
ಉಡುಪಿ, ಮಾರ್ಚ್ 27: ಯಕ್ಷಗಾನ (Yakshagana) ಪ್ರದರ್ಶನ ನಡೆಯುತ್ತಿರುವ ವೇಳೆ ಪ್ರೇಕ್ಷಕರು ಶಿಳ್ಳೆ ಊದಿದ್ದಕ್ಕೆ ಹಿರಿಯ ಕಲಾವಿದರೊಬ್ಬರು ವೇಷದಲ್ಲಿದ್ದುಕೊಂಡೇ ರಂಗಸ್ಥಳದಿಂದಲೇ ಬೈದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೇನು ಭಾಗವತರ ಪದ್ಯ ಮುಗಿದು ಅರ್ಥ ಹೇಳಲು ವೇಷಧಾರಿ ಸಿದ್ಧನಾದಾಗ ಪ್ರೆಕ್ಷಕರು ಶಿಳ್ಳೆ ಊದಿದ್ದಾರೆ. ಆಗ ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ (Ujire Ashok Bhat) ಸಿಟ್ಟಿಗೆದ್ದು ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ. ದೊಂಬರಾಟ ಅಲ್ಲ ಇದು. ನಾನು ಆಗಿನಿಂದ ಚೌಕಿಯಲ್ಲಿದ್ದುಕೊಂಡು ಗಮನಿಸುತ್ತಿದ್ದೇನೆ. ಸಭ್ಯ ಸಭೆಯನ್ನು ಬಯಸುತ್ತೇನೆ. ನನಗೆ ದಾಕ್ಷಿಣ್ಯ ಯಾರದ್ದೂ ಇಲ್ಲ. ಇಲ್ಲಿ ಯಾಕೆ ಕುಣಿಯುತ್ತಿದ್ದೇವೆ ಗೊತ್ತುಂಟಾ ನಿಮಗೆ? ಯಾರು ಆಟ ಆಡಿಸುವವರು? ಏನೆಂದು ಯೋಚನೆ ಮಾಡಿದ್ದೀರಿ ನೀವು? ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಗೊತ್ತಿದೆಯಾ ನಿಮಗೆ? ಏನದು ಶಿಳ್ಳೆ? ಕೋಳಿಕಟ್ಟವಾ ಅಲ್ಲ ಕಂಬಳವಾ? ಯಾರದು? ಏನು ಆಲೋಚನೆ ಮಾಡಿದ್ದೀರಿ ನೀವು. ಯಾರದು ಶಿಳ್ಳೆ ಹಾಕಿದವ? ಆಗದಿದ್ದರೆ ಹೋಗು ಬನ್ಸ್ ತಿಂದು. ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ’ ಎಂದು ಉಜಿರೆ ಅಶೋಕ ಭಟ್ ಹೇಳಿದ್ದಾರೆ.
ಈ ವಿಚಾರ ಈಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅನೇಕ ಕಲಾಭಿಮಾನಿಗಳು ಉಜಿರೆಯವರ ಮಾತನ್ನು ಸಮರ್ಥಿಸಿದ್ದರೆ ಇನ್ನು ಅನೇಕರು ವಿರೋಧಿಸಿದ್ದಾರೆ. ಇನ್ನು ಕೆಲವರು ಹೇಳಿದ ವಿಚಾರ ಸರಿಯಾದರೂ ಮಾತನಾಡಿದ ರೀತಿ ಸರಿ ಇಲ್ಲ ಎಂದಿದ್ದಾರೆ.
