ಆಡಳಿತ ಮಂಡಳಿಯ ಎಚ್ಚರಿಕೆಯ ನಡುವೆಯೂ ರಾಮ್​ ಕೆ ನಾಮ್​ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಜೆಎನ್​ಯು ವಿದ್ಯಾರ್ಥಿ ಒಕ್ಕೂಟ; ತಪ್ಪೇನಿದೆ? ಸತ್ಯವನ್ನೇ ತೋರಿಸುತ್ತದೆ ಎಂದ ಅಧ್ಯಕ್ಷೆ

ಆಡಳಿತ ಮಂಡಳಿಯ ಎಚ್ಚರಿಕೆಯ ನಡುವೆಯೂ ರಾಮ್​ ಕೆ ನಾಮ್​ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಜೆಎನ್​ಯು ವಿದ್ಯಾರ್ಥಿ ಒಕ್ಕೂಟ; ತಪ್ಪೇನಿದೆ? ಸತ್ಯವನ್ನೇ ತೋರಿಸುತ್ತದೆ ಎಂದ ಅಧ್ಯಕ್ಷೆ
ಜೆಎನ್​ಯು

ಜೆಎನ್​​ಯುಎಸ್​ಯು ಅಧ್ಯಕ್ಷ ಐಷೆ ಘೋಷ್​ ಕೂಡ ಫೇಸ್​ಬುಕ್​​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ನಾವು ನಿಗದಿಪಡಿಸಿದ ಸಮಯದಲ್ಲೇ ರಾಮ್​ ಕೆ ನಾಮ್​ ಪ್ರದರ್ಶನ ನಡೆಸುತ್ತೇವೆ ಎಂದು ಹೇಳಿದ್ದರು.

TV9kannada Web Team

| Edited By: Lakshmi Hegde

Dec 05, 2021 | 1:12 PM

ದೆಹಲಿ: ಇಲ್ಲಿನ ಜವಾಹರ್​ಲಾಲ್​ ನೆಹರೂ ಯೂನಿವರ್ಸಿಟಿ ಆಡಳಿತ ಮಂಡಳಿಯ ಎಚ್ಚರಿಕೆ, ಸಲಹೆ, ನಿರಾಕರಣೆಯ ನಡುವೆಯೂ ಅಲ್ಲಿನ ವಿದ್ಯಾರ್ಥಿಗಳು ನಿನ್ನೆ ಸಂಜೆ ರಾಮ್​ ಕೆ ನಾಮ್​ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಜೆಎನ್​​ಯು ವಿದ್ಯಾರ್ಥಿ ಒಕ್ಕೂಟದ ಕಚೇರಿಯ ಹೊರಗೆ ಈ ಸಾಕ್ಷ್ಯಚಿತ್ರದ ಪ್ರದರ್ಶನ ಶಾಂತಿಯುತವಾಗಿ ನಡೆದಿದೆ. ಈ ಬಗ್ಗೆ ಜೆಎನ್​ಯುಎಸ್​ಯು (Jawaharlal Nehru University Students’ Union (JNUSU) ಅಧ್ಯಕ್ಷೆ ಐಷೆ ಘೋಷ್​ ಟ್ವೀಟ್ ಮಾಡಿದ್ದು, ರಾಮ್​ ಕೆ ನಾಮ್​ ಸಾಕ್ಷ್ಯಚಿತ್ರ ಪ್ರದರ್ಶನ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆಯಿತು. ಇದನ್ನು ವೀಕ್ಷಿಸಲು ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಆಫೀಸ್​ ಹೊರಗೆ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು ಎಂದು ತಿಳಿಸಿದ್ದಾರೆ. 

ಅಂದಹಾಗೆ ಈ ರಾಮ್​ ಕೆ ನಾಮ್ ಎಂಬುದು 1992ರಲ್ಲಿ ಆನಂದ್​ ಪಟವರ್ಧನ್​ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿದ ಒಂದು ಸಾಕ್ಷ್ಯ ಚಿತ್ರ. ಅಯೋಧ್ಯೆಯಲ್ಲಿ ಆಗ ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಹಿಂದು ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್​ ನಡೆಸಿದ ಅಭಿಯಾನ, ಕೋಮು ಹಿಂಸಾಚಾರ ಉತ್ತೇಜಿಸಿದ್ದನ್ನು ಬಿಂಬಿಸುವ ಸಾಕ್ಷ್ಯಚಿತ್ರವಾಗಿದೆ. ಅಲ್ಲದೆ, ಈ ರಾಮ್​ ಕಾ ನಾಮ್​ ಸಾಕ್ಷ್ಯಚಿತ್ರ 1992ರ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಿದ್ದು, ಅದಾದ ಎರಡೇ ತಿಂಗಳಿಗೆ ಅಂದರೆ ಡಿಸೆಂಬರ್​​ನಲ್ಲಿ ಬಾಬರಿ ಮಸೀದಿ ಧ್ವಂಸವಾಗಿದೆ. ಅದೇನೇ ಆಗಲಿ, ಈ ಸಾಕ್ಷ್ಯಚಿತ್ರ ರಾಷ್ಟ್ರದ ಗಮನ ಸೆಳೆದಿದ್ದಲ್ಲದೆ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳಿಗೂ ಭಾಜನವಾಗಿದೆ. ಆನಂದ ಪಟವರ್ಧನ್​ ಹೆಸರು ಕೂಡ ಖ್ಯಾತವಾಯಿತು. ಆದರೆ ರಾಮ್​ ಕಾ ನಾಮ್​ ಬಗ್ಗೆ ಕಟು ವಿಶ್ಲೇಷಣೆಗಳೂ ಕೇಳಿಬಂದವು.

