ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ: ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕೊರೊನಾ ಪ್ರಕರಣ 2 ಸಾವಿರ ದಾಟಿದರೆ. ಹೀಗಾಗಿ ಮೂರನೇ ಅಲೆ ಆರಂಭವಾಗಿದೆ ಎಂದು ಅರ್ಥ. ಆಕ್ಸಿಜನ್, ಬೆಡ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಾರವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ: ಮಾಜಿ ಸಿಎಂ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By:

Updated on: Aug 02, 2021 | 11:36 AM

ಉತ್ತರ ಕನ್ನಡ: ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾನಿ ಉಂಟಾಗಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯದಲ್ಲಾಗುತ್ತಿರುವ ಬದಲಾವಣೆಯ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ. ಯಾವ ಕಾರಣಕ್ಕೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು? ಬಿಜೆಪಿಯವರು ತಾವು ಸಾಚಾಗಳೆಂದು ತೋರಿಸಿಕೊಳ್ಳುತ್ತಾರೆ. ಆದರೆ ಬಿಜೆಪಿಯವರು ಸಂಸ್ಕೃತಿರಹಿತರು ಎಂದು ತಿಳಿಸಿದ್ದಾರೆ.

ಸಚಿವ ಸಂಪುಟಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ.  ಕೊರೊನಾ ನಿಯಂತ್ರಣ ಸರ್ಕಾರದ ಮೊದಲ ಕೆಲಸವಾಗಬೇಕು. ಆದರೆ ಸಚಿವ ಸಂಪುಟಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಪದೇಪದೆ ಹೈಕಮಾಂಡ್ ಭೇಟಿಗೆ ಹೋಗುತ್ತಿದ್ದಾರೆ. ಶಾಸಕರು ಕೂಡ ಕ್ಷೇತ್ರಗಳಲ್ಲಿ ಇಲ್ಲ, ಬೆಂಗಳೂರಿನಲ್ಲಿದ್ದಾರೆ. ಶಾಸಕರಿಗೆ ಮಂತ್ರಿ ಆಗೋದು ಮುಖ್ಯ, ಸಮಸ್ಯೆಯಲ್ಲ ಎಂದು ಕಾರವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೊರೊನಾ ಮೂರನೇ ಅಲೆ
ಅಕ್ಕ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೇ ಅಲೆ ಈಗಾಗಲೇ ಬಂದಿದ್ದು, ಸೋಂಕು ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರ ಪ್ರಮಾಣ ಹೆಚ್ಚಾಗಿರುತ್ತದೆ ಹಾಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಕೇರಳದಿಂದ ರಾಜ್ಯದ ಕರಾವಳಿ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಹೆಚ್ಚು ಜನ ಬರುತ್ತಾರೆ, ರಾಜ್ಯದ ಗಡಿಗಳಲ್ಲಿ ಅವರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಎರಡು ಡೋಸ್ ಲಸಿಕೆ ಪಡೆಯದವರನ್ನು ಗಡಿ ಒಳಗೆ ಬಿಡಬೇಕು ಹಾಗೂ ಪರೀಕ್ಷೆ ನಡೆಸಿ ನೆಗೆಟಿವ್ ಬಂದವರನ್ನು ಮಾತ್ರ ಒಳಗೆ ಬಿಡಬೇಕು ಎಂದು ಕಾರವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣ 2 ಸಾವಿರ ದಾಟಿದರೆ. ಹೀಗಾಗಿ ಮೂರನೇ ಅಲೆ ಆರಂಭವಾಗಿದೆ ಎಂದು ಅರ್ಥ. ಆಕ್ಸಿಜನ್, ಬೆಡ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಾರವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರೇಣುಕಾಚಾರ್ಯ ಅವರು ತಮ್ಮ ವಿರುದ್ಧ ಮಾನಹಾನಿಯಾಗುವಂತ ವೀಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಅವರು, ತಮ್ಮ ವೀಡಿಯೋ ಬರಬಹುದು ಎಂಬ ಅನುಮಾನ ಸುಮ್ಮಸುಮ್ಮನೆ ರೇಣುಕಾಚಾರ್ಯ ಅವರಿಗೆ ಏಕೆ ಬರುತ್ತದೆ? ಎಂದು ಪ್ರಶ್ನಿಸಿದರು.ಯಾವುದೋ ಕಾನೂನು ಬಾಹಿರ, ಅನೈತಿಕ ಕೃತ್ಯ ನಡೆಸಿ, ಸಿಕ್ಕಿಬಿದ್ದಿರಬಹುದು. ಎಷ್ಟೊಂದು ಮಂದಿ ರಾಜಕಾರಣಿಗಳಿದ್ದಾರೆ ಅವರನ್ನೆಲ್ಲಾ ಬಿಟ್ಟು ರೇಣುಕಾಚಾರ್ಯ, ಸದಾನಂದ ಗೌಡರದ್ದೇ ಏಕೆ ವೀಡಿಯೋ ಮಾಡ್ತಾರೆ? ಕಳ್ಳನ ಮನಸ್ಸು ಹುಳ್ ಹುಳ್ಳಗೆ ಎನ್ನುವಂತೆ ಇವರ ಕಥೆಯಾಗಿದೆ.

