ಕೊವಿಡ್ ಸೋಂಕು ನಗರಗಳಿಂದ ಹಳ್ಳಿಯ ಜಾಡು ಹಿಡಿದಿದೆ. ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯ ಪ್ರದೇಶಗಳನ್ನು ಹೊಂದಿರುವ ಹಸಿರ ತವರು ಉತ್ತರ ಕನ್ನಡ ಕೊವಿಡ್ ಪಾಸಿಟಿವಿಟಿ ದರದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಜಿಲ್ಲೆ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ಇತ್ತೀಚಿಗೆ ತಿಳಿಸಿತ್ತು. ಅದರ ನಂತರವೂ ಉತ್ತರ ಕನ್ನಡದಲ್ಲಿ ಕೊವಿಡ್ ಹಿಡಿತಕ್ಕೆ ಸಿಲುಕುತ್ತಿಲ್ಲ. ಮೂಲತಃ ಅಷ್ಟೇನೂ ಜನದಟ್ಟಣೆ ಇಲ್ಲದಿದ್ದರೂ ಕೊವಿಡ್ ತನ್ನ ಗಡಿಗಳನ್ನು ಉತ್ತರ ಕನ್ನಡದ ಹಳ್ಳಿಹಳ್ಳಿಗಳಲ್ಲೂ ವಿಸ್ತರಿಸಿಬಿಟ್ಟಿದೆ. ಬೆಂಗಳೂರಿನಿಂದ ಬರುವವರನ್ನು ಹಿಂದಿನ ವರ್ಷದಂತೆ ಬೇಗನೇ ಹದ್ದುಬಸ್ತಿನಲ್ಲಿಡದೇ, ಸೋಂಕು ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸ್ವಲ್ಪ ತಡ ಮಾಡಿತು ಎಂಬ ಅಭಿಪ್ರಾಯ ಇಲ್ಲಿಯ ಸ್ಥಳೀಯರದು. ಜತೆಗೆ ಬೆಂಗಳೂರಿನಿಂದ ಆಗಮಿಸಿದ ಊರ ಪೋರರನ್ನು ಸೇರಿಸಿಕೊಂಡೇ ಮದುವೆ ಮಾಡಿದ್ದು ಸ್ಥಳೀಯರ ತಪ್ಪು. ನಿನ್ನೆ (ಮೇ 17) ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ನಡೆದ ವರ್ಚುವಲ್ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಸಹ ಪಾಲ್ಗೊಂಡಿದ್ದರು. ಅದೂ ಸ್ವತಃ ಕೊವಿಡ್ ಸೋಂಕಿತರಾಗಿ. ಕೆಲ ದಿನಗಳ ಹಿಂದಷ್ಟೇ ತಲೆ ನೋವು ಹಾಗೂ ಮೈಕೈ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಕೊವಿಡ್ ತಪಾಸಣೆಗೊಳಗಾಗಿದ್ದರು. ಆನಂತರ ಕೊವಿಡ್ ಸೋಂಕು ಜಿಲ್ಲಾಧಿಕಾರಿಗಳನ್ನು ಬಾಧಿಸುತ್ತಿರುವುದು ಖಚಿತವಾಗಿತ್ತು. ಸದ್ಯ ಜಿಲ್ಲಾಧಿಕಾರಿ ಮುಲೈ ಮುಹಿಲನ್ ದೂರವಾಣಿ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ಪ್ರತಿದಿನವೂ ಸಾವಿರದ ಸಮೀಪವೇ ಕೊವಿಡ್ ಸೋಂಕಿತರು ಪತ್ತೆಯಾಗುತ್ತಿದ್ದು, ನಿನ್ನೆ (ಮೇ 17) ಸಹ 1,288 ಸೋಂಕಿತರು ಪತ್ತೆಯಾಗಿದ್ದಾರೆ. 15 ಸೋಂಕಿತರು ಮೃತಪಟ್ಟಿದ್ದಾರೆ.