‘ದಯವಿಟ್ಟು ತಪ್ಪು ಮಾಹಿತಿ ಹರಡುವುದು ಸರಿಯಲ್ಲ. ಇದು ಶಿಳ್ಳೆ ಹಾಕಿ ಪ್ರೋತ್ಸಾಹಿಸಿದ್ದಲ್ಲ. ತುಂಬಾ ಹೊತ್ತಿನಿಂದ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದ್ದ ವಿಷಯ. ಚೌಕಿಯಲ್ಲಿರುವಾಗಲೇ ಗಮನಿಸಿದ್ದೆ ಅಂತ ಅಶೋಕ ಭಟ್ರು ಹೇಳಿದ್ರು. ಇದು ಜಾತ್ರೆಗಳಲ್ಲಿ ಮಕ್ಕಳು ಊದುವ ಪೀಪಿ ತಂದು, ಯಕ್ಷಗಾನಕ್ಕೆ ಅಡ್ಡಿ ಮಾಡಿದ್ದು. ಚಪ್ಪಾಳೆ, ಶಿಳ್ಳೆಗೆ ಮಿತಿ ಬೇಕಷ್ಟೆ. ಈ ರೀತಿ ಊದಿದ್ದವರು ಯಕ್ಷಗಾನ ಆಸ್ವಾದಿಸುವವರಲ್ಲ’ ಎಂದು ಫೇಸ್ಬುಕ್ ಪೋಸ್ಟೊಂದಕ್ಕೆ ಕಲಾವಿದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ‘ಅಡ್ದಿ ಮಾಡಿದವರಿಗೆ ಗದರಿದ್ದಾರೆ ಅಂದುಕೊಳ್ಳೋಣ. ಕಂಬಳದ ಸುದ್ದಿ ಯಾಕೆ? ಕೋಳಿ ಅಂಕದ ಸುದ್ದಿ ಯಾಕೆ? ಡೊಂಬರಾಟದ ಸುದ್ದಿ ಯಾಕೆ ಯಕ್ಷಗಾನರಂಗಸ್ಥಳದಲ್ಲಿ? ಕಂಬಳ, ಕೋಳಿ ಅಂಕ, ಡೊಂಬರಾಟ ಅಂದ್ರೇನು ಟೇಕನ್ ಫಾರ್ ಗ್ರೇಂಟೆಡ್ ಅಂತಾ ಅಂದುಕೊಂಡ್ರಾ’ ಎಂಬ ಕಮೆಂಟ್ ಸಹ ವ್ಯಕ್ತವಾಗಿದೆ.
‘ಅವರು ಇಡೀ ಯಕ್ಷಗಾನ ಕಲಾಭಿಮಾನಿಗಳಿಗೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಬನ್ಸ್ ತಿಂದು ಹೋಗು ಎಂದು ಮೂದಲಿಸಿದ್ದು ಇವರ ದುರಹಂಕಾರದ ಪರಮಾವಧಿಯಾಗಿದೆ. ಅದರ ಜೊತೆಗೆ ಜಾನಪದ ಕ್ರೀಡೆಯಾದ ಕಂಬಳವನ್ನು ಅವಮಾನಿಸಿದ್ದಾರೆ. ಇವರ ಈ ಕೃತ್ಯವನ್ನು ಯಕ್ಷಗಾನದ ಅಭಿಮಾನಿಗಳು ಖಂಡಿತವಾಗಿ ಖಂಡಿಸಬೇಕು. ಇವರನ್ನು ಯಾರು ಸಹ ಯಾವುದೇ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ವೇದಿಕೆಗೆ ಆಹ್ವಾನಿಸಬೇಡಿ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಂಭಾಷಣೆ ವೇಳೆ ಶಿಳ್ಳೆ ಹೊಡೆದು ತೊಂದರೆ ಕೊಟ್ಟರೆ ತಪ್ಪು, ಇಲ್ಲಿ ಹಾಗೇನು ಆಗಿಲ್ಲ . ಪ್ರೇಕ್ಷರನ್ನು ಬೈದಿದ್ದು ತಪ್ಪು. ಯಕ್ಷಗಾನ ಬೆಳಕಿನ ಸೇವೆ. ಒಂದು ಯಕ್ಷಗಾನ ಬಯಲಾಟ ಮಾಡಬೇಕಾದರೆ 5 ಲಕ್ಷ ರೂ. ಬೇಕು, ಎಲ್ಲಿಯೋ ಸಾಲ ಮಾಡಿ ಸೇವೆ ಮಾಡಿಸಿದವರಿಗೆ ಆಟ ನೋಡಲು ಅವಕಾಶ ಸಿಗುವುದಿಲ್ಲ , ನಿಮ್ಮ ಅನುಕೂಲಕ್ಕೆ ತಕ್ಕಂತೆ 12 ಗಂಟೆಗೆ ಮುಗಿಸುವುದು ತಪ್ಪಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Video: ರಂಗದಲ್ಲಿ ಯಕ್ಷಗಾನ ಕಲಾವಿದನೊಂದಿಗೆ ಹೆಜ್ಜೆ ಹಾಕಿದ ಪುಟಾಣಿ
ಒಟ್ಟಿನಲ್ಲಿ, ಕಲಾವಿದರು ವೇಷಧಾರಿಯಾಗಿದ್ದುಕೊಂಡೇ ರಂಗಸ್ಥಳದಿಂದಲೇ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಈ ವಿಚಾರ ಸದ್ಯ ಕಲಾವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದಂತೂ ನಿಜ.
Published On - 2:28 pm, Fri, 27 March 26