ಜೆಎನ್​​ಯು ವಿದ್ಯಾರ್ಥಿಗಳು ತಾವು ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡುತ್ತಿದ್ದೇವೆ ಎಂದು ಪ್ರಕಟಣೆ ಹೊರಡಿಸುತ್ತಿದ್ದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿತ್ತು. ಈ ವಿದ್ಯಾರ್ಥಿಗಳ ಗುಂಪು ನಮ್ಮಿಂದ ಅನುಮತಿ ಪಡೆದಿಲ್ಲ ಎಂದು ಹೇಳಿತ್ತು. ರಾಮ್​ ಕಾ ನಾಮ್​ ಚಿತ್ರಪ್ರದರ್ಶನವನ್ನು ರದ್ದುಗೊಳಿಸಿ. ಇಂಥ ಅನಧಿಕೃತ ಕೆಲಸದಿಂದ ಕೋಮು ಸೌಹಾರ್ದತೆ, ಶಾಂತಿ ಕದಡಬಹುದು. ಒಮ್ಮೆ ಹಾಗೇನಾದರೂ ಆದರೆ ಪ್ರದರ್ಶನ ಹಮ್ಮಿಕೊಂಡವರ ವಿರುದ್ಧ ಯೂನಿವರ್ಸಿಟಿಯ ನಿಯಮಕ್ಕೆ ಅನುಸಾರವಾಗಿ ಕಠಿಣ ನಿಯಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿತ್ತು. ಆದರೆ ವಿದ್ಯಾರ್ಥಿ ಒಕ್ಕೂಟ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಶನಿವಾರ ಸಂಜೆ 9 ಗಂಟೆಗೆ ನಿಶ್ಚಿತವಾಗಿಯೂ ನಾವು ರಾಮ್​ ಕಾ ನಾಮ್​ ಪ್ರದರ್ಶಿಸುತ್ತೇವೆ ಎಂದು ಹೇಳಿದ್ದರು, ಅದರಂತೆ ಪ್ರದರ್ಶನ ನಡೆಸಿವೆ.  ಈ ವಿದ್ಯಾರ್ಥಿಗಳ ಬೆಂಬಲಕ್ಕೆ ಆನಂದಪಟವರ್ಧನ್ ಕೂಡ ನಿಂತಿದ್ದು, ರಾಮ್​ ಕಾ ನಾಮ್​ ಚಿತ್ರಕ್ಕೆ, ಚಲನಚಿತ್ರ ಮಂಡಳಿಯಿಂದ ಯೂ ಸರ್ಟಿಫಿಕೇಟ್​ ಸಿಕ್ಕಿದೆ. ಹೀಗಾಗಿ ಅದನ್ನು ಪ್ರದರ್ಶಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಜೆಎನ್​​ಯುಎಸ್​ಯು ಅಧ್ಯಕ್ಷ ಐಷೆ ಘೋಷ್​ ಕೂಡ ಫೇಸ್​ಬುಕ್​​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ನಾವು ನಿಗದಿಪಡಿಸಿದ ಸಮಯದಲ್ಲೇ ರಾಮ್​ ಕೆ ನಾಮ್​ ಪ್ರದರ್ಶನ ನಡೆಸುತ್ತೇವೆ. ಆದರೆ ಆರ್​ಎಸ್​ಎಸ್​-ಬಿಜೆಪಿಯ ಕೈಗೊಂಬೆಯಾಗಿರುವ ಈ ಸಂಸ್ಥೆ ನಮಗೆ ಅದನ್ನು ರದ್ದುಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ.  ರಾಮ್​ ಕೆ ನಾಮ್​ ಸತ್ಯವನ್ನೇ ತೋರಿಸುತ್ತದೆ. ಬಿಜೆಪಿ ಈ ದೇಶದಲ್ಲಿ ಏನು ಮಾಡುತ್ತಿದೆ? ಬಲಪಂಥೀಯ ಮೂಲಭೂತವಾದಿಗಳು ಹೇಗೆ ದ್ವೇಷವನ್ನು ಹರಡುತ್ತಿದ್ದಾರೆ ಎಂಬುದನ್ನು ಈ ಸಾಕ್ಷ್ಯಚಿತ್ರ ತೋರಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ರಾಶಿಗಟ್ಟಲೆ ಔಷಧಿ ಹೂಳಲು ಯತ್ನ; ವಿಡಿಯೋ ಮಾಡುತ್ತಿದ್ದಂತೆ ಕಾಲ್ಕಿತ್ತ ಓಪೆಕ್ ಆಸ್ಪತ್ರೆ ಸಿಬ್ಬಂದಿ

Follow us on

Most Read Stories

Click on your DTH Provider to Add TV9 Kannada