ತದಡಿ ಬಂದರಿನಲ್ಲಿ ಹೂಳಿನ ಕಂಟಕ: 2 ಬೋಟು ಮುಳುಗಡೆ, ಲಕ್ಷಾಂತರ ರೂ. ನಷ್ಟ; ಮೀನುಗಾರರ ಆಕ್ರೋಶ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದರಿಂದ ಕಳೆದ ಎರಡು ವಾರಗಳಲ್ಲಿ ಐದು ಬೋಟುಗಳಿಗೆ ಹಾನಿಯಾಗಿದೆ, ಎರಡು ಬೋಟುಗಳು ಸಂಪೂರ್ಣ ಮುಳುಗಿವೆ. ಸಮರ್ಪಕವಾಗಿ ಹೂಳೆತ್ತುವ ಕಾಮಗಾರಿ ನಡೆಯದಿದ್ದುದು ದುರಂತಕ್ಕೆ ಕಾರಣ. ಇದರಿಂದ ಮೀನುಗಾರರು ಭಾರಿ ನಷ್ಟ ಅನುಭವಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತದಡಿ ಬಂದರಿನಲ್ಲಿ ಹೂಳಿನ ಕಂಟಕ: 2 ಬೋಟು ಮುಳುಗಡೆ, ಲಕ್ಷಾಂತರ ರೂ. ನಷ್ಟ; ಮೀನುಗಾರರ ಆಕ್ರೋಶ
ತದಡಿ ಬಂದರು
Edited By:

Updated on: Aug 20, 2026 | 6:11 AM

ಉತ್ತರಕನ್ನಡ, ಆ.20: ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ತದಡಿ ಮೀನುಗಾರಿಕಾ ಬಂದರಿನಲ್ಲಿ ಹೂಳು ತುಂಬಿಕೊಂಡಿರುವ ಸಮಸ್ಯೆಯು ಮೀನುಗಾರರ ಬದುಕಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ರಾಜ್ಯದಲ್ಲಿ ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಋತು ಆರಂಭವಾಗಿದ್ದರೂ, ತದಡಿ ಬಂದರಿನಲ್ಲಿ ಕಳೆದ ಎರಡು ವಾರಗಳ ಅಂತರದಲ್ಲಿ ಐದು ಮೀನುಗಾರಿಕಾ ಬೋಟುಗಳಿಗೆ ಹಾನಿಯಾಗಿದೆ. ಇದರಲ್ಲಿ ಎರಡು ಬೋಟುಗಳು ಸಂಪೂರ್ಣವಾಗಿ ಮುಳುಗಡೆಯಾಗಿ ಮೀನುಗಾರರಿಗೆ ಭಾರಿ ನಷ್ಟವುಂಟಾಗಿದೆ.

ಈ ಅವಘಡಗಳಿಗೆ ಪ್ರಮುಖ ಕಾರಣ, ಬಂದರಿಗೆ ಎಂಟ್ರಿ ಆಗುವ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿರುವುದು. ಮೀನುಗಾರಿಕೆಗೆ ತೆರಳುವ ಅಥವಾ ಹಿಂತಿರುಗುವ ಸಂದರ್ಭದಲ್ಲಿ ಬೋಟುಗಳು ಅಲೆಗಳ ಅಬ್ಬರಕ್ಕೆ ಸಿಲುಕಿ, ಅಳಿವೆ ಭಾಗದಲ್ಲಿರುವ ಮರಳಿನ ದಿಬ್ಬೆಗಳಿಗೆ ಅಪ್ಪಳಿಸುತ್ತವೆ. ಇದರಿಂದ ಬೋಟಿನ ತಳಭಾಗಕ್ಕೆ ಹಾನಿಯಾಗಿ ನೀರು ನುಗ್ಗುತ್ತದೆ. ಪರಿಣಾಮವಾಗಿ ಬೋಟುಗಳು ಮುಳುಗಡೆ ಆಗುತ್ತಿವೆ.

