ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಸ್.ಅಂಗಾರಗೆ ನೀಡಲು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯದ ಅಂಗಾರ ಸಚಿವರಾಗಿರುವುದು ಸಂತಸದ ವಿಚಾರ. ಈ ಹಿಂದೆ ಅವರಿಗೆ ಬಹಳಷ್ಟು ಅನ್ಯಾಯವಾಗಿತ್ತು, ಈಗ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಲ್ಲಿ ಕೆಲಸ ಮಾಡಲಿ. ಸದ್ಯ ಕೋಟಾ ಶ್ರೀನಿವಾಸ ಪೂಜಾರಿ ಇದ್ದಾರೆ, ಅವರು ಕೂಡ ಒಳ್ಳೆಯವರೇ. ಆದ್ರೆ ಈಗ ನಮ್ಮ ಜಿಲ್ಲೆಯವರೇ ಸಚಿವರಾಗಿದ್ದಾರೆ, ಹಾಗಾಗಿ ಅವರಿಗೆ ಉಸ್ತುವಾರಿ ಕೊಡಲಿ.
ಅಂಗಾರರಿಗೆ ಇಲ್ಲಿ ಉಸ್ತುವಾರಿ ಯಾಕೆ ಕೊಡಲ್ಲ..
ಉಡುಪಿ ಜಿಲ್ಲೆಯವರನ್ನ ಇಲ್ಲಿ ಯಾಕೆ ಉಸ್ತುವಾರಿ ಸಚಿವರಾಗಿ ಮಾಡ್ತೀರಾ? ಒಬ್ಬ ಹಿರಿಯ ರಾಜಕಾರಣಿಗೆ ಇಲ್ಲಿನ ಉಸ್ತುವಾರಿ ಯಾಕೆ ಕೊಡಲ್ಲ? ಅದಕ್ಕೆ ಸರ್ಕಾರ ಈ ಬಗ್ಗೆ ಜನರಿಗೆ ಕಾರಣ ನೀಡಲಿ. ಅಂಗಾರರಿಗೆ ಇಲ್ಲಿ ಉಸ್ತುವಾರಿ ಯಾಕೆ ಕೊಡಲ್ಲ ಅನ್ನೋ ಸಂಶಯ ನಿವಾರಿಸಲಿ. ಅವರಿಗೆ ಇಲ್ಲಿ ಉಸ್ತುವಾರಿ ಕೂಡಲಿ, ಬೇರೆ ಜಿಲ್ಲೆಯವರಿಗೆ ಬೇಡ ಎಂದು ಎಸ್.ಅಂಗಾರ ಪರ ಮಾಜಿ ಸಚಿವ ಯು.ಟಿ.ಖಾದರ್ ಬ್ಯಾಟ್ ಬೀಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬ್ಲ್ಯಾಕ್ ಮೇಲ್ ಮೂಲಕ ಆಗಿದ್ಯಾ?
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ವಿಚಾರಕ್ಕೆ ಸಂಬಂಧಿಸದಂತೆ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದು, ರಾಜ್ಯದ ಜನರು ಎಲ್ಲಾ ವಿಚಾರವನ್ನ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿದ್ದಾರೆ. ಯತ್ನಾಳ್ ಸದ್ಯ ಸಿಡಿ ವಿಚಾರ ಮಾತನಾಡಿದ್ರೆ, ಕಾರ್ಕಳ ಸುನೀಲ್ ಕುಮಾರ್ ಬ್ಲ್ಯಾಕ್ ಮೇಲ್ ಬಗ್ಗೆ ಮಾತನಾಡ್ತಾರೆ. ಅಂದ್ರೆ ಸಚಿವ ಸಂಪುಟ ವಿಸ್ತರಣೆ ಬ್ಲ್ಯಾಕ್ ಮೇಲ್ ಮೂಲಕ ಆಗಿದ್ಯಾ? ಪಕ್ಷದವರೇ ಸೇರಿ ಮುಖ್ಯಮಂತ್ರಿ ವಿರುದ್ದ ಮಾತನಾಡ್ತಿದ್ದಾರೆ.
ಯಾಕೆ ರಾಜ್ಯದ ಮುಖ್ಯಮಂತ್ರಿಗೆ ಈ ರೀತಿ ಅವಮಾನ ಆಗ್ತಿದೆ. ದೇಶದ ಪ್ರಧಾನಿಗೆ ಅವಮಾನ ಅದ್ರೆ ದೇಶದ್ರೋಹ, ಹಾಗಾದ್ರೆ ಸಿಎಂಗೆ ಆದ್ರೆ ಅಲ್ವಾ? ದೆಹಲಿಗೆ ಹೋದಾಗಲೂ ಅವರಿಗೆ ಸಮಯ ಕೊಡದೇ ಅವಮಾನಿಸ್ತಾರೆ. ಒಬ್ಬೊಬ್ವ ಶಾಸಕರು ಸದ್ಯ ಬೇರೆ ಬೇರೆ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ತಕ್ಷಣ ಸರ್ಕಾರ ಸ್ಪಷ್ಟನೆ ನೀಡುವ ಕೆಲಸ ಮಾಡಲಿ. ಕಾಂಗ್ರೆಸ್ ಕೈವಾಡ ಅನ್ನೋದನ್ನ ಬಿಟ್ಟು ಬೇರೆ ಉತ್ತರ ಕೊಡಲಿ ಎಂದಿದ್ದಾರೆ.
ಕಾಂಗ್ರೆಸ್ ಬಿಟ್ಟು ಹೋದವರು ನೆಮ್ಮದಿ ಸಂತೋಷದಿಂದ ಇರಲ್ಲ..
ಕಾಂಗ್ರೆಸ್ನಿಂದ ಹೋದವರನ್ನ ಕರೆ ತರುವ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಒಪ್ಪಿಗೆ ಕೊಡ್ತೇವೆ. ಮುನಿರತ್ನಗೆ ಸಚಿವ ಸ್ಥಾನ ಕೊಡಲು ನಾನು ಮುಖ್ಯಮಂತ್ರಿ ಅಲ್ಲ. ಅವರಿಗೆ ಸಿಎಂ ಸಚಿವ ಸ್ಥಾನ ಕೊಡಬೇಕಿತ್ತು, ಆದ್ರೆ ಕೊಟ್ಟಿಲ್ಲ. ಕಾಂಗ್ರೆಸ್ ಬಿಟ್ಟು ಹೋದ ಯಾರೇ ಆದರೂ ನೆಮ್ಮದಿ ಸಂತೋಷದಿಂದ ಇರಲ್ಲ. ಈ ಮಾತನ್ನ ಆವತ್ತೇ ನಾವೆಲ್ಲರೂ ಹೇಳಿದ್ದೆವು. ಡಾ.ಸುಧಾಕರ್ ಗೆ ಈಗ ಎರಡು ಸಚಿವ ಸ್ಥಾನ ಇದೆ, ನಮ್ಮಲ್ಲಿದ್ರೆ ಮೂರು ಸಿಗ್ತಾ ಇತ್ತು ಎಂದು ಖಾದರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? -ಸರ್ಕಾರಕ್ಕೆ ಖಾದರ್ ಸವಾಲ್
Published On - 1:20 pm, Thu, 14 January 21