ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ

ಇತ್ತೀಚೆಗೆ ರಾಯಚೂರಿನಲ್ಲಿ ಮದುವೆ ಒಂದು ತಿಂಗಳಿರುವಾಗಲೇ ಯುವಕ ನಾಪತ್ತೆ ಆಗಿದ್ದ. ಇದೀಗ ಇಂತಹದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಯುವತಿ ನಾಪತ್ತೆ ಆಗಿದ್ದಾಳೆ. ಘಟನೆಯಿಂದ ಪೋಷಕರು ಮತ್ತು ಕುಟುಂಬಸ್ಥರು ತೀವ್ರ ಆತಂಕಗೊಂಡಿದ್ದು, ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ
ನಾಪತ್ತೆಯಾಗಿರುವ ಯುವತಿ
Image Credit source: tv9 kannada
Edited By:

Updated on: Apr 25, 2026 | 5:18 PM

ಕಾರವಾರ, ಏಪ್ರಿಲ್​ 25: ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು (girl) ಮದುವೆಗೆ ಕೆಲವೇ ಗಂಟೆಗಳಿರುವಾಗ ನಾಪತ್ತೆಯಾಗಿರುವಂತಹ (Missing) ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಇದೀಗ ಆತಂಕದ ಮೌನ ಆವರಿಸಿದೆ. ಶಿರಸಿ ನಗರದ ನಿವಾಸಿ ಸೀಫಾ ಖಾನ್ ನಾಪತ್ತೆಯಾಗಿರುವ ಯುವತಿ. MBBS ಓದುತ್ತಿದ್ದ ಯುವಕನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

ನಡೆದಿದ್ದೇನು?

ಇಂದು (ಏಪ್ರಿಲ್ 25) ಮಧ್ಯಾಹ್ನ ಶಿರಸಿಯ ಉಸರಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಸೀಫಾ ಖಾನ್​​ ಮದುವೆ ನಿಶ್ಚಯವಾಗಿತ್ತು. ಮದುವೆಯ ಸಿದ್ಧತೆಗಳಲ್ಲಿ ಕುಟುಂಬಸ್ಥರೆಲ್ಲರೂ ಬ್ಯುಸಿಯಾಗಿದ್ದರು. ಆದರೆ, ವಧುವನ್ನು ಸಜ್ಜುಗೊಳಿಸಲು ಆಕೆಯ ಕೋಣೆಗೆ ಹೋಗಿ ನೋಡಿದಾಗ ಯುವತಿ ಕಾಣಿಸಲಿಲ್ಲ. ಮನೆಯವರು ಸುತ್ತಮುತ್ತ ಹಾಗೂ ಪರಿಚಿತರ ಮನೆಗಳಲ್ಲಿ ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ‘ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿ ಮದುವೆಯಾದ್ಳು!’ ಪತ್ನಿಯ ವಂಚನೆ ಬಗ್ಗೆ ಪತಿಯ ಅಳಲು

ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ. ಎಲ್ಲಿ ಹುಡುಕಿದರೂ ಯುವತಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಆತಂಕಕ್ಕೊಳಗಾದ ಪಾಲಕರು ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

MBBS ಯುವಕನೊಂದಿಗೆ ಓಡಿ ಹೋಗಿರುವ ಶಂಕೆ: ಪೊಲೀಸರಿಗೆ ದೂರು ನೀಡಿದ ಪೋಷಕರು

ಇನ್ನು ಸೀಫಾ ಖಾನ್, MBBS ಓದುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಆತನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಅವರ ಪ್ರೀತಿಯನ್ನ ಒಪ್ಪಿರಲಿಲ್ಲ. ಇಂದು ಬೇರೆಯವರ ಜೊತೆ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಅಷ್ಟರಲ್ಲಿ ಯುವತಿ ನಾಪತ್ತೆ ಆಗಿದ್ದಾಳೆ. ಸದ್ಯ ಮಗಳನ್ನ ಹುಡುಕಿಕೊಡುವಂತೆ ಯುವತಿಯ ತಂದೆ ಝಹೀರ್ ಖಾನ್ ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.

ಮದುವೆಗೆ ಒಂದು ತಿಂಗಳು ಇರುವಾಗಲೇ ಮದುಮಗ ಗಾಯಬ್

ಇನ್ನು ಇತ್ತೀಚೆಗೆ ಇಂತಹದೊಂದು ಘಟನೆ ರಾಯಚೂರಿನಲ್ಲಿ ನಡೆದಿತ್ತು. ಮದುವೆಗೆ ಒಂದು ತಿಂಗಳು ಇರುವಾಗಲೇ ಯುವಕ ನಾಪತ್ತೆ ಆಗಿದ್ದ. ಇಡೀ ಊರಿಗೆ ಬಾಡೂಟ ಹಾಕಿಸಿದ ಮಾರನೇ ದಿನವೇ ಗಾಯಬ್ ಆಗಿದ್ದ. ಇತ್ತ ತಂದೆ-ತಾಯಿ ಇಲ್ಲದ ಮೊಮ್ಮಗನನ್ನ ಸಲುಹಿದ್ದ ಅಜ್ಜಿ ಕಣ್ಣಿರು ಹಾಕಿದ್ದರು. ಮೊಮ್ಮಗನಿಗಾಗಿ ಉಪವಾಸ ಕೂಡ ಮಾಡಿದ್ದರು.

25 ವರ್ಷದ ಮುದ್ದುರಂಗಪ್ಪ ನಾಪತ್ತೆಯಾಗಿದ್ದ ಯುವಕ. ಬಿಎ ಡಿಗ್ರಿ ಮುಗಿಸಿ ಹೊಲ ಮನೆ ಕೆಲಸ ಮಾಡಿಕೊಂಡಿದ್ದ. ಕಳೆದೊಂದು ವರ್ಷದ ಹಿಂದೆ ಮುದ್ದುರಂಗಪ್ಪಗೆ ಸಂಬಂಧಿಕರೊಬ್ಬರ ಯುವತಿ ಜೊತೆ ಮದುವೆ ಫಿಕ್ಸ್ ಆಗಿತ್ತು. ಇನ್ನೊಂದು ತಿಂಗಳಲ್ಲಿ ಮದುವೆ ಆಗಬೇಕಿತ್ತು. ಈ ಮುದ್ದುರಂಗಪ್ಪ ಕುಟುಂಬದಲ್ಲಿ ಮದುವೆಗೂ ಮುನ್ನ ಮರಿ ಹೊಡೆದು ಇಡೀ ಊರಿಗೆ ಬಾಡೂಟ ಹಾಕಿಸುವ ಪದ್ದತಿ ಇದೆ.

ಇದನ್ನೂ ಓದಿ: ಮದ್ವೆಯಾದ ಏಳೇ ತಿಂಗಳಿಗೆ ನವವಧು ಇದ್ದಕ್ಕಿದ್ದಂತೆ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

ಹಾಗಾಗಿ ಇಡೀ ಊರಿಗೆ ಬಾಡೂಟ ಹಾಕಿಸಿದ್ದ. ಹೀಗೆ ಬಾಡೂಟ ಹಾಕಿಸಿ ಮದುವೆ ತಯಾರಿಯಲ್ಲಿದ್ದ ಮುದ್ದುರಂಗಪ್ಪ ಮರುವ ದಿನವೇ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ಹೀಗಾಗಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್​ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us