ಅಸಮರ್ಪಕ ಹೂಳೆತ್ತುವ ಕಾಮಗಾರಿ: ಮೀನುಗಾರರ ಆಕ್ರೋಶ

ಪ್ರತಿ ವರ್ಷ ರಾಜ್ಯದ ಕರಾವಳಿಯಾದ್ಯಂತ, ವಿಶೇಷವಾಗಿ ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕೆಲಸಕ್ಕೆ ಕೋಟಿಗಟ್ಟಲೆ ಅನುದಾನವನ್ನು ಮೀಸಲಿಡಲಾಗುತ್ತದೆ. ಕಳೆದ ಬೇಸಿಗೆಯಲ್ಲಿ ತದಡಿ ಬಂದರಿನಲ್ಲಿಯೂ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಆರಂಭವಾದಾಗಿನಿಂದಲೇ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರು. ಗುತ್ತಿಗೆ ವಹಿಸಿಕೊಂಡಿದ್ದ ಕಂಪೆನಿ ಸಮರ್ಪಕವಾಗಿ ಹೂಳನ್ನು ತೆಗೆಯುತ್ತಿಲ್ಲ ಎಂದು ಆರೋಪಿಸಿದ್ದರು. ಮೀನುಗಾರರ ಆಕ್ರೋಶದ ನಡುವೆಯೂ, ಗುತ್ತಿಗೆ ಕಂಪೆನಿ ಕಾಟಾಚಾರಕ್ಕೆ ಒಂದಿಷ್ಟು ಹೂಳನ್ನು ತೆಗೆದು ಸ್ಥಳದಿಂದ ಕಾಲ್ಕಿತ್ತಿತ್ತು. ಇದರ ಪರಿಣಾಮವಾಗಿ, ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆಯೇ ಈಗ ದುರಂತಗಳು ಸಂಭವಿಸಲು ಶುರುವಾಗಿವೆ.

ಇಲ್ಲಿದೆ ನೋಡಿ ವಿಡಿಯೋ:

Boat Accident In Karwar: ತದಡಿ ಮೀನುಗಾರಿಕೆ ಬಂದರಿನಲ್ಲಿ ಬೋಟುಗಳಿಗೆ ಹಾನಿಯಾಗಲು ಕಾರಣ ಏನು? |#TV9D

ಭಾರಿ ಆರ್ಥಿಕ ನಷ್ಟ ಮತ್ತು ಜೀವ ಭಯ

ಒಂದು ಟ್ರಾಲ್ ಬೋಟು ಮುಳುಗಿದರೆ, 15ರಿಂದ 20 ಲಕ್ಷ ರೂಪಾಯಿಗಳಷ್ಟು ನಷ್ಟವಾಗುತ್ತದೆ. ಈಗಾಗಲೇ ಮುಳುಗಿರುವ ಎರಡು ಬೋಟುಗಳಿಂದ ಮೀನುಗಾರರಿಗೆ ಭಾರಿ ನಷ್ಟ ಉಂಟಾಗಿದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆ ಮೀನುಗಾರರಿಂದ ಕೇಳಿಬಂದಿದೆ. ಇದರ ಜೊತೆಗೆ, ಪ್ರತಿ ಬೋಟಿನಲ್ಲಿ ಕನಿಷ್ಠ ನಾಲ್ಕು ಜನ ಮೀನುಗಾರರು ಇರುತ್ತಾರೆ. ಬೋಟು ಮುಳುಗಡೆಯಾದಾಗ, ಪಕ್ಕದಲ್ಲಿದ್ದ ಇತರ ಮೀನುಗಾರರ ಸಹಾಯದಿಂದ ಜೀವಹಾನಿಯಾಗುವುದನ್ನು ತಪ್ಪಿಸಲಾಗಿದೆ. ಆದರೂ, ಇದು ಮೀನುಗಾರರ ಜೀವಕ್ಕೆ ಅಪಾಯವನ್ನುಂಟುಮಾಡುವ ಸಂಗತಿಯಾಗಿದೆ.

ಮುಳುಗಡೆಯಾದ ಎರಡು ಬೋಟುಗಳನ್ನು ದಡಕ್ಕೆ ತರಲು ಸಾಧ್ಯವಾಗಿಲ್ಲ, ಅವು ಸಮುದ್ರದಲ್ಲೇ ಉಳಿದಿವೆ. ಹಾನಿಗೊಳಗಾದ ಮೂರು ಬೋಟುಗಳನ್ನು ಮಾತ್ರ ಕಷ್ಟಪಟ್ಟು ದಡಕ್ಕೆ ತರಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ: 8 ತಿಂಗಳಲ್ಲಿ ಐವರು ಸಾವು; ಮೆಗಾ ಆಪರೇಷನ್ ಶುರು

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೀನುಗಾರರ ಆಕ್ರೋಶ

ಈ ಸಮಸ್ಯೆಯ ಕುರಿತು ಬಂದರು ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಗಮನ ಹರಿಸಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹೂಳೆತ್ತುವ ಕೆಲಸವನ್ನು ಸಮರ್ಪಕವಾಗಿ ನಡೆಸುವಂತೆ ಸೂಚಿಸಬೇಕು. ತದಡಿ ಬಂದರಿನಲ್ಲಿ ಹೂಳು ತೆಗೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಐದು ಬೋಟುಗಳಿಗೆ ಹಾನಿಯಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ, ಕೂಡಲೇ ಹೂಳನ್ನು ತೆಗೆಯುವ ಕೆಲಸವನ್ನು ಗುತ್ತಿಗೆ ಕಂಪೆನಿಯ ಮೂಲಕ ಸಮರ್ಪಕವಾಗಿ ಮಾಡಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 6:02 am, Thu, 20 August 26

Loading...
Unable to load recommendations.
Follow Us