ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆಯಾ? ಹೀಗೊಂದು ಪ್ರಶ್ನೆ ಹುಟ್ಟುಹಾಕಿದವರು ಸಚಿವ ಈಶ್ವರಪ್ಪ. ಬಾಗಲಕೋಟೆಯ ಬೀಳಗಿಪಟ್ಟಣದಲ್ಲಿ ಇತ್ತೀಚೆಗೆ ಮಾತನಾಡಿದ್ದ ಅವರು, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆಗಿನಿಂದಲೂ ಮತ್ತೆ ಸಿಎಂ ಬದಲಾವಣೆ ಅನುಮಾನ ಕಾಡುತ್ತಿದೆ. ಆದರೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಈಶ್ವರಪ್ಪನವರು ಶೀಘ್ರದಲ್ಲೇ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈಶ್ವರಪ್ಪನವರ ಭಾಷಣದ ತುಣಕನ್ನು ನಾನು ನೋಡಿದ್ದೇನೆ. ಅವರು ಶೀಘ್ರದಲ್ಲಿಯೇ ಮುರುಗೇಶ್ ನಿರಾಣಿ ಸಿಎಂ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಿಲ್ಲ. ಆದರೂ ಹಾಗೆ ಹೇಳುವುದು ತಪ್ಪು. ಇಂಥ ಹೇಳಿಕೆ ನೀಡಬಾರದು ಎಂದು ಈಶ್ವರಪ್ಪ ಸೇರಿ ಎಲ್ಲ ರಾಜ್ಯದ ಮುಖಂಡರಿಗೂ ಕೇಂದ್ರದಿಂದ ಸೂಚನೆ ನೀಡಲಾಗಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಇನ್ನು ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾದ್ ಜೋಶಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲೂ ನಮಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಹೇಳಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಹಲವು ಬದಲಾವಣೆಗಳು ಆಗಿವೆ. ಗ್ರಾಮೀಣಾಭಿವೃದ್ಧಿಗಾಗಿ ಬಜೆಟ್ನಲ್ಲಿ ಸಾಕಷ್ಟು ಹಣ ಇಡಲಾಗಿದ್ದು, ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯಾರು ಕೆಲಸ ಮಾಡುತ್ತಾರೋ, ಅವರ ಖಾತೆಗೇ ನೇರವಾಗಿ ಡಿಬಿಟಿ (DIRECT BENEFIT TRANSFER) ಹಣ ಹಾಕಲಾಗುತ್ತಿದೆ ಎಂದು ಹೇಳಿದರು. ಹಾಗೇ, ಜಲಜೀವನ ಮಿಷನ್ ಮೂಲಕ 8.60 ಕೋಟಿ ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಧಾರವಾಡ ಜಿಲ್ಲೆಗೆ ನೀರಿಗಾಗಿಯೇ 1500 ಕೋಟಿ ರೂಪಾಯಿ ನೀಡಿದ್ದೇವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ-ದೇವೇಗೌಡರ ಭೇಟಿ ಬಗ್ಗೆ ಪ್ರತಿಕ್ರಿಯೆ
ಇತ್ತೀಚೆಗೆ ದೆಹಲಿಗೆ ಹೋಗಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರು. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ಪ್ರಧಾನಿಯವರನ್ನು ಭೇಟಿಯಾದ ದೇವೇಗೌಡರು ಕೆಲವು ವಿಷಯಗಳ ಚರ್ಚೆ ಮಾಡಿದ್ದಾರೆ. ಆದರೆ ರಾಜಕೀಯವಾಗಿ ಮಾತನಾಡಿರುವ ಬಗ್ಗೆ ನನ್ನ ಬಳಿ ಹೇಳಿಲ್ಲ. ಚುನಾವಣೆಯ ಮೈತ್ರಿ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ಹಾಸನದ ಐಐಟಿ ಬಗ್ಗೆ ಮಾತನಾಡಿದ್ದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ವಿಶ್ವದಲ್ಲೆಲ್ಲೂ ಇಲ್ಲದ ಯೋಜನೆ
ಇನ್ನು ಪ್ರಲ್ಹಾದ್ ಜೋಶಿ ಸ್ವಾಮ್ಯತ್ವ ಯೋಜನೆ ಬಗ್ಗೆ ಮಾತನಾಡಿ, ಇದು ವಿಶ್ವದಲ್ಲಿ ಎಲ್ಲಿಯೂ ಇಲ್ಲದ ಯೋಜನೆ. ಅಂಥದ್ದನ್ನು ಪ್ರಧಾನಿ ಮೋದಿ ಸರ್ಕಾರ ಸಾಧಿಸಿ ತೋರಿಸಿದೆ. ಸ್ವಾಮ್ಯತ್ವದ ಮೂಲಕ ದೇಶದ ಪ್ರತಿಯೊಬ್ಬರ ಪ್ರತಿ ದಾಖಲೆಯನ್ನೂ ಡಿಜಿಟಲೀಕರಣ ಮಾಡುತ್ತಿದ್ದೇವೆ. ಡ್ರೋನ್ ಮೂಲಕ ಸರ್ವೇ ಮಾಡಿ ಆಸ್ತಿ ಲೆಕ್ಕ ಹಾಕುತ್ತಿದ್ದೇವೆ. ಇನ್ನು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಸಹಾಯ ಮಾಡಿದ್ದೇವೆ. ಒಟ್ಟಾರೆ ಉದ್ಯಮಶೀಲತೆ ಬಲಪಡಿಸಲು ಪ್ರಧಾನಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇವೆಲ್ಲ ವಿಷಯಗಳನ್ನೂ ಮುಂದಿಟ್ಟುಕೊಂಡು ನಾವು ಮತ ಕೇಳುತ್ತೇವೆ ಎಂದು ಹೇಳಿದರು.
Published On - 1:17 pm, Sun, 5 December 21