ಉತ್ತರ ಕನ್ನಡ: ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತ (Cyclone Biparjoy) ದ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿಗಿದೆ. ಪರಿಣಾಮ ಮೀನುಗಾರಿಕೆ ಯಾಂತ್ರಿಕ ಬೋಟ್ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುವಂತಹ ಘಟನೆ ಅಂಕೋಲ ತಾಲೂಕಿನ ತರಂಗಮೇಟ್ ಕಡಲತೀರದಲ್ಲಿ ನಡೆದಿದೆ. ವಿಶ್ವ ಹರಿಕಾಂತ ಎಂಬುವರಿಗೆ ಈ ಯಾಂತ್ರಿಕ ಬೋಟ್ ಸೇರಿದ್ದು, ಇಂಜಿನ್, ಮೀನಿನ ಬಲೆ ಸೇರಿ 2.5 ಲಕ್ಷ ಮೌಲ್ಯ ಹಾನಿ ಆಗಿದ್ದು, ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮೀನುಗಾರರು ಆಗ್ರಹಿಸಿದ್ದಾರೆ.
ಇದೇ ಬಿಪರ್ ಜಾಯ್ ಚಂಡಮಾರುತದ ಅಲೆಗಳ ಅಬ್ಬರಕ್ಕೆ ತರಂಗಮೇಟ್ ಕಡಲತೀರದಲ್ಲಿ ಬಾರಿ ಕಡಲ ಕೊರೆತ ಉಂಟಾಗಿದೆ. ಪರಿಣಾಮ ಅಲೆಗಳ ಹೊಡೆತಕ್ಕೆ 20 ಕ್ಕೂ ಹೆಚ್ಚು ತೆಂಗಿನ ಮರಗಳು ಕೊಚ್ಚಿ ಹೋಗಿವೆ. ತರಂಗಮೇಟ್ ಕಡಲ ತೀರದಲ್ಲಿ ಪ್ರತಿವರ್ಷ 50 ಮೀಟರ್ ಕಡಲ ಕೊರೆತ ಉಂಟಾಗಿದೆ. ಕಡಲ ಕೊರೆತವಾದರು ತಡಗೋಡೆ ನಿರ್ಮಾಣ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ ತೋರಿದೆ.
ಇದನ್ನೂ ಓದಿ: Cyclone Biparjoy: ಚಂಡಮಾರುತ ಸಮಯದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ನೀಡಿದ ಎನ್ಡಿಆರ್ಎಫ್
ಅಬ್ಬರಿಸುವ ಅಲೆಗಳನ್ನು ಕಂಡು ತರಂಗಮೇಟ್ ಕಡಲತೀರದಲ್ಲಿ ನೂರಾರು ಮೀನುಗಾರರ ಮನೆಗಳಿದ್ದು, ಆತಂಕಗೊಂಡಿದ್ದಾರೆ. ಸೈಕ್ಲೋನ್ ಎಪೆಕ್ಟ್ನಿಂದ ಪಾತಿ ದೋಣಿಗಳಿಗೂ ಹಾನಿ ಆಗಿದೆ.
ಸಮುದ್ರಕ್ಕೆ ಇಳಿದಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಓರ್ವ ಕೊಚ್ಚಿಹೋಗಿರುವಂತಹ ಘಟನೆ ನಿನ್ನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿತ್ತು. ಕೊಚ್ಚಿಹೋದ ಸಂತೋಷ್ ಹುಲಿಗೊಂಡ(19)ಗಾಗಿ ಹುಡುಕಾಟ ನಡೆದಿದ್ದು, ಹಸನ್ ಮಜ್ಜಿಗಿ ಗೌಡರ್(21), ಸಂಜೀವ್ ಹೆಬ್ಬಳ್ಳಿ(20) ಇಬ್ಬರ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಸಮುದ್ರದ ಅಲೆಗೆ ಸಿಲುಕಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು: ಮತ್ತಿಬ್ಬರ ರಕ್ಷಣೆ
ಧಾರವಾಡ ಜಿಲ್ಲೆ ಕಲಘಟಗಿ ಮೂಲದ 22 ಜನರು ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದರು. ಚಂಡಮಾರುತದ ಪರಿಣಾಮ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಕೊಚ್ಚಿಹೋದ ಸಂತೋಷ್ ಹುಲಿಗೊಂಡಗಾಗಿ ಲೈಫ್ಗಾರ್ಡ್ಸ್ ಶೋಧ ಮಾಡುತ್ತಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Wed, 14 June 23