ಶಿರಸಿಗೆ ಪ್ರತ್ಯೇಕ ಪ್ರಯೋಗಾಲಯ
ಸದ್ಯ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೊವಿಡ್ ಪರೀಕ್ಷೆಯ ಪ್ರಯೋಗಾಲಯ ಇದ್ದು, ಜಿಲ್ಲೆಯ 11 ತಾಲೂಕುಗಳ ಸೋಂಕುಪತ್ತೆಯೂ ಅಲ್ಲೇ ಆಗಬೇಕಿದೆ. ಈ ದೂರವನ್ನು ಕಡಿಮೆ ಮಾಡಲು ಘಟ್ಟದ ಮೇಲಿನ ಶಿರಸಿಯಲ್ಲೂ ಒಂದು ಕೊವಿಡ್ ಪರೀಕ್ಷೆಯ ಲ್ಯಾಬ್ ಬೇಕು ಎಂಬ ಆಗ್ರಹಕ್ಕೆ ಸರ್ಕಾರ ಮಣಿದಂತಿದೆ. ವರ್ಚುವಲ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಶಿರಸಿಯಲ್ಲಿ ಪ್ರತ್ಯೇಕ ಲ್ಯಾಬ್ ಸ್ಥಾಪಿಸಲು ಅಸ್ತು ಎಂದಿದ್ದಾರೆ. ಆದರೆ ಶಿರಸಿಯ ಕೊವಿಡ್ ಚಿಕಿತ್ಸೆ ನೀಡುವ ಕೆಲವು ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಮತ್ತು ಅಗತ್ಯ ಔಷಧಗಳ ಕೊರತೆಯಿಂದ ತಕ್ಷಣವೇ ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ
ಉತ್ತರ ಕನ್ನಡದಲ್ಲಿ ದಿನೇ ದಿನೇ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ವಿನಃ ಇಳಿಮುಖವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರ ಕನ್ನಡಕ್ಕೆ ಸೋಂಕು ಹರಡದಂತೆ ತಡೆಯಲು ಸದ್ಯದ ಮಟ್ಟಿಗೆ ಅಗತ್ಯ ಇರುವ ಕ್ರಮಗಳನ್ನು ಬಿಗಿಯಾಗಿಯೇ ಕೈಗೊಂಡಿದ್ದಾರೆ. ಮೇ 16ರಿಂದ ಜಿಲ್ಲೆಯ ರಸ್ತೆಗಳಲ್ಲಿ ಯಾವುದೇ ಖಾಸಗಿ ವಾಹನ ಓಡಾಡಬಾರದು ಎಂದು ಆದೇಶಿಸಿದ್ದಾರೆ. ಅಲ್ಲದೇ ಅವರ ಸ್ವಂತ ವಿಧಾನಸಭಾ ಕ್ಷೇತ್ರ ಯಲ್ಲಾಪುರದ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲೂ ಸ್ವಂತ ಖರ್ಚಿನಲ್ಲಿ ಹೆಬ್ಬಾರ್ ಕೊವಿಡ್ ಹೆಲ್ಪ್ಲೈನ್ ಆರಂಭಿಸಿದ್ದಾರೆ. ಈ ಸೇವೆ ಕೊವಿಡ್ ಸೋಂಕಿತರ ಸಕಲ ಆಗುಹೋಗುಗಳನ್ನು ಉಚಿತವಾಗಿ ನೋಡಿಕೊಳ್ಳಲಿದೆ. ಜತೆಗೆ 40 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ ಕಂಟೇನ್ಮೆಂಟ್ ಝೋನ್ ಮಾಡುವುದು, ಮದುವೆಗಳಿಗೆ ನಿಯಂತ್ರಣ ಹೇರುವುದು ಸೇರಿದಂತೆ ಮುಂತಾದ ಆದೇಶಗಳನ್ನು ಸಚಿವ ಶಿವರಾಮ್ ಹೆಬ್ಬಾರ್ ಹೊರಡಿಸಿದ್ದಾರೆ.
ಸಂಸದ ಅನಂತ್ಕುಮಾರ್ ನಾಪತ್ತೆ!
