Honnavar: ಡಿಕೆ ಶಿವಕುಮಾರ್​ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಾಗ ಹೆಲಿಪ್ಯಾಡ್​​​ನಲ್ಲಿ ಬೆಂಕಿ; ತಪ್ಪಿದ ದುರಂತ

|

Updated on: May 04, 2023 | 5:21 PM

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ ಕಾಣಿಸಿಕೊಂಡಿದೆ. ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್​ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

Honnavar: ಡಿಕೆ ಶಿವಕುಮಾರ್​ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಾಗ ಹೆಲಿಪ್ಯಾಡ್​​​ನಲ್ಲಿ ಬೆಂಕಿ; ತಪ್ಪಿದ ದುರಂತ
ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ
Follow us on

ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavar) ರಾಮತೀರ್ಥ ಬಳಿಯ ಹೆಲಿಪ್ಯಾಡ್​ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್​ಗೆ ಬಂದಿಳಿದರು. ಈ ವೇಳೆ, ಹೆಲಿಪ್ಯಾಡ್​ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್​ಗೆ ಸಿಗ್ನಲ್​​ ಕೊಡುವ ಸ್ಮೋಕ್​ ಕ್ಯಾಂಡಲ್​ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಸಂಭಾವ್ಯ ದುರಂತ ತಪ್ಪಿದೆ.

ಮಂಗಳವಾರ ಡಿಕೆ ಶಿವಕುಮಾರ್ ಅವರು ಜಕ್ಕೂರು ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಹೆಲಿಕಾಪ್ಟರ್​ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. ಅದೃಷ್ಟವಶಾತ್​ ಹೆಲಿಕಾಪ್ಟರ್​ನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.

ಈ ಘಟನೆಯ ನಂತರ ಡಿಕೆ ಶಿವಕುಮಾರ್ ಅವರು ನೊಣವಿನಕೆರೆ ಅಜ್ಜಯ್ಯನ ಮೊರೆ ಹೋಗಿದ್ದರು. ಜತೆಗೆ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರಿಂದ ಸಲಹೆಗಳನ್ನೂ ಪಡೆದಿದ್ದರು. ನಂತರ ಪ್ರತಿಕ್ರಿಯೆ ನೀಡಿದ್ದ ರಾಜಗುರು ದ್ವಾರಕನಾಥ್, ಡಿಕೆ ಶಿವಕುಮಾರ್ ಅವರ ಪತ್ನಿಯ ಗ್ರಹಗತಿ ಚೆನ್ನಾಗಿರುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಅವರಿಗೆ ಸದ್ಯ ಗುರುಬಲ, ಶನಿ ಬಲ ಎರಡೂ ಇಲ್ಲ. ಆದರೆ, ಅವರ ಪತ್ನಿ ಉಷಾ ಅವರ ಗ್ರಹ ಗತಿ ಚೆನ್ನಾಗಿದ್ದು, ಆ ದೈವ ಬಲ ಶಿವಕುಮಾರ್ ಅವರನ್ನು ಕಾಪಾಡುತ್ತಿದೆ ಎಂದಿದ್ದರು.

ಚಾಮುಂಡೇಶ್ವರಿ ದೇವಿ ಮುಂದೆ ರುದ್ರಾಕ್ಷಿ ಜಪ ಮಾಡಿದ ಡಿಕೆಶಿ

ಹೊನ್ನಾವರಕ್ಕೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಮೈಸೂರಿನಲ್ಲಿದ್ದರು. ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ 10 ನಿಮಿಷಗಳಿಗೂ ಹೆಚ್ಚು ಕಾಲ ರುದ್ರಾಕ್ಷಿ ಜಪ ಮಾಡಿದ್ದರು. ಬಳಿಕ ಗೋಪುರದ ಮುಂದೆ ಈಡುಗಾಯಿ ಸೇವೆ ನೆರವೇರಿಸಿದ್ದರು. ನಂತರ ಹೊನ್ನಾವರಕ್ಕೆ ಪ್ರಯಾಣಿಸಿದ್ದರು.

