ಅಧಿಕಾರಿಗಳ ನಿರ್ಲಕ್ಷ್ಯ: ಅಭಿವೃದ್ಧಿಯಾಗದ ತೀಳಮಾತಿ ಕಡಲ ತೂಗು ಸೇತುವೆ!

|

Updated on: Mar 01, 2020 | 6:41 PM

ಕಾರವಾರ: ಕಡಲತೀರಕ್ಕೆ ಬಂದು ಅಪ್ಪಳಿಸುತ್ತಿರುವ ಅಲೆಗಳು. ಅಲೆಗಳ ಜೊತೆ ಕಡಲತೀರದ ಅಂದ ಹೆಚ್ಚಿಸಿರುವ ಕಪ್ಪು ಮರಳಿನ ರಾಶಿ. ಕಣ್ಣು ಹಾಯಿಸಿದ ಕಡೆಯೆಲ್ಲಾ ಕಾಣ್ತಿರುವ ಕಪ್ಪು ಮರಳಿಗೆ ಮತ್ತಷ್ಟು ರಂಗು ನೀಡುತ್ತಿರುವ ಕಪ್ಪು ಕಲ್ಲುಗಳು. ಅಬ್ಬಬ್ಬಾ ಈ ದೃಶ್ಯವನ್ನ ನೋಡೋಕೆ ಎಷ್ಟು ಸೊಗಸಾಗಿದೆ ಅಲ್ವಾ. ನಾವು ಸಮುದ್ರದ ದಡದಲ್ಲಿ ಬಿಳಿ ಮರಳನ್ನು ನೋಡಿರ್ತೀವಿ. ಆದ್ರೆ, ವಿಶೇಷವಾಗಿರುವ ಕಪ್ಪು ಮರಳಿನ ರಾಶಿ ತೀಳಮಾತಿ ಕಡಲತೀರದಲ್ಲಿ ಕಾಣಸಿಗುತ್ತೆ. ಈ ತೀಳಮಾತಿ ಕಡಲತೀರ ಇರೋದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋವಾ ಗಡಿ […]

ಅಧಿಕಾರಿಗಳ ನಿರ್ಲಕ್ಷ್ಯ: ಅಭಿವೃದ್ಧಿಯಾಗದ ತೀಳಮಾತಿ ಕಡಲ ತೂಗು ಸೇತುವೆ!
Follow us on

ಕಾರವಾರ: ಕಡಲತೀರಕ್ಕೆ ಬಂದು ಅಪ್ಪಳಿಸುತ್ತಿರುವ ಅಲೆಗಳು. ಅಲೆಗಳ ಜೊತೆ ಕಡಲತೀರದ ಅಂದ ಹೆಚ್ಚಿಸಿರುವ ಕಪ್ಪು ಮರಳಿನ ರಾಶಿ. ಕಣ್ಣು ಹಾಯಿಸಿದ ಕಡೆಯೆಲ್ಲಾ ಕಾಣ್ತಿರುವ ಕಪ್ಪು ಮರಳಿಗೆ ಮತ್ತಷ್ಟು ರಂಗು ನೀಡುತ್ತಿರುವ ಕಪ್ಪು ಕಲ್ಲುಗಳು. ಅಬ್ಬಬ್ಬಾ ಈ ದೃಶ್ಯವನ್ನ ನೋಡೋಕೆ ಎಷ್ಟು ಸೊಗಸಾಗಿದೆ ಅಲ್ವಾ. ನಾವು ಸಮುದ್ರದ ದಡದಲ್ಲಿ ಬಿಳಿ ಮರಳನ್ನು ನೋಡಿರ್ತೀವಿ. ಆದ್ರೆ, ವಿಶೇಷವಾಗಿರುವ ಕಪ್ಪು ಮರಳಿನ ರಾಶಿ ತೀಳಮಾತಿ ಕಡಲತೀರದಲ್ಲಿ ಕಾಣಸಿಗುತ್ತೆ.

ಈ ತೀಳಮಾತಿ ಕಡಲತೀರ ಇರೋದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋವಾ ಗಡಿ ಪ್ರದೇಶವಾದ ಮಾಜಾಳಿ ಗ್ರಾಮದಲ್ಲಿ. ಪ್ರವಾಸಿಗರಿಗೆ ಅಷ್ಟೊಂದು ಪರಿಚಯವಿಲ್ಲದ ತೀಳಮಾತಿ ಕಡಲತೀರಕ್ಕೆ ಮಾಜಾಳಿಯಿಂದ ಗುಡ್ಡವನ್ನ ಹತ್ತಿ ಸುಮಾರು ಅರ್ಧ ಕಿಲೋ ಮೀಟರ್ ನಡೆದು ಸಾಗಬೇಕು. ಆದ್ರೆ ಈ ಕಡಲ ತೀರ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ.

ಅಧಿಕಾರಿಗಳ ನಿರ್ಲಕ್ಷ್ಯ, ಪ್ರಾರಂಭವಾಗದ ತೂಗು ಸೇತುವೆ ಕಾಮಗಾರಿ:
ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ 2014ರಲ್ಲಿ ಕಡಲತೀರದಲ್ಲಿ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಿಸಲು ಹಣ ಮಂಜೂರು ಮಾಡಿದ್ದರು. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿ ಯೋಜನೆ ರೂಪಿಸಲಾಗಿತ್ತು. ಇನ್ನೇನು ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದ್ರೆ ಹಣ ಮಂಜೂರಾಗಿ ಐದು ವರ್ಷ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿಗೂ ಕಾಮಗಾರಿ ಪ್ರಾರಂಭಿಸಿಲ್ಲ. ಇದು ಸ್ಥಳೀಯರು ಮತ್ತು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ತೀಳಮಾತಿ ಕಡಲತೀರದಲ್ಲಿ ಸಾಕಷ್ಟು ಸಿನಿಮಾ ಶೂಟಿಂಗ್ ಸಹ ನಡೆದಿದ್ದು, ನಾನಾ ಭಾಗದಿಂದ ಪ್ರವಾಸಿಗರು ಕಡಲತೀರದತ್ತ ಬರ್ತಾರೆ. ಆದ್ರೆ, ಸರಿಯಾದ ರಸ್ತೆ ಇಲ್ಲದ ಕಾರಣ ತೂಗು ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹಣ ವಾಪಾಸ್ ಹೋಗಿದೆ.

ಒಟ್ಟಾರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ, ತೀಳಮಾತಿ ಕಡಲತೀರ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅಭಿವೃದ್ಧಿ ಕಾಣದಂತಾಗಿದೆ. ಇನ್ನಾದ್ರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಮತ್ತೆ ಕಾಮಗಾರಿಗೆ ಚಾಲನೆ ಕೊಡುವ ಮೂಲಕ ಅಪರೂಪದ ಪ್ರವಾಸಿ ತಾಣವನ್ನು ಉಳಿಸಬೇಕಾಗಿದೆ.