ಕಾರವಾರ: ಅನುದಾನ ವಿಚಾರದಲ್ಲಿ ಬಿಜೆಪಿ ಶಾಸಕರಿಬ್ಬರ ಮಧ್ಯೆ ಜಟಾಪಟಿ ನಡೆದಿದೆ. ಸಚಿವರ ಎದುರೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕರ ಜಟಾಪಟಿ ಉಂಟಾಗಿರುವ ಘಟನೆ ಕಾರವಾರದಲ್ಲಿ ಶುಕ್ರವಾರ (ಫೆಬ್ರವರಿ 11) ನಡೆದಿದೆ. ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಕಾರವಾರ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಕುಮಟಾ ಬಿಜೆಪಿ ಶಾಸಕ ದಿನಕರ ಶೆಟ್ಟಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಸಚಿವರಾದ ಶಿವರಾಮ ಹೆಬ್ಬಾರ್, ಶ್ರೀನಿವಾಸ ಪೂಜಾರಿ ಎದುರಲ್ಲೇ ವಾಗ್ವಾದ ನಡೆದಿದೆ. ಕಾರವಾರಕ್ಕೆ ಕಡಿಮೆ ಅನುದಾನ ಸಿಕ್ಕಿದೆ ಎಂದು ಹೇಳಿದ ಶಾಸಕಿ ರೂಪಾಲಿ ನಾಯ್ಕ್, ಆದರೆ ಕುಮಟಾ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಅನುದಾನ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೋಪಗೊಂಡ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಬೇಡಿ ಎಂದು ಶಾಸಕಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನೀವು ಹೆಣ್ಣು ಮಗಳಾಗಿದ್ದೀರಿ ಹಾಗೆಲ್ಲಾ ಮಾತನಾಡಬಾರದು. ಸರ್ಕಾರದಿಂದ ನೀವೂ ಕೋಟ್ಯಂತರ ರೂ. ಅನುದಾನ ತರ್ತೀರಿ ಎಂದು ಹೇಳಿದ್ದಾರೆ. ಈ ವೇಳೆ ಬಿಜೆಪಿ ಶಾಸಕರ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸ್ಥಳದಲ್ಲಿದ್ದ ಸಚಿವರಾದ ಶಿವರಾಮ ಹೆಬ್ಬಾರ್ ಹಾಗೂ ಶ್ರೀನಿವಾಸ ಪೂಜಾರಿ ಶಾಸಕರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
ಸರ್ಕಾರದ ಪ್ರತಿನಿಧಿಯಾಗಿ ಈಗ ಅನುದಾನದ ಮಾತು ಬೇಡ. ಐಬಿ ಇದೆ, ಅಲ್ಲಿ ಹೋಗಿ ಮಾತನಾಡಿಕೊಳ್ಳಿ ಎಂದು ಶಿವರಾಂ ಹೆಬ್ಬಾರ್ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ನಾನು ಜಗಳ ಮಾಡ್ತಿಲ್ಲ ಸರ್ ಎಂದು ಶಾಸಕಿ ರೂಪಾಲಿ ನಾಯ್ಕ್ ತಿಳಿಸಿದ್ದಾರೆ. ತೌಕ್ತೆ ಚಂಡಮಾರುತದ ಸಂದರ್ಭ ಹಾನಿಗೊಳಗಾದ ಪ್ರದೇಶದ ಪೈಕಿ ಕುಮಟಾಕ್ಕೆ ಮಾತ್ರ ಹೆಚ್ಚು ಅನುದಾನ ನೀಡಲಾಗಿದೆ ಎಂದು ಒಂದೇ ಸರಕಾರದ ಶಾಸಕರುಗಳಿಂದ ಅನುದಾನದ ವಿಷಯಕ್ಕೆ ಕಿತ್ತಾಟ ನಡೆದಿದೆ.
ನೆರೆ ಪರಿಹರಕ್ಕೆ ಸರಕಾರದಿಂದ 100 ಕೋಟಿ ರೂ. ಬಂದಿತ್ತು. ಆದರೆ, ನನ್ನ ಕ್ಷೇತ್ರಕ್ಕೆ ಸಿಕ್ಕ 5 ಕೋಟಿ ರೂ. ಹಿಡಿದುಕೊಂಡು ಜನರಿಗೆ ಏನು ಉತ್ತರ ನೀಡಲಿ? ಇದು ಸಭೆ, ಈ ಸಭೆಯಲ್ಲಿ ಕೇಳುತ್ತಿದ್ದೇನೆ. ಅನುದಾನ ಹೆಚ್ಚಳ ಮಾಡಲು ಜಿಲ್ಲಾಧಿಕಾರಿ ಬಳಿಯೂ ಮನವಿ ಮಾಡಿದ್ದೆ ಎಂದು ರೂಪಾಲಿ ನಾಯ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ: ರೂ. 26 ಲಕ್ಷ ತೆತ್ತು ಎರಡು ಹಳ್ಳಿಕಾರ್ ತಳಿ ಬಿತ್ತನೆ ಹೋರಿಗಳನ್ನು ಖರೀದಿಸಿದರು ಬಿಜೆಪಿ ಶಾಸಕ ಮಸಾಲೆ ಜಯರಾಂ
Published On - 7:11 pm, Fri, 11 February 22