ಡಿಕೆ ಶಿವಕುಮಾರ್​ಗೆ ತಪ್ಪದ ಸಂಕಷ್ಟಗಳು

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಶಿವಕುಮಾರ್ ವಿರುದ್ಧ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು. ಇನ್ನೇನು ಚುನಾವಣೆ ಹೊತ್ತಲ್ಲೇ ಡಿಕೆಶಿ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಚಾರಣೆ ಮುಂದೂಡಿಕೆಯಾಗಿತ್ತು. ಇದರ ಬೆನ್ನಲ್ಲೇ ಕನಕಪುರದಲ್ಲಿ ನಾಪಮತ್ರ ತಿರಸ್ಕೃತವಾಗುವ ಆತಂಕ ಅವರಿಗೆ ಬಂದೊದಗಿತ್ತು. ಹೀಗಾಗಿ ಅವರ ಸಹೋದರ ಡಿಕೆ ಸುರೇಶ್ ಸಹ ಅಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಅವರು ಶೃಂಗೇರಿ ಸೇರಿದಂತೆ ಹಲವು ದೇಗುಲಗಳಿಗೆ ಭೇಟಿ ನೀಡಿದ್ದರು. ಶೃಂಗೇರಿಯಲ್ಲಿ ಚಂಡಿಕಾಯಾಗವನ್ನೂ ಮಾಡಿಸಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕೂತಿದಕ್ಕೂ ಡಿಕೆ ಶಿವಕುಮಾರ್ ಹೆಲಿಕಾಪ್ಟರ್​ಗೆ ರಣಹದ್ದು ಗುದ್ದಿದಕ್ಕೂ ಇದೆಯಾ ಸಾಮ್ಯತೆ

ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದ ಬಜರಂಗದಳ ನಿಷೇಧ ವಿಚಾರ

ಡಿಕೆ ಶಿವಕುಮಾರ್​ ಹೆಲಿಕಾಪ್ಟರ್​​ಗೆ ಹದ್ದು ಡಿಕ್ಕಿಯಾಗಿದ್ದ ವಿಚಾರ ಸಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಘಟನೆ ಸಂಭವಿಸಿದ್ದರಿಂದ ಎರಡಕ್ಕೂ ಥಳಕು ಹಾಕಲಾಗಿತ್ತು. ವಾಯುಪುತ್ರ ಸಂಘಟನೆ ನಿಷೇಧಿಸ ಹೊರಟವರಿಗೆ ವಿಷ್ಣುವಿನ ವಾಹನ ಎಚ್ಚರಿಕೆ ನೀಡಿದ್ದಾನೆ ಎಂಬ ಸಂದೇಶಗಳನ್ನು ಅನೇಕರು ಪೋಸ್ಟ್​ ಮಾಡಿದ್ದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ; ಡಿಕೆ ಶಿವಕುಮಾರ್

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೊನ್ನಾವರದಲ್ಲಿ ಡಿಕೆ ಶಿವಕುಮಾರ್ ಹೇಳಿದರು. ಮಾಧ್ಯಮದವರು ಹಾಗೂ ಬಿಜೆಪಿಯವರು ನಮ್ಮ ಪ್ರಣಾಳಿಕೆ ಸರಿಯಾಗಿ ನೋಡಿಲ್ಲ. ದೇಶದ್ರೋಹ ಮಾಡುವ ಸಂಘಟನೆಯನ್ನು ಮಾತ್ರ ನಿಷೇಧಿಸುವ ಬಗ್ಗೆ ಹೇಳಿದ್ದೇವೆ. ನಾನು ಶಿವ, ಶಿವನ ಕುಮಾರ. ಪ್ರಧಾನಿ ಮೋದಿ ಈ ದೇಶದಲ್ಲಿ ಏನು ಬಡವರಿಗೆ ಸಹಾಯ ಮಾಡಿದ್ದೇನೆ ಎಂಬುದನ್ನು ಹೇಳಿಲ್ಲ. ಹದಿನೈದು ಲಕ್ಷ ರೂಪಾಯಿ ಅಕೌಂಟ್​​ಗೆ ಹಾಕಿದ ಬಗ್ಗೆ, ಬೆಲೆ ಏರಿಕೆ ಬಗ್ಗೆ ಹೇಳುವುದಿಲ್ಲ. ಬಿಜೆಪಿಗರು ಭಾವನೆಗಳ ಆಧಾರದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್ ಬದುಕಿನ ವಿಚಾರದಲ್ಲಿ ಎದುರಿಸುತ್ತಿದೆ. ಹನುಮಾನ್ ಯಾರ ಆಸ್ತಿಯೂ ಅಲ್ಲ, ಹಿಂದುತ್ವ ನಮ್ಮ ಆಸ್ತಿಯೂ ಹೌದು. ನಾನೂ ಕೂಡ ಹಿಂದು, ಸಿದ್ದರಾಮಯ್ಯ ಸಹ ಹಿಂದೂ ಎಲ್ಲಾ ಹಿಂದು ಧರ್ಮದ ಆಚರಣೆ ಮಾಡುತ್ತೇವೆ. ಬಂಗಾರಪ್ಪ ಸಿಎಂ ಆದಾಗ ಆರಾಧನ ಸ್ಕೀಮ್ ತಂದು ಹಳ್ಳಿಯಲ್ಲಿರುವ ದೇವಸ್ಥಾನ ಬೆಳೆಸಿದ್ದರು ಎಂದು ಅವರು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Thu, 4 May 23