ಒಂದು ತಿಂಗಳೊಳಗೆ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಅನುದಾನದ ಭರವಸೆ ನೀಡಿದ ಗಡ್ಕರಿ, ಆದರೆ…

|

Updated on: Jul 05, 2024 | 12:58 PM

ವಿವಿಧ ರಸ್ತೆ ನಿರ್ಮಾಣ ಯೋಜನೆಗಳಿಗೆ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಆದರೆ ಅದಕ್ಕೆ ಷರತ್ತು ಒಂದನ್ನು ಅವರು ಮುಂದಿಟ್ಟಿದ್ದಾರೆ. ಆ ಷರತ್ತು ಏನು ಎಂಬುದು ಇಲ್ಲಿದೆ.

ಒಂದು ತಿಂಗಳೊಳಗೆ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಅನುದಾನದ ಭರವಸೆ ನೀಡಿದ ಗಡ್ಕರಿ, ಆದರೆ...
ನಿತಿನ್ ಗಡ್ಕರಿ
Follow us on

ಬೆಂಗಳೂರು, ಜುಲೈ 5: ವಿವಿಧ ರಸ್ತೆ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಒಂದು ತಿಂಗಳೊಳಗೆ 2 ಲಕ್ಷ ಕೋಟಿ ರೂಪಾಯಿ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಿದ್ಧವಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಡಬೇಕು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದ ಗಡ್ಕರಿ, ‘ರಸ್ತೆ ಕಾಮಗಾರಿಗೆ ಒಂದು ತಿಂಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ನೀಡಲು ಸಿದ್ಧ ಎಂದು ಹೇಳಿದ್ದೆ. ಆದರೆ ಅವರಿಗೆ ನನ್ನ ಷರತ್ತೆಂದರೆ ಭೂಸ್ವಾಧೀನ ಮಾಡಿಕೊಳ್ಳುವುದು. ಅರಣ್ಯ ಇಲಾಖೆ ಮತ್ತಿತರ ಸಂಬಂಧಪಟ್ಟ ವಿಭಾಗಗಳಿಂದ ಅನುಮತಿ ಪಡೆಯುವುದು. ಇಂಥ ಕೆಲವು ಅಡೆತಡೆಗಳಿಂದಾಗಿ ಕರ್ನಾಟಕದಲ್ಲಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ನಾನು ಗಾಳಿಯಲ್ಲಿ ರಸ್ತೆಗಳನ್ನು ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ರಸ್ತೆ ಯೋಜನೆಗಳ ಪ್ರಸ್ತಾಪಗಳೊಂದಿಗೆ ಕರ್ನಾಟಕದ ಅನೇಕ ಸಂಸದರು ತಮ್ಮನ್ನು ಭೇಟಿಯಾಗಲು ಬರುತ್ತಾರೆ. ಅವರ ಬೇಡಿಕೆ ಏನೇ ಇರಲಿ, ನಾನು ಅನುಮೋದಿಸಿದ್ದೇನೆ. ಅವರಿಗಾಗಿ 3.5 ಲಕ್ಷ ಕೋಟಿ ರೂ.ಗಳ ಕಾಮಗಾರಿಯನ್ನು ಮಂಜೂರು ಮಾಡಿದ್ದೇನೆ. ನಾನು ಅವರಿಗೆ ಹೇಳುತ್ತೇನೆ, ಕೆಲಸ ಮಾಡಿರಿ ಮತ್ತು ನಾವು ಅದಕ್ಕೆ ಹಣ ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ಗೆ ಮುಕ್ತಿ ನೀಡಲು ನಿರ್ಮಾಣವಾಗಲಿದೆ ಎಲಿವೇಟೆಡ್ ರೋಟರಿ ಫ್ಲೈಓವರ್: ಏನಿದರ ವಿಶೇಷ? ಇಲ್ಲಿದೆ ವಿವರ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 2024 ರ ಡಿಸೆಂಬರ್ ಮೊದಲು ಪೂರ್ಣಗೊಳ್ಳಲಿದೆ ಮತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕೊಲ್ಲಲು ಪ್ರಯತ್ನಿಸಿದ್ದು ಕಾಂಗ್ರೆಸ್ ಎಂದು ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