ವೇಳೆ ಅವರು ಮೈ ತಣ್ಣಗಾಗುತ್ತಿದೆ, ಸುಸ್ತು, ಎದೆ ನೋವು, ರಕ್ತದೊತ್ತಡ ಕಡಿಮೆ ಆಗುತ್ತಿದೆ ಎಂದು ಸಹದ್ಯೋಗಿಗಳಲ್ಲಿ ಹೇಳಿದ್ದಾರೆ ಕೂಡಲೇ ಅವರನ್ನು ಬ್ಯಾಂಡ್​​​​​​ ಸೆಟ್​​​ನವರ ಕಾರಿನಲ್ಲಿ ಆಸ್ಪತ್ರೆ ಕರೆದೊಯ್ಯಲಾಯಿತು. ಆದರೆ ಆದಾಗಲೇ ಅವರ ಜೀವ ಹೋಗಿದೆ.

ಇದನ್ನೂ ಓದಿ: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ

ಇಲ್ಲಿದೆ ನೋಡಿ ವಿಡಿಯೋ:

ರಂಗಸ್ಥಳದಲ್ಲಿ ಕಲಾವಿದರ ಮರಣ

  • 2017 ಮಾ.24ರಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ಅರುಣಾಸುರನಾಗಿ ಪಾತ್ರ ನಿರ್ವಹಿಸುವ ವೇಳೆ ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
  • 2021 ಜ.5 ಮಂದಾರ್ತಿ ಯಕ್ಷಗಾನ ಮೇಳದ ಪ್ರಧಾನ ಪಾತ್ರಧರಿ ಸಾಧು ಕೊಠಾರಿ ಶಿರಿಯಾರದ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎಂಬಲ್ಲಿ ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
  • 2022 ಡಿ.22 ಪ್ರಸಂಗಕರ್ತ ಗುರುವಪ್ಪ ಬಾಯಾರು ಕಟೀಲು ಸರಸ್ವತಿ ಸದನದಲ್ಲಿ ನಡೆದ ತ್ರಿಜನ್ಮ ಮೋಕ್ಷದ ಶಿಶುಪಾಲನ ಪಾತ್ರ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು
  • 2024 ಮೇ 1ರಂದು ಕೋಟ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ ಜೋಗಿ ಅವರು ಪ್ರದರ್ಶನ ಮುಗಿಸಿ ಚೌಕಿಯಲ್ಲಿ ವೇಷ ಕಳಚುತಿದ್ದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Fri, 21 November 25