ಸರಕಾರಿ ಹಣದ ದುರ್ಬಳಕೆ ಆರೋಪ: ಭಟ್ಕಳ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಸಾಮಾಜಿಕ ಕಾರ್ಯಕರ್ತರಿಂದ ಲೋಕಾಯುಕ್ತಕ್ಕೆ ದೂರು

ಸರಕಾರದ ಅನುದಾನದಲ್ಲಿ ಸ್ವಂತ ಫಾರ್ಮ್ ಹೌಸ್​ಗೆ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಸರಕಾರಿ ಹಣದ ದುರ್ಬಳಕೆ ಆರೋಪ ಕೇಳಿಬಂದಿದೆ.

ಸರಕಾರಿ ಹಣದ ದುರ್ಬಳಕೆ ಆರೋಪ: ಭಟ್ಕಳ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಸಾಮಾಜಿಕ ಕಾರ್ಯಕರ್ತರಿಂದ ಲೋಕಾಯುಕ್ತಕ್ಕೆ ದೂರು
ಭಟ್ಕಳ ಶಾಸಕ ಸುನೀಲ್ ನಾಯ್ಕ್

Updated on: Apr 03, 2023 | 9:34 PM

ಕಾರವಾರ: ಸರಕಾರದ ಅನುದಾನದಲ್ಲಿ ಸ್ವಂತ ಫಾರ್ಮ್ ಹೌಸ್​ಗೆ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ (Bhatkal MLA Sunil Naik) ವಿರುದ್ಧ ಸರಕಾರಿ ಹಣದ ದುರ್ಬಳಕೆ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತರಾದ ನಾಗೇಶ್ ಮತ್ತು ನಾಗೇಂದ್ರ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಟ್ಕಳದ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 40ಲಕ್ಷ ರೂ. ಮೊತ್ತದ ರಸ್ತೆ ಮಂಜೂರಾಗಿತ್ತು. ಆದರೆ ಹೆಬಳೆಯಲ್ಲಿ ರಸ್ತೆ ನಿರ್ಮಾಣ ಮಾಡದೆ ಸ್ವಂತ ಫಾರ್ಮ್ ಹೌಸ್​ಗೆ ರಸ್ತೆ ನಿರ್ಮಾಣ ಮಾಡಿಕೊಂಡಿರುವ ಆರೋಪ ಮಾಡಲಾಗುತ್ತಿದೆ. 516.90 ಮೀಟರ್ ಉದ್ದ 3.70 ಮೀಟರ್ ಅಗಲ ಹೊಂದಿರುವ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ದಾಖಲೆಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಎಂದು ತೋರಿಸಿ ಸ್ವಂತ ಬಳಕೆ ಮಾಡಿಕೊಂಡಿದ್ದಾರೆ. ಸದ್ಯ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಲೋಕಾಯುಕ್ತಕ್ಕೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ದೂರು ನೀಡಿದೆ.

ಇದರ ಜತೆಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 2020, 21 ರಲ್ಲಿ 1.51ಕೋಟಿ ಅನುದಾನ ಬಿಡುಗಡೆಯಾಗಿತ್ತು. ಬೆಳಕೆ ಗ್ರಾಮದ ವ್ಯಾಪ್ತಿಯಲ್ಲಿ ಸಮುದ್ರ ತಡೆಗೋಡೆ ನಿರ್ಮಾಣಕ್ಕೆ ಈ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಶಾಸಕ ಬೆಳಕೆ ಗ್ರಾಮದಲ್ಲಿ ಕಾಮಗಾರಿ ಮಾಡದೆ ತಮ್ಮ ಪಾರ್ಮ್ ಹೌಸ್ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಿಕೊಂಡಿರುವ ಆರೋಪ ಕೂಡ ಮಾಡಲಾಗಿದೆ. ಸಮುದ್ರಕ್ಕೆ ಹೊಂದಿಕೊಂಡ ಅಂದಾಜು 5‌ ಎಕರೆ ಜಾಗದಲ್ಲಿ ಫಾರ್ಮ್ ಹೌಸ್ ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ: 6 ದಿನಗಳಲ್ಲಿ 47 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ಸೇರಿದಂತೆ 12 ಕೋಟಿಗೂ ಹೆಚ್ಚು ನಗದು ಜಪ್ತಿ

ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿಗೆ ಷರತ್ತುಬದ್ಧ ರಿಲೀಫ್

ಕೆಲ ದಿನಗಳ ಹಿಂದೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಚಿಕ್ಕಮಗಳೂರು ಎಸ್‌ಪಿ ಮೂಲಕ ಜಾಮೀನು ರಹಿತ ವಾರಂಟ್ ಜಾರಿಗೆ ಸೂಚನೆ ನೀಡಲಾಗಿತ್ತು. ಸದ್ಯ ಬಂಧನ ಭೀತಿ ಹಿನ್ನೆಲೆ ಎಂ.ಪಿ.ಕುಮಾರಸ್ವಾಮಿ ತಡೆಯಾಜ್ಞೆ ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದು, ಷರತ್ತುಬದ್ಧ ರಿಲೀಫ್ ನೀಡಿದೆ.

ಎಂ.ಪಿ.ಕುಮಾರಸ್ವಾಮಿ ಶಿಕ್ಷೆ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ್ದು, ಚೆಕ್​ಬೌನ್ಸ್ ಕೇಸ್ ತೀರ್ಪಿನ ಮೊತ್ತದಲ್ಲಿ ಶೇ.20 ರಷ್ಟು ಠೇವಣಿಯನ್ನು 60 ದಿನಗಳಲ್ಲಿ ಇಡಲು ಸೆಷನ್ಸ್ ಕೋರ್ಟ್ ಸೂಚನೆ ನೀಡಿದೆ. ವಿಚಾರಣಾ‌ ನ್ಯಾಯಾಲಯದಲ್ಲಿ 50 ಸಾವಿರ ಬಾಂಡ್, ಶ್ಯೂರಿಟಿ ನೀಡಲು ಆದೇಶಿಸಿದೆ. ಹೂವಪ್ಪಗೌಡ ಎಂಬುವರು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಒಟ್ಟು 8 ಕೇಸ್​​​ಗಳಲ್ಲಿ 1.38 ಕೋಟಿ ಹಣ ಪಾವತಿಸಬೇಕಿತ್ತು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿತ್ತು.

ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ FIR

ಬೆಂಗಳೂರು: ಅಕ್ರಮವಾಗಿ ಕುಕ್ಕರ್​​​ಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದಡಿ ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಆರ್​ಐ ದಾಖಲು ಮಾಡಲಾಗಿದೆ. ಮಾ.28ರಂದು ಅನಿಲ್ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 504 ಕುಕ್ಕರ್​​​ಗಳನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ವರಲಕ್ಷ್ಮಮ್ಮ ದೂರು ನೀಡಿದ್ದರು.

ಇದನ್ನೂ ಓದಿ: Haladi srinivas shetty: ಚುನಾವಣೆಯಿಂದ ಹಿಂದೆಸರಿದ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ. ಹಣ ಕಾರಿನಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳ, ಕಟೀಲು ದೇವಾಲಯ ಹುಂಡಿಗೆ ಹಾಕಲು ಹಣ ತಂದಿರುವುದಾಗಿ ಪಾವಗಡ ಮೂಲದ ವೈದ್ಯ ಹೇಳಿದ್ದಾರೆನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:32 pm, Mon, 3 April 23