
ಉತ್ತರ ಕನ್ನಡ, ಜನವರಿ 08: ರಾಜ್ಯದ ವಿವಿಧೆಡೆ ಸಂಭವಿಸಿದ ಬಸ್ ಅಪಘಾತದಲ್ಲಿ ಒಟ್ಟು 22 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕನ್ನಡದಲ್ಲಿ ಮರಕ್ಕೆ ಬಸ್ ಡಿಕ್ಕಿಯಾಗಿ 20 ಜನ ಗಾಯಗೊಂಡಿದ್ದರೆ, ಸೈಕಲ್ನಲ್ಲಿ ತೆರಳುತ್ತಿದ್ದ ವೇಳೆ ಬಸ್ ಗುದ್ದಿದ ಪರಿಣಾಮ ಕಲಬುರಗಿಯಲ್ಲಿ ವಿದ್ಯಾರ್ಥಿಯ ಕೈ ಸಂಪೂರ್ಣ ಛಿದ್ರವಾಗಿದೆ. ಬಸ್ ಡಿಕ್ಕಿಯಾಗಿ ಹಾವೇರಿಯಲ್ಲೂ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ಮರಕ್ಕೆ ಗುದ್ದಿದ ಬಸ್
ಓವರ್‌ಟೇಕ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಗುದ್ದಿದ ಪರಿಣಾಮ 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾನಸಗೇರಿ ಗ್ರಾಮದ ಮೊರಾರ್ಜಿ ಹಾಸ್ಟೆಲ್ ಬಳಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ, 8 ವಿದ್ಯಾರ್ಥಿನಿಯರು, ಇಬ್ಬರು ಶಾಲಾ ಮಕ್ಕಳು, ಇಬ್ಬರು ಮಹಿಳೆಯರು ಮತ್ತು ನಿರ್ವಾಹಕ ಸೇರಿ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಓವರ್‌ಟೇಕ್ ಮಾಡುವ ಸಂದರ್ಭ ಮುಂದಿನಿಂದ ಕಾರು ಬಂದ ಹಿನ್ನೆಲೆ ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ಮರಕ್ಕೆ ಹೋಗಿ ಗುದ್ದಿದೆ. ಗಾಯಾಳುಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಊಟಿ ಬಳಿ 120 ಅಡಿ ಆಳಕ್ಕೆ ಬಿದ್ದ ಮಿನಿಬಸ್; 32 ಜನರಿಗೆ ಗಾಯ
ಸೈಕಲ್ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗೆ ಕೆಕೆಆರ್ಟಿಸಿ ಬಸ್ ಡಿಕ್ಕಿಯಾಗಿರುವ ಘಟನೆ ಕಲಬುರಗಿಯ ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿ ಇರ್ಫಾನ್ ದವಲಸಾಬ್(15)ಗೆ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಘಟನೆ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಗುದ್ದಿದ ಪರಿಣಾಮ ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾವೇರಿ ತಾಲ್ಲೂಕಿನ ಕೊಣನತಂಬಿಗಿ ಗ್ರಾಮದ ವಿಧ್ಯಾರ್ಥಿ ರೋಹಿತ್ ಕೆಸರಳ್ಳಿ ಬೆನ್ನಿಗೆ ಮತ್ತು ತಲೆಗೆ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ನಗರದ ಹಾಸ್ಟೆಲ್ನಲ್ಲಿ ವಾಸವಿದ್ದು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಗಾಯಾಳುವಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:43 pm, Thu, 8 January 26