ಭಾರತೀಯ ಜನತಾ ಪಕ್ಷದವರು ತಾವು ಮಹಾನ್ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ನಮ್ಮಂತ ಸಂಸ್ಕಾರ, ನಡತೆ ಯಾರಿಗೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನೆರೆ ಪೀಡಿತ ಪ್ರದೇಶ ವೀಕ್ಷಣೆಗೆ ಆಗಮಿಸಿರುವ ಮಾಜಿ ಸಿಎಂ‌ ಸಿದ್ದರಾಮಯ್ಯ
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ ಹಾಗೂ ಯಲ್ಲಾಪುರ ತಾಲೂಕಿನ ನೆರೆ ಹಾನಿಯಾದ ಪ್ರದೇಶಗಳಿಗೆ ಮಾಜಿ ಸಿಎಂ‌ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈಗಾಗಲೇ ಬೆಳಿಗ್ಗೆ ಕಾರವಾರ ತಾಲೂಕಿನ ಕದ್ರಾ ಜಲಾಶಯದ ಬಳಿಯ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಕೆಪಿಸಿ ಹಾಗೂ ಕೈಗಾ ಅಧಿಕಾರಿಗಳ ಜತೆ ನೆರೆ ಸಂಬಂಧ ಸಭೆ ನಡೆಸಲಿರುವ ಸಿದ್ದರಾಮಯ್ಯ, ಮಧ್ಯಾಹ್ನ ಅಂಕೋಲಾ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಆರ್.ವಿ ದೇಶಪಾಂಡೆ ಸಾಥ್ ನೀಡಲಿದ್ದಾರೆ.

ಬೆಳಗ್ಗೆ ಬೀಚ್ ಬಳಿ ವಾಕಿಂಗ್ ನಡೆಸಿರುವ ಸಿದ್ದರಾಮಯ್ಯ
ಬೆಳಗ್ಗೆ 6.30 ರಿಂದ 7 ಗಂಟೆಯವರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಮುದ್ರದ ಬಳಿ ವಾಕಿಂಗ್‌ ನಡೆಸಿದ್ದಾರೆ. ಟೀ ಶರ್ಟ್ ಹಾಗೂ ಟ್ರ್ಯಾಕ್‌ ಪ್ಯಾಂಟ್ ಧರಿಸಿ ಸಿದ್ದರಾಮಯ್ಯ ವಾಕ್ಮಾಡಿದ್ದು, ಸಿದ್ದರಾಮಯ್ಯನವರಿಗೆ ಮಾಜಿ‌ ಶಾಸಕ‌ ಸತೀಶ್ ಸೈಲ್, ಮುಖಂಡರಾದ ಶಂಭು ಶೆಟ್ಟಿ ಮತ್ತಿತರರು ಸಾಥ್ ನೀಡಿದ್ದಾರೆ.

ಇದನ್ನೂ ಓದಿ:
ಕೊರೊನಾಕ್ಕೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗುಲಿದ ಭ್ರಷ್ಟಾಚಾರಿ ವೈರಸ್​ಗೆ ಮದ್ದು ಸಿಕ್ಕಿಲ್ಲ: ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ

Siddaramaiah: ಗಾಂಧೀಜಿ ಮಗ ಕುಡುಕನಾಗಲಿಲ್ವ?; ಬಸವರಾಜ​ ಬೊಮ್ಮಾಯಿಗೂ ಅಪ್ಪನ ಗುಣ ಇರುತ್ತದೆ ಎನ್ನಲಾಗದು ಎಂದ ಸಿದ್ದರಾಮಯ್ಯ

Published On - 11:09 am, Mon, 2 August 21