ಕಾರವಾರ ನೌಕಾನೆಲೆ ನಿರ್ಮಾಣವಾಗಿ 30 ವರ್ಷ ಕಳೆದರೂ ನಿರಾಶ್ರಿತರಿಗೆ ಇದುವರೆಗೆ ಸಿಗದ ಪರಿಹಾರ
ಜಿಲ್ಲೆಯ ಜನರು ದೇಶದ ಮಹತ್ತರ ಯೋಜನೆಯಾದ ಕದಂಬ ನೌಕಾನೆಲೆಗೆ ಸುಮಾರು 30ವರ್ಷಗಳ ಹಿಂದೆ ತಮ್ಮ ಮನೆ, ಕೃಷಿ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಇವರಿಗೆ ಇಂದಿಗೂ ಸೂಕ್ತ ಪರಿಹಾರ ದೊರೆಯದೆ ಅಲೆದಾಡುತ್ತಿದ್ದಾರೆ.
ಉತ್ತರ ಕನ್ನಡ: ಏಷಿಯಾದ ಅತೀ ದೊಡ್ಡ ನೌಕಾನೆಲೆ ಸೀಬರ್ಡ್ ಅಥವಾ ಕದಂಬ ನೌಕಾನೆಲೆ ನಿರ್ಮಾಣದ ಯೋಜನೆಗಾಗಿ ಕಾರವಾರದ ಬಿಣಗಾ, ಅರಗಾ, ಮುದುಗಾ, ಚೆಂಡ್ಯಾ, ತೋಡಾರ್, ಹಾರವಾಡ ಅಂಕೋಲಾ ಭಾಗದ ಸಾವಿರಾರು ಜನರು ತಮ್ಮ ಮನೆ, ಕೃಷಿ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರು. ಸಾವಿರಾರು ಎಕರೆ ಪ್ರದೇಶವನ್ನು ಸೀಬರ್ಡ್ ನಿರ್ಮಾಣಕ್ಕಾಗಿ ನೀಡಿದ್ದರು. ಸರಕಾರ ಕೂಡಾ ಅಂದು ಪ್ರತೀ ಗುಂಟೆಗೆ ಕಡಿಮೆ ವೆಚ್ಚ ನಿಗದಿ ಮಾಡಿ ಜಮೀನು ಖರೀದಿಸಿತ್ತು. ಕೆಲವರು ಜಮೀನು ನೀಡಿದ್ರೂ ಮತ್ತೆ ಕೆಲವರಿಗೆ ಈ ಮೌಲ್ಯ ಸಾಕಾಗದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಕೆಲವರಿಗೆ ಗುಂಟೆಗೆ 11,500ರೂ.ನಂತೆ ಪರಿಹಾರ ಕೂಡಾ ದೊರಕಿತ್ತು. ಇನ್ನು ಪರಿಹಾರ ಬಾಕಿಯಿದ್ದ ಕೆಲವರಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಪರಿಹಾರ ಕೂಡಾ ಕೊಡಿಸಿದ್ದರು. ಆದರೆ, ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹೋದವರಿಗೆ ಉತ್ತಮ ಪರಿಹಾರ ದೊರಕಿದ ಕಾರಣ ಸುಮಾರು 100-200 ಕುಟುಂಬಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಆದೇಶ ಈ ಜನರ ಪರವಾಗಿ ಬಂದರೂ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ಥರು ಹೇಳುತ್ತಿದ್ದಾರೆ.
ಇನ್ನು ಸುಮಾರು 30 ವರ್ಷಗಳ ಹಿಂದೆ ನೌಕಾನೆಲೆಗಾಗಿ ಜಮೀನುಗಳನ್ನು ವಶಪಡಿಸಲಾಗಿತ್ತಾದರೂ ಅಂದಿನಿಂದ ಇಂದಿನವರೆಗೆ ಹಲವರಿಗೆ ಪೂರ್ಣ ಪ್ರಮಾಣದ ಪರಿಹಾರ ದೊರಕಿಲ್ಲ. ಈ ಪರಿಹಾರಗಳಿಗಾಗಿ ಹಲವಾರು ಜನರು ಕಾದು– ಕಾದು ಸಾವನ್ನಪ್ಪಿದ್ದು, ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಸಾಕಷ್ಟು ಬಾರಿ ಭೇಟಿ ನೀಡಿ ತಮ್ಮ ಮನವಿಗಳನ್ನು ಸಲ್ಲಿಸಿದರೂ ಪರಿಹಾರ ದೊರಕುವ ಯಾವುದೇ ಕುರುಹುಗಳು ಕಾಣುತ್ತಿಲ್ಲ. ಅಧಿಕಾರಿಗಳು ಸಮಯದಲ್ಲಿ ಕೇಂದ್ರದ ಗಮನಕ್ಕೆ ತರದ ಕಾರಣವೇ ತಾವು ಇಂದಿಗೂ ಪರಿಹಾರಕ್ಕಾಗಿ ಅಲೆಡಾಡುತ್ತಿದ್ದೇವೆ. ನಮಗೆ ಪರಿಹಾರವೂ ದೊರಕಿಲ್ಲ, ಸೀಬರ್ಡ್ ನಿರ್ಮಾಣದ ವೇಳೆ ನೀಡಿದ ಮಾತಿನಂತೆ ಮಕ್ಕಳಿಗೆ ಉದ್ಯೋಗವೂ ದೊರಕಿಲ್ಲ. ಸಾಕಷ್ಟು ಸಾಲಗಳನ್ನು ಮಾಡಿಕೊಂಡು ಬೇರೆಡೆ ಜಮೀನು, ಮನೆಗಳನ್ನು ಮಾಡಿಕೊಂಡಿದ್ದೇವೆ. ಈ ಸಾಲದ ಹೊರೆ ಇಂದಿಗೂ ತಲೆಯ ಸುತ್ತಲೂ ಸುತ್ತುತ್ತಿದೆ. ಕೋರ್ಟ್, ಕಚೇರಿ ಅಲೆದರೂ ಪರಿಹಾರ ದೊರೆಯುವ ಯಾವುದೇ ಕುರುಹು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಜನ.
ಒಟ್ಟಿನಲ್ಲಿ ಇಂದಿಗೂ ನೂರಾರು ಸೀಬರ್ಡ್ ನಿರಾಶ್ರಿತರು ತಮಗೆ ಪರಿಹಾರ ಸಿಕ್ಕಿಲ್ಲವೆಂದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ಪರಿಹಾರಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಪರಿಶೀಲಿಸಿ ಅರ್ಹರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