ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಹಲವು ಹಳ್ಳಿಗಳಿಗೆ ರಸ್ತೆಗಳಿಲ್ಲ, ಸಂಚರಿಸಲು ಬಸ್ ವ್ಯವಸ್ಥೆಗಳಿಲ್ಲ. ಇದೀಗ ಹಲವು ಗ್ರಾಮದ ಜನರು ತಮ್ಮೂರಿನ ಮೂಲಭೂತ ಸೌಕರ್ಯಕ್ಕಾಗಿ ಮುಂಬರುವ ಚುನಾವಣೆಗೆ ಮತ ಬಹಿಷ್ಕಾರದ ಮೊರೆ ಹೋಗಿದ್ದು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಒಂದೆಡೆ ರಸ್ತೆ ಬಂದ್ ಮಾಡಿ ತಮ್ಮೂರಿಗೆ ಮೂಲ ಸೌಕರ್ಯ ನೀಡುವಂತೆ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನರು. ಮತ್ತೊಂದೆಡೆ ದಟ್ಟ ಅಡವಿಯಲ್ಲಿ (Forest Dwellers) ಜೀವ ಭಯದಲ್ಲೇ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು. ಹೌದು ಈ ದೃಶ್ಯ ಕಂಡು ಬರುವುದು ಉತ್ತರ ಕನ್ನಡ (Karwar) ಜಿಲ್ಲೆಯ ಜೋಯಿಡಾ (Joida) ತಾಲೂಕಿನಲ್ಲಿ. ಅರಣ್ಯವೇ (Forest) ಹೆಚ್ಚಾಗಿರುವ ಈ ತಾಲೂಕಿನಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ್ರೂ ಮೂಲಭೂತ ಸೌಕರ್ಯದಿಂದ (Basic Amenities) ವಂಚಿತರಾಗಿ ಬದುಕು ಸಾಗಿಸುತಿದ್ದಾರೆ.
ಹೀಗಾಗಿ ಈ ಬಾರಿ ಜೋಯಿಡಾ ತಾಲೂಕಿನ ಬಾಜಾರ್ ಕೋಣಂಗ್ ಕಾತೇಲಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದು , ಇದೇ ಮೊದಲ ಬಾರಿಗೆ ರಾಜ್ಯ ಹೆದ್ದಾರಿ ತಡೆದು ಒಂದು ವಾರದೊಳಗೆ ತಮ್ಮೂರಿನ ಮಕ್ಕಳು ಶಾಲೆಗೆ ತೆರಳಲು ಬಸ್ ವ್ಯವಸ್ಥೆ ಹಾಗೂ ರಸ್ತೆ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ವ್ಯವಸ್ಥೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡಿದರೂ ಅಧಿಕಾರಿಗಳು ಪ್ರಕರಣ ದಾಖಲಿಸುತಿದ್ದು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವವರ ದನಿಯನ್ನ ಆಡಳಿತ ವರ್ಗ ಅಡಗಿಸುತ್ತಿದೆ ಎನ್ನುತ್ತಾರೆ ಅಜೀತ್ ಮಿರಾಶಿ, ಸ್ಥಳೀಯ ಹೋರಾಟಗಾರ.
ಜೋಯಿಡಾದ ಬಾಜಾರ್ ಕೋಣಂಗ್ ಹಾಗೂ ಕಾತೇಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಅರಣ್ಯವಾಸಿಗಳಿದ್ದಾರೆ. ಈ ಊರಿಗೆ ಜೋಯಿಡಾ ದಿಂದ ತೆರಳಲು 40 ಕಿಲೊ ಮಿಟರ್ ಕ್ರಮಿಸಬೇಕು. ಡಿಗ್ಗಿಯಿಂದ ಐದು ಕಿಲೋ ಮೀಟರ್ ಮಾತ್ರ ಡಾಂಬರ್ ರಸ್ತೆಯಿದ್ದು 25 ಕಿಲೋಮೀಟರ್ ನಷ್ಟು ದೂರ ಕಚ್ಚಾ ರಸ್ತೆ ಇದೆ. ಇದರ ನಂತರ ಚಿಕ್ಕದಾದ ಕಾಲುಹಾದಿಯಿದ್ದು ಜನ ಪ್ರತಿದಿನ ನಡೆದುಕೊಂಡು ಬರಬೇಕು.
ಶಾಲೆ ಮಕ್ಕಳು ಇಲ್ಲಿಂದ ಸಾಗಲು ಬಸ್ ವ್ಯವಸ್ಥೆ ಸಹ ಇಲ್ಲ. ಇನ್ನು ಅನಾರೋಗ್ಯ ಪೀಡಿತರನ್ನು ಕರೆತರಬೇಕು ಎಂದರೆ ಜೋಲಿ ಮಾಡಿ 40 ಕಿಲೊ ಮೀಟರ್ ಹೊತ್ತು ತರಬೇಕು. ಇಲ್ಲಿರುವ ಚಿಕ್ಕ ಶಾಲೆಗೆ ಸರ್ಕಾರದಿಂದ ನಿಯೋಜನೆಗೊಂಡ ಶಿಕ್ಷಕರಿಲ್ಲ. ಊರಿನವರೇ ಅತಿಥಿ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಇನ್ನು ಹೆಚ್ಚಿನ ಶಿಕ್ಷಣ ಪಡೆಯಲು ಹೊರ ಊರಿನಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಬೇಕು. ಮಳೆಗಾಲದಲ್ಲಿಯಂತೂ ಈ ಗ್ರಾಮಗಳಿಗೆ ತೆರಳಲು ಸಾಧ್ಯವೇ ಇಲ್ಲ. ಹೀಗಾಗಿ ತಮ್ಮೂರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂಬುದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರತೀಕ್ಷ ಮಿರಾಶಿ ಅವರ ಆಗ್ರಹವಾಗಿದೆ.
ಹಲವು ವರ್ಷದಿಂದ ಈ ಭಾಗದ ಜನರು ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೇ ಅರಣ್ಯ ಕಾನೂನು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಲ್ಲಿನ ಜನ ಶಿಕ್ಷಣ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯದಿಂದ ವಂಚಿತರನ್ನಾಗಿಸಿದೆ. ಇದಲ್ಲದೇ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವವರ ದನಿಯನ್ನ ಪ್ರಕರಣ ದಾಖಲಿಸುವ ಮೂಲಕ ಆಡಳಿತವರ್ಗ ಅಡಗಿಸುತ್ತಿದೆ. ಹೀಗಾಗಿ ಇದೀಗ ಇಲ್ಲಿನ ಜನ ಮತ ಬಹಿಷ್ಕಾರದ ಮೊರೆ ಹೋಗಿದ್ದಾರೆ. ಇನ್ನಾದರೂ ಸರ್ಕಾರ ಕಣ್ತೆರೆದು ಈ ಗ್ರಾಮಸ್ಥರ ನೋವಿಗೆ ಸ್ಪಂದಿಸಲಿದೆಯಾ ಎಂಬುದನ್ನ ಕಾದುನೋಡಬೇಕಿದೆ.
ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