ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ
ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಅವ್ಯವಹಾರಿಕ ಹಾಗೂ ಅವೈಜ್ಞಾನಿಕ ಆವಗಿದ್ದು ಈ ಯೋಜನೆಯನ್ನು ಕೂಡಲೆ ಕೈಬಿಡುವಂತೆ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸರ್ಕಾರಕ್ಕೆ ಶಿರಸಿಯಲ್ಲಿ ನಡೆದ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಆಗ್ರಹಿಸಿದೆ.
ಉತ್ತರ ಕನ್ನಡ: ಬೇಡ್ತಿ (Bedti) – ವರದಾ (Varada) ನದಿ ಜೋಡಣೆ ಯೋಜನೆ ಅವ್ಯವಹಾರಿಕ ಹಾಗೂ ಅವೈಜ್ಞಾನಿಕ ಆವಗಿದ್ದು, ಅರಣ್ಯ ಮತ್ತು ವನ್ಯಜೀವಿಗಳಿಗೆ ಆಪತ್ತು ತರಲಿದೆ. ಮಲೆನಾಡಿನ ವನವಾಸಿಗಳು ಮತ್ತು ರೈತರಿಗೆ ಮಾರಕವಾಗಲಿದೆ ಎಂದು ಈ ಯೋಜನೆಯನ್ನು ಕೂಡಲೆ ಕೈಬಿಡುವಂತೆ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸರ್ಕಾರಕ್ಕೆ ಇಂದು ( ಜೂನ್ 14) ರಂದು ಶಿರಸಿಯಲ್ಲಿ ನಡೆದ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಆಗ್ರಹಿಸಿದೆ.
ಸಭೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ಕೈ ಬಿಡಬೇಕು ಹಾಗೂ ಬೇಡ್ತಿ-ವರದಾ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್.) ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಉ.ಕ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರು, ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಬೇಡ್ತಿ -ವರದಾ ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರಕಾರಕ್ಕೆ ಒತ್ತಡ ಹಾಕಬೇಕು ಎಂದು ಅಗ್ರಹಿಸಲಾಯಿತು.
ಕಾಳಿ ಕಣಿವೆಯ ಜನರು ಕಾಳಿ ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಈ ಸಮಾವೇಶ ಕಾಳಿ ಕಣಿವೆಯ ಮಣ್ಣಿನ ಮಕ್ಕಳ ಬೇಡಿಕೆಗೆ ಬೆಂಬಲ ನೀಡುತ್ತದೆ.
ಎತ್ತಿನಹೊಳೆ ನದಿ ತಿರುವು ಬೃಹತ್ ಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣಭಾರತದ ನೀರಿನ ಸುರಕ್ಷತೆಯ ದೃಷ್ಟಿಯಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನದಿ ತಿರುವು, ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬೇಡ್ತಿ ಸಮಾವೇಶ ಆಗ್ರಹಿಸಿದೆ.