ಉತ್ತರ ಕನ್ನಡ – ಖಾನಾಪುರ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಕುರಿತು ಈಗಾಗಲೇ ಒಂದು ಮಾತು ಜಿಲ್ಲೆಯಲ್ಲಿ ಹೊರಹೊಮ್ಮಿತ್ತು. ಕೊವಿಡ್ ಎರಡನೇ ಅಲೆ ಆ ಮಾತನ್ನು ಇನ್ನಷ್ಟು ಖಚಿತಪಡಿಸಿದೆ. ಸಂಸದರು ಜನರ ಕೈಗೆ ಸಿಗುವುದಿಲ್ಲ. ಧರೆ ಹತ್ತಿ ಉರಿದರೂ ಜನರ ಬೇಕು ಬೇಡಗಳಿಗೆ ಧ್ವನಿಯಾಗುವುದಿಲ್ಲ ಎಂಬ ಮಾತು ಈ ಬಾರಿ ಮತ್ತೊಮ್ಮೆ ನಿಜವಾಗಿದೆ. ಕೊವಿಡ್ ಎರಡನೇ ಅಲೆಗಿಂತ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಈಡಾಗಿದ್ದ ಅವರು ನಂತರ ಚಿಕಿತ್ಸೆಗೊಳಗಾಗಿದ್ದರು. ಆರೋಗ್ಯ ಸುಧಾರಿಸುತ್ತಿದೆ ಎಂಬ ವರದಿಗಳು ಪ್ರಕಟಗೊಂಡಿದ್ದವು. ಆದರೆ ಕೊವಿಡ್ ಎರಡನೇ ಅಲೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಒಂದು ಪತ್ರಿಕಾ ಹೇಳಿಕೆಯೂ ಈವರೆಗೆ ಹೊರಬಿದ್ದಿಲ್ಲ.
ವಿಧಾನಸಭಾ ಸ್ಪೀಕರ್, ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಕೊವಿಡ್ ಎರಡನೇ ಅಲೆ ವಿರುದ್ಧದ ಜಿಲ್ಲೆಯ ಜನರ ಹೋರಾಟದಲ್ಲಿ ಅಷ್ಟಾಗಿ ಆಗಿಬಂದಂತಿಲ್ಲ. ಎರಡು ಮೂರು ದಿನಗಳ ಹಿಂದಷ್ಟೇ ಅವರು ಸಭೆಗಳನ್ನು ನಡೆಸಿದ್ದು ವರದಿಯಾಗಿದೆ. ಅವರು ಮದುವೆಯಲ್ಲಿ ಮಾಸ್ಕ್ ಇಲ್ಲದೇ ಕಾಣಿಸಿಕೊಂಡದ್ದು, ಕೊವಿಡ್ ಸೋಂಕಿತರಾಗಿದ್ದು ಇಲ್ಲಿ ಉಲ್ಲೇಖನೀಯ. ಜಿಲ್ಲೆಯ ಜನರಿಗೆ ಸದ್ಯ ಯಲ್ಲಾಪುರ ಶಾಸಕ, ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಒಬ್ಬರೇ ದಿಕ್ಕಾದಂತೆ ಭಾಸವಾಗುತ್ತಿದೆ.
ಪ್ರತ್ಯೇಕ ಕೊವಿಡ್ ಪೋರ್ಟಲ್ ಸ್ಥಾಪನೆ
ಜಿಲ್ಲಾಡಳಿತ ಕೊಂಚ ತಡ ಮಾಡಿದರೂ ತನ್ನದೇ ರೀತಿಯಲ್ಲಿ ಕೊವಿಡ್ ಹೋರಾಟದಲ್ಲಿ ಕತ್ತಿ ಬೀಸುತ್ತಿದೆ. ಜಿಲ್ಲೆಯ ಜನರಿಗೆ ಗೊಂದಲವಾಗದಂತೆ ಉತ್ತರ ಕನ್ನಡಕ್ಕೆಂದೇ ಪ್ರತ್ಯೇಕ ಕೊವಿಡ್ ಪೋರ್ಟಲ್ ಪ್ರಾರಂಭಿಸಿದೆ. ಉತ್ತರ ಕನ್ನಡಕ್ಕೆ ಸಂಬಂಧಿಸಿದ ಪ್ರತಿನಿತ್ಯದ ಕೊವಿಡ್ ಸೋಂಕಿತರು, ಬೆಡ್, ಆಕ್ಸಿಜನ್, ಲಸಿಕೆ ಕುರಿತು ಎಲ್ಲ ಮಾಹಿತಿಗಾಗಿ ಜನರು ಈ ಪೋರ್ಟಲ್ ಮೂಲಕವೇ ಕಂಡುಕೊಳ್ಳಬಹುದು.ಅದರ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ಕೊರೊನಾ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳ ಕುರಿತು ನರೇಂದ್ರ ಮೋದಿ ಚರ್ಚೆ; ಉತ್ತರ ಕನ್ನಡ ನಂ.1
Published On - 7:04 am, Tue, 18 May 21