ಉತ್ತರ ಕನ್ನಡ, ಜೂ.07: ಬೆಂಗಳೂರು ಸೇರಿದಂತೆ ಇಂದು(ಜೂ.07) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ (Rain)ಯಾಗಿದ್ದು, ಹಲವಾರು ಅವಾಂತರಗಳು ಆಗಿವೆ. ಅದರಂತೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಮಹಾಬಲೇಶ್ವರನ ಆತ್ಮಲಿಂಗ ಹೊರ ನೀರಿನಿಂದ ಜಲಾವೃತವಾಗಿದೆ. ಈ ಹಿನ್ನಲೆ ದೇವಸ್ಥಾನದ ಸಿಬ್ಬಂದಿಗಳು ಗರ್ಭಗುಡಿಯಲ್ಲಿನ ನೀರು ಹೊರಹಾಕಲು ಪರದಾಟ ನಡೆಸಿದ್ದಾರೆ.
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮಳೆಯ ಆರ್ಭಟಕ್ಕೆ ನಗರದ ಬಂಡಿಮೋಟ್, ಕೌಲಬಜಾರ ದೋಬಿಘಟ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಜೊತೆಗೆ ಚರಂಡಿ ನೀರು ಬ್ಲಾಕ್ ಆಗಿ, ಹಲವು ಏರಿಯಾಗಳಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗಿದೆ. ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿ ಪಾತ್ರೆ, ವಸ್ತುಗಳು ತೇಲಾಡುತ್ತಿದೆ. ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ದೂರು ನೀಡಿದರೂ ಚರಂಡಿ ಸ್ವಚ್ಛ ಮಾಡದ ಪಾಲಿಕೆಯಿಂದ ಇಷ್ಟೇಲ್ಲ ಅವಾಂತರ ಸೃಷ್ಟಿಯಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರಿ ಮಳೆಗೆ ಕುಸಿದ ರಸ್ತೆ; ಸವಾರರಿಗೆ ತಟ್ಟಿದ ಟ್ರಾಫಿಕ್ ಬಿಸಿ
ಕಲಬುರಗಿ: ಭಾರಿ ಮಳೆಯಿಂದ ಜಿಲ್ಲೆಯ ಸೇಡಂ ಪೊಲೀಸ್ ಠಾಣೆ ಜಲಾವೃತವಾಗಿದೆ. ಇತ್ತ ನೀರು ಹೊರ ಹಾಕಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಸೇಡಂ ಪಟ್ಟಣದಲ್ಲಿ ಒಂದು ಗಂಟೆಗಳ ಕಾಲ ಅಬ್ಬರಿಸಿದ ವರುಣಾರ್ಭಟಕ್ಕೆ ತಗ್ಗು ಪ್ರದೇಶದಲ್ಲಿರುವ ಕಾರಣ ಠಾಣೆಗೆ ನೀರು ನುಗ್ಗಿದೆ. ಇದರಿಂದ ಠಾಣೆ ಒಳಗೆ, ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಪ್ರತಿ ಬಾರಿ ಭಾರೀ ಮಳೆ ಬಂದಾಗ ಠಾಣೆಗೆ ಮಳೆ ನೀರು ನುಗ್ಗುತ್ತದೆ.
ವಿಜಯಪುರ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ 15 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ದಿಢೀರ್ ಮಳೆ ಆರ್ಭಟಕ್ಕೆ ಜನ ಕಂಗಾಲಾಗಿದ್ದು, ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.
ಕೊಪ್ಪಳ: ನಗರ ಸೇರಿ ಜಿಲ್ಲೆಯಾದ್ಯಂತ ಮಳೆ ಅಬ್ಬರ ಹೆಚ್ಚಾಗಿದ್ದು, ಗಂಗಾವತಿ ಪಟ್ಚಣದ ಬೈಪಾಸ್ ರಸ್ತೆ ಜಲಾವೃತವಾಗಿದೆ. ಕಳೆದ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಜಲಾವೃತವಾದ ರಸ್ತೆಯಲ್ಲಿ ಸಂಚರಿಸಲು ಸವಾರರು ಪರದಾಟ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Fri, 7 June 24