AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದ ನದಿ ತಿರುವು ಯೋಜನೆಗಳನ್ನ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಮನವಿ

ಉತ್ತರ ಕನ್ನಡದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಳನ್ನು ಕೈಬಿಡುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ. ಈ ಯೋಜನೆಗಳು ಜಿಲ್ಲೆಯ ಪರಿಸರಕ್ಕೆ, ಜೀವ ವೈವಿಧ್ಯಕ್ಕೆ ಮತ್ತು ಸ್ಥಳೀಯ ಸಮುದಾಯಗಳಿಗೆ ಗಂಭೀರ ಹಾನಿ ಉಂಟುಮಾಡುತ್ತವೆ ಎಂದು ಸಮಿತಿ ವಿವರಿಸಿದೆ. ಸಿಎಂ ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ, ಬಳಿಕ ಸಭೆ ನಡೆಸುವ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡದ ನದಿ ತಿರುವು ಯೋಜನೆಗಳನ್ನ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಮನವಿ
ಸಿಎಂಗೆ ಮನವಿ
ಪ್ರಸನ್ನ ಹೆಗಡೆ
|

Updated on: Oct 31, 2025 | 6:38 PM

Share

ಬೆಂಗಳೂರು, ಅಕ್ಟೋಬರ್​ 31: ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳ ನದಿ ತಿರುವು ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಭೇಟಿಯಾಗಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮನವಿ ಸಲ್ಲಿಸಿದೆ.

ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಹತ್ತಾರು ಬೃಹತ್ ಯೋಜನೆಗಳ ಭಯದಿಂದ ನಲುಗಿ ಹೋಗಿದೆ. ಪರಿಸರ ಧಾರಣ ಸಾಮರ್ಥ್ಯ ಮುಗಿದಿದ್ದು, ಬೇಡ್ತಿ-ಅಘನಾಶಿನಿ-ಶರಾವತಿ ಯೋಜನೆಗಳು ಜಾರಿಯಾದರೆ ಭಾರಿ ಅವಘಡಗಳು ನಡೆಯುವ ಗಂಭೀರ ಪರಿಸ್ಥಿತಿ ಉಂಟಾಗಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಎಂಗೆ ಮನವರಿಕೆ ಮಾಡಿದರು. ನದಿ ತಿರುವು ಯೋಜನೆಗಳನ್ನು ನಿಲ್ಲಿಸುವಂತೆ ಶಾಸಕ ಶಿವರಾಮ್ ಹೆಬ್ಬಾರ್​ ಒತ್ತಾಯಿಸಿದ್ದರೆ, ಬೇಡ್ತಿ – ಅಘನಾಶಿನಿ – ಶರಾವತಿ ನದಿಗಳಲ್ಲಿ ನೀರೇ ಇಲ್ಲದ ಪರಿಸ್ಥಿತಿ ಬರಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಅವರು ಆತಂಕ ವ್ಯಕ್ತ ಪಡಿಸಿದರು. ವನವಾಸಿಗಳ ಪರಿಸ್ಥಿತಿ ವನಗಳ ನಾಶದಿಂದ ಸಂಕಷ್ಟಕ್ಕೆ ಈಡಾಗಲಿದೆ. ನದಿ ಕಣಿವೆಗಳ ಎಲ್ಲ ಜನ ಸಮುದಾಯಗಳು, ಜೀವ ವೈವಿಧ್ಯಕ್ಕೆ ಕುತ್ತು ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಿಎಂ ಗಮನಕ್ಕೆ ತಂದರು.

ಇದನ್ನೂ ಓದಿ: ಅಡಿಕೆ ತೋಟದಲ್ಲಿನ ತ್ಯಾಜ್ಯಕ್ಕೂ ಬಂಗಾರದ ಬೆಲೆ ಇದೆ ಎಂದು ತೋರಿಸಿಕೊಟ್ಟ ಶಿರಸಿಯ ರೈತ ದಂಪತಿ 

ಬೇಡ್ತಿ – ಅಘನಾಶಿನಿ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪಶ್ಚಿಮಘಟ್ಟದಲ್ಲಿ ಬೇಡ್ತಿ – ಅಘನಾಶಿನಿ – ಶರಾವತಿ ನದಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು. ವಿಜ್ಞಾನಿಗಳು, ಜನಪ್ರತಿನಿಧಿಗಳು ಸಂಘಟನೆಗಳ ಜೊತೆ ವಿಶೇಷ ಪುನರ್ ವಿಮರ್ಶೆ ಮಾಡಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು. ಸ್ವರ್ಣವಲ್ಲೀ ಸ್ವಾಮೀಜಿಯವರ ನೇತೃತ್ವದಲ್ಲಿ ಜನಾಂದೋಲನ ನಡೆಯುತ್ತಿದೆ ಎಂಬ ಸಂಗತಿಯನ್ನು ವಿ. ಎನ್. ಹೆಗಡೆ ಬೊಮ್ಮನಳ್ಳಿಯವರು ಸಿಎಂ ಗಮನಕ್ಕೆ ತಂದರು.

ಸಿಎಂ ಸಿದ್ದರಾಮಯ್ಯ ಭರವಸೆ

ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ಯೋಜನೆಗಳ ಕುರಿತು ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿಲಾಗುವುದು. ಬಳಿಕ ತಮ್ಮೆಲ್ಲರ ಜೊತೆಗೆ ವಿಜ್ಞಾನಿಗಳೊಂದಿಗೆ ಸಭೆ ಏರ್ಪಡಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಈ ವೇಳೆ ವೆಂಕಟೇಶ ನಾಯ್ಕ, ಬಾಲಚಂದ್ರ ಸಾಯಿಮನೆ, ಬೆಂಗಳೂರಿನ ರಮೇಶ ಭಟ್, ನರಹರಿ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.