ಉತ್ತರ ಕನ್ನಡ: ಜಿಲ್ಲೆಯ ಕಾರವಾರದಲ್ಲಿ ಮುಸ್ಲಿಂ ಸಂಘಟನೆ ಯುವಕರು IPL ಮಾದರಿಯಲ್ಲಿ ನಡೆಸುತ್ತಿರುವ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಇದೀಗ ಧರ್ಮದ ಸಂಘರ್ಷ ತಂದೊಡ್ಡಿದೆ. ಫೆಬ್ರವರಿ 1 ರಿಂದ 5 ನೇ ತಾರೀಕಿನವರೆಗೆ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಮುಸ್ಲಿಂ ಸಂಘಟನೆ ಯುವಕರು ಹಾಗೂ ಯೂತ್ ಕ್ರಿಕೆಟರ್ಸ್ ಕ್ಲಬ್ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ತಂಡದಲ್ಲಿ ಕಡ್ಡಾಯವಾಗಿ ಏಳು ಜನ ಮುಸ್ಲಿಂ ಹಾಗೂ ನಾಲ್ಕು ಜನ ಇತರೆ ಧರ್ಮದವರಿರಬೇಕು ಅಂತಹ ತಂಡಕ್ಕೆ ಮಾತ್ರ ಪಂದ್ಯ ಆಡಲು ಅವಕಾಶ ನೀಡುವುದಾಗಿ ಸಂಘಟನೆ ತನ್ನ ಪ್ರಕಟಣೆಯ ಪೋಸ್ಟರ್ ನಲ್ಲಿ ಪ್ರಕಟಿಸಿತ್ತು.
ಈ ವಿಷಯ ಇದೀಗ ಬಾರಿ ಚರ್ಚೆಯಾಗಿದ್ದು ಸಂಘಟನೆ ಹಾಕಿದ್ದ ನಿಬಂಧನೆಗೆ ವಿರೋಧ ವ್ಯಕ್ತವಾಗಿದ್ದು , ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಫೆ.1 ಕ್ಕೆ ಕ್ರಿಕೆಟ್ ನಡೆಸಲು ಬಿಡುವುದಿಲ್ಲ. ಒಂದು ವೇಳೆ ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಟೀಕೆಗೆ ಗುರಿಯಾದ ನಂತರ ಮುಸ್ಲಿಂ ಆಯೋಜನೆ ಸಂಘಟನೆಯು ಎಲ್ಲಾ ಧರ್ಮದವರಿಗೂ ಅವಕಾಶ ನೀಡಿ ಸೌಹಾರ್ದಯುತವಾಗಿ ನಡೆಸುತ್ತೇವೆ ಸುಮ್ಮನೆ ವಿವಾದ ಹುಟ್ಟು ಹಾಕುವುದು ಬೇಡ. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಈ ಹಿಂದೆಯು ನಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿಸುತ್ತಾ ಬಂದಿದ್ದೆವೆ ಆದರೆ ಈ ವರ್ಷ ಮಾತ್ರ ಇದಕ್ಕೆ ವಿವಾದದ ಬಣ್ಣ ಬಳೆಯುತ್ತಿದ್ದಾರೆ. ನಾವು ನಿಗದಿಯಾದ ದಿನಾಂಕದಂದು ಟೂರ್ನಮೆಂಟ್ ನಡೆಸುತ್ತೆವೆ ಎಂದರು.
ಇನ್ನು ಕಾರವಾರದ YCC ಯಿಂದ ಬಿಡುಗಡೆಯಾದ ಪೋಸ್ಟರ್ನನ್ನು ಆರ್.ಎಸ್.ಎಸ್ ನ ಪಾಂಚಜನ್ಯ ಟ್ಟೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆಟ ಆಡುವ ಟೀಮ್ನಲ್ಲಿ ಏಳು ಜನ ಮುಸ್ಲಿಂ ಆಟಗಾರರು ಅವಶ್ಯವೇ ಎಂದು ಪ್ರಶ್ನಿಸಿದೆ. ಇನ್ನು ಈ ಕುರಿತು ಸ್ಥಳೀಯವಾಗಿ ಸಹ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ವಿಷಯವಾಗಿ ಪಂದ್ಯ ಸಂಘಟಕರು ಸಹ ತಾವು ಧರ್ಮದ ಆಧಾರದಲ್ಲಿ ಮಾಡುತಿಲ್ಲ, ತಮ್ಮ ಸದಸ್ಯರ ತಪ್ಪಿನಿಂದ ಪೋಸ್ಟರ್ ಎಲ್ಲೆಡೆ ಶೇರ್ ಆಗಿದೆ. ನಾನು ಮೊದಲು ಕ್ರಿಕೆಟ್ನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದೆವು, ಆದರೇ ಹಲವು ಟೀಮ್ ಗಳು ನೊಂದಣಿ ಮಾಡಿಕೊಂಡಿದ್ದರಿಂದ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಓಪನ್ ಕ್ರಿಕೆಟ್ ಟೂರ್ನಿಮೆಂಟ್ನ್ನು ಫೆಬ್ರವರಿ ತಿಂಗಳಲ್ಲಿ ನಿಗದಿ ಮಾಡಿದ ದಿನಾಂಕದಂದು ಆಡಿಸುತ್ತೇವೆ ಎಂದಿದ್ದಾರೆ.
ಈ ಟೂರ್ನಮೆಂಟ್‌ಗೆ ಮುಸ್ಲಿಂ ಎಂದು ಹೆಸರು ಇಟ್ಟಿದ್ದೆ ತಪ್ಪು. ಧರ್ಮದ ವಿಷಯದಲ್ಲಿ ಶಾಂತವಾಗಿರುವ ಜಿಲ್ಲೆಯಲ್ಲಿ ಈ ಕ್ರಿಕೆಟ್ ವಿಷಯಕ್ಕೆ ಬೆಂಕಿ ಹಚ್ಚುವ ಕೆಲಸವಾಗಬಾರದು. ನಾವು ಯಾವುದೇ ಕಾರಣಕ್ಕೂ ಈ ಟೂರ್ನಮೆಂಟ್ ನಡೆಸಲು ಬಿಡುವುದಿಲ್ಲ ಒಂದು ವೇಳೆ ನಡೆದರೆ ಪ್ರಜಾಪ್ರಭುತ್ವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತೆವೆ ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಕ್ರಿಕೆಟ್ ಪಂದಾವಳಿಯನ್ನೇ ರದ್ದುಮಾಡಬೇಕು ಇಲ್ಲವಾದರೇ ಧರ್ಮ ಸಂಘರ್ಷಕ್ಕೆ ಕಾರಣವಾಗುತ್ತದೆ ಎನ್ನುವುದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ವಾದವಾದ್ರೆ, ತಮ್ಮ ತಪ್ಪನ್ನು ತಿದ್ದಿಕೊಂಡಿದ್ದೇವೆ ಎನ್ನುತ್ತಾರೆ ಆಯೋಜನೆ ಮಾಡಿದ ಸಂಘಟನೆ. ಆದರೆ ಇದೀಗ ಜಿಲ್ಲಾಡಳಿತಕ್ಕೂ ದೂರು ಹೋಗಿದ್ದು ವಿವಾದಿತ ಕ್ರಿಕೆಟ್ಗೆ ಮತ್ತೆ ಅವಕಾಶ ನೀಡುತ್ತಾ ಅಥವಾ ರದ್ದು